ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿಗೆ ಬೇಕಿದೆ ಸುಸಜ್ಜಿತ ಕ್ರೀಡಾಂಗಣ

ಶಿಥಿಲಾವಸ್ಥೆಗೆ ತಲುಪಿದ ಪೆವಿಲಿಯನ್ ಕಟ್ಟಡ lಬಿಡಾಡಿ ದನಗಳ ಆಶ್ರಯ ತಾಣ lಮಾಯವಾದ ಸ್ವಚ್ಛತೆ
Last Updated 26 ಮೇ 2018, 11:39 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕ್ರೀಡಾ ಚಟುವಟಿಕೆ ಉತ್ತೇಜಿಸುವ ಸಲುವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯು ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಸಮೀಪ ನಿರ್ಮಿಸಿರುವ ಸಾರ್ವ ಜನಿಕ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ.

ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ಕ್ರೀಡಾಪಟುಗಳ ಪಾಲಿಗೆ ಈಗ ಇದ್ದೂ ಇಲ್ಲದಂತಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಉತ್ತಮ ಕ್ರೀಡಾಂಗಣದ ಕೊರತೆ ಎದ್ದು ಕಾಣುತ್ತಿದೆ.

2003-04 ರಲ್ಲಿ ಶಾಸಕರಾಗಿದ್ದ ಆರಗ ಜ್ಞಾನೇಂದ್ರ ಅವರು ಆರಂಭ ಮಾಡಿದ ಕ್ರೀಡಾಂಗಣದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ಅವರೇ ಶಾಸಕರಾಗಿದ್ದಾರೆ. ₹80 ಲಕ್ಷ ಅನುದಾನದಲ್ಲಿ ಆರಂಭಗೊಂಡ ತಾಲ್ಲೂಕು ಮಟ್ಟದ ಸಾರ್ವಜನಿಕ ಕ್ರೀಡಾಂಗಣ ನಿರ್ಮಾಣದ ಕಾಮಗಾರಿ ಕುಂಟುತ್ತಾ ಸಾಗಿದ್ದರೂ ಪೂರ್ಣ ಪ್ರಮಾಣದ ಕ್ರೀಡಾಂಗಣವಾಗಿ ರೂಪುಗೊಂಡಿಲ್ಲ. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮೀಪದಲ್ಲಿನ ಪಾಳುಬಿದ್ದ ಕೆರೆ ಅಂಗಳದಲ್ಲಿ ಕ್ರೀಡಾಂಗಣ ತಲೆ ಎತ್ತಿದ್ದು, ಕ್ರೀಡಾಂಗಣ ನಿರ್ಮಾಣದ ಕುರಿತು ಸಂಘ ಸಂಸ್ಥೆಗಳು, ಸಾರ್ವಜನಿಕರು ತೋರುತ್ತಿರುವ ಆಸಕ್ತಿ ಹೊರತುಪಡಿಸಿದರೆ ಜನಪ್ರತಿನಿಧಿಗಳು ಕ್ರೀಡಾಂಗಣದ ಅಭಿವೃದ್ಧಿಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡಿರುವ ಪೆವಿಲಿಯನ್ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಬೀಡಾಡಿ ಜಾನುವಾರು, ನಾಯಿಗಳ ಆಶ್ರಯ ತಾಣವಾಗಿದೆ. ಸ್ವಚ್ಛತೆ ಇಲ್ಲದ ಈ ಕಟ್ಟಡದ ನಿರ್ವಹಣೆ ಕುರಿತು ಕ್ರೀಡಾ ಇಲಾಖೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಪೆವಿಲಿಯನ್ ಕಟ್ಟಡ, ಕ್ರೀಡಾ ಸಾಮಗ್ರಿಗಳು, ಕಚೇರಿ, ವಿಶ್ರಾಂತಿ ಗೃಹ, ಶೌಚಾಲಯವನ್ನು ಒಳಗೊಂಡಿದ್ದರೂ ನಿರ್ವಹಣೆ ಇಲ್ಲದಂತಾಗಿದೆ. ಪೆವಿಲಿಯನ್ ಕಟ್ಟಡದ ಮುಂಭಾಗದಲ್ಲಿ ಕ್ರೀಡೆಯನ್ನು ವೀಕ್ಷಣೆಗೆ
ಕುಳಿತುಕೊಳ್ಳಲು ಅಳವಡಿಸಿದ ಮೆಟ್ಟಿಲುಗಳು ಹಾಳಾಗಿವೆ. ಮಳೆಗಾಲದಲ್ಲಿ ಕ್ರೀಡಾಂಗಣದ ಒಳಭಾಗದಲ್ಲಿ ನೀರು ನಿಲ್ಲುವುದರಿಂದ ಕೆಸರಿನಿಂದ ತುಂಬಿಹೋಗಿದೆ. ಆಟದ ಮೈದಾನದ ಸುತ್ತ ಹುಲ್ಲು, ಗಿಡಗಂಟಿಗಳು ಬೆಳೆದು ನಿಂತಿದ್ದು, ಸ್ವಚ್ಛತೆ ಇಲ್ಲದಂತಾಗಿದೆ.

ತಾಲ್ಲೂಕು ಕಚೇರಿ, ಸರ್ವೆ ವಿಭಾಗದಲ್ಲಿ ನಿತ್ಯವೂ ಅನುಭವಿಸುವ ಜನರ ಸಂಕಟ, ಲಂಚ, ಮಧ್ಯವರ್ತಿಗಳ ಹಾವಳಿ, ಸುಳ್ಳು ದಾಖಲೆ ಸೃಷ್ಟಿ, ದಾಖಲೆ ತಿದ್ದುವುದು, ದಾಖಲೆ ಕಳೆದುಕೊಳ್ಳುವುದು ಸೇರಿದಂತೆ ಜನರನ್ನು ವಿನಾಕಾರಣ ಅಲೆಸುವ ಸಿಬ್ಬಂದಿಯನ್ನು ನಿಯಂತ್ರಿಸಬೇಕಾದ ಅಗತ್ಯವಿದೆ. ತಾಲ್ಲೂಕು ಕಚೇರಿಯಲ್ಲಿ ಕೆಲಸ ಆಗುವುದಿಲ್ಲ ಎಂಬ ಕಳಂಕವನ್ನು ದೂರ ಮಾಡಬೇಕಿದೆ.

ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು ವಿಫುಲ ಅವಕಾಶವಿದ್ದು, ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ವಿಶ್ವವಿಖ್ಯಾತ ಆಗುಂಬೆಯ ಸೂರ್ಯಾಸ್ತಮಾನ ಕೇಂದ್ರದಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯದ ಕೊರತೆ ಇದೆ. ಕೊಡಚಾದ್ರಿ, ಹುಂಚಾ, ಕುಂದಾದ್ರಿ, ಮತ್ಸತಾಣ ಸಿಬ್ಬಲುಗುಡ್ಡೆ, ಆರಗ, ಹಣಗೆರೆ, ಕೌಲೇದುರ್ಗ, ನಗರ, ಬಿದನೂರು, ಮಂಡಗದ್ದೆ ಪಕ್ಷಿಧಾಮಗಳು ಸೊರಗುವಂತಾಗಿದ್ದು, ಪ್ರವಾಸಿಗರನ್ನು ಸೆಳೆಯುವಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಆಗಬೇಕು.

ತೀರ್ಥಹಳ್ಳಿ ಪಟ್ಟಣ ತುಂಗಾ ನದಿ ದಡದಲ್ಲಿದ್ದರೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಮುಳಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದೇಶ್ವರ ಬಡಾವಣೆ, ಜಟ್ ಪಟ್ ನಗರ, ಇಂದಿರಾ ನಗರ, ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಡ್ಕಿ, ಇಂದಾವರ, ಆನಂದಗಿರಿ, ಬದನೇಹಿತ್ತಲು, ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಲಾಪುರ, ಕುರುವಳ್ಳಿ, ವಿಠಲನಗರ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸಲು ಶಾಸಕರು ಸಮರ್ಥ ನಾಯಕತ್ವ ತೋರಬೇಕು ಎಂಬುದು ಜನರ ಒತ್ತಾಸೆ.

**
ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ
- ಜ್ಯೋತಿ ಮೋಹನ್, ಜೆಸಿಐ ಉಪಾಧ್ಯಕ್ಷೆ , ತೀರ್ಥಹಳ್ಳಿ

**
ನಗರ ಪ್ರದೇಶಗಳಿಗೆ ಯುವಕರು ವಲಸೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿಗೆ ಕ್ರಮ ತೆಗೆದುಕೊಳ್ಳಬೇಕು. ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕು
- ಶ್ರೀನಂದ ದಬ್ಬಣಗದ್ದೆ, ಮಲ್ನಾಡ್ ಕಸ್ಟ್ರಕ್ಷನ್, ತೀರ್ಥಹಳ್ಳಿ

- ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT