ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಡಲೆಕಾಯಿ ಪರಿಷೆ ಇಂದಿನಿಂದ

Last Updated 19 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನ ಆವರಣ ಮತ್ತು ಸುತ್ತಮುತ್ತಲ ಪ್ರದೇಶ ಸಜ್ಜಾಗಿದೆ. 2 ಸಾವಿರಕ್ಕೂ ಹೆಚ್ಚು ಕಡಲೆಕಾಯಿ ಅಂಗಡಿಗಳು ಬೀಡುಬಿಟ್ಟಿವೆ.

ಭಾನುವಾರದಿಂದ ಮೂರು ದಿನ ಪರಿಷೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಸಂಜೆ ತುಲಾಭಾರ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಿದ್ದಾರೆ. ಪಾರಂಪರಿಕ ಹಿನ್ನೆಲೆ ಇರುವ ಈ ಕಾರ್ಯಕ್ರಮಕ್ಕೆ ಪಾಲಿಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಪಾಲಿಕೆ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಶನಿವಾರ ಸಿದ್ಧತೆ ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಗೆ ವಾಹನಗಳ ನಿಲುಗಡೆಗೆ ತಾತ್ಕಾಲಿಕವಾಗಿ ಎ.ಪಿ.ಎಸ್ ಕಾಲೇಜಿನ ಆಟದ ಮೈದಾನ ಮತ್ತು ಕೊಹಿನೂರು ಆಟದ ಮೈದಾನ ಆಶ್ರಮ ವೃತ್ತದಲ್ಲಿ ಜಾಗ ಕಲ್ಪಿಸಲಾಗಿದೆ. ದೇವರ ದರ್ಶನವನ್ನು ಎಲ್.ಇ.ಡಿ ಮೂಲಕ ಮಾಡಿಸಲು ಅಲ್ಲಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಹಿತಕರ ಚಟುವಟಿಕೆ ನಿಯಂತ್ರಿಸಲು ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಭಕ್ತರಿಗೆ ಮಾರ್ಗದರ್ಶನ ನೀಡಲು ಹೋಂ ಗಾರ್ಡ್ಸ್, ಪೋಲೀಸ್ ಇಲಾಖೆ ಸಿಬ್ಬಂದಿಗೆ ಧ್ವನಿವರ್ಧಕಗಳನ್ನು ಬಳಸಲು ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಮಕ್ಕಳು, ವೃದ್ಧರ ಅನುಕೂಲಕ್ಕಾಗಿ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ. ಸಂಚಾರಕ್ಕೆ ತೊಂದರೆ ಆಗದಂತೆ ಪಾದಚಾರಿ ಮಾರ್ಗಗಳಲ್ಲಿ 2 ಸಾವಿರ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಆಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಮುನ್ನೆಚ್ಚರಿಕೆ ಸಲುವಾಗಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದ್ಯುತ್ ಸರಬರಾಜು ಸಮರ್ಪಕವಾಗಿ ನಿರ್ವಹಿಸಲು ಬೆಸ್ಕಾಂ ಇಲಾಖೆಯಿಂದಲೂ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ 600 ಸಿಬ್ಬಂದಿ ನಿಯೋಜಿಸಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿದಿನ ಸಂಜೆ 6ರಿಂದ 7.30ರವರೆಗೆ ಕಹಳೆ ಬಂಡೆ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೊನೆಯ ದಿನವಾದ ಮಂಗಳವಾರ ನರಸಿಂಹಸ್ವಾಮಿ ಉದ್ಯಾನದಲ್ಲೂ ರಾತ್ರಿ 9.30ರವರೆಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದ್ದಾರೆ.

500 ವರ್ಷಗಳ ಇತಿಹಾಸ
1537ರಲ್ಲಿ ಕೆಂಪೇಗೌಡರು ನಿರ್ಮಾಣ ಮಾಡಿದ್ದ ಈ ಗ್ರಾಮಕ್ಕೆ ಸುಂಕೇನಹಳ್ಳಿ ಎಂಬ ಹೆಸರಿಟ್ಟಿದ್ದರು. ಈ ಗ್ರಾಮದ ರೈತರು ಬೆಳೆದ ಕಡಲೆಕಾಯಿಯ ಮೊದಲ ಫಸಲನ್ನು ದೇವರಿಗೆ ಅರ್ಪಿಸುತ್ತಿದ್ದರು. ಅದು ಸಂಪ್ರದಾಯವಾಗಿ ಬೆಳೆದುಬಂದಿದೆ. 500 ವರ್ಷಗಳಷ್ಟು ಇತಿಹಾಸವಿದ್ದು, ಪರಿಷೆಯಲ್ಲಿ 3 ಲಕ್ಷದಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಅಂದಾಜಿಸಿದೆ.

ಪರಿಷೆಯ ಮುನ್ನಾದಿನವಾದ ಶನಿವಾರ ಬೆಳಿಗ್ಗೆಯಿಂದಲೇ ಬಸವನಗುಡಿ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರ ಕಳೆಕಟ್ಟಿತ್ತು. ಸಂಜೆ ವೇಳೆಗೆ ಸಾವಿರಾರು ಜನ ಭೇಟಿ ನೀಡಿದ್ದರಿಂದ ಜನದಟ್ಟಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT