ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯ‘ಭಾರ’: ಸಂಬಳಕ್ಕೆ ಕುತ್ತು

ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆ
Last Updated 17 ನವೆಂಬರ್ 2019, 2:02 IST
ಅಕ್ಷರ ಗಾತ್ರ

ಬೆಂಗಳೂರು: ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ವಾರಕ್ಕೆ 20 ಗಂಟೆ ಅವಧಿಯ ಕಾರ್ಯಭಾರ ಇದ್ದರೆಮಾತ್ರ ವೇತನ ಬಿಡುಗಡೆಗೊಳಿಸಬೇಕು ಎಂಬ ಸುತ್ತೋಲೆಯಿಂದ ಉಪನ್ಯಾಸಕರು ಕಂಗೆಟ್ಟಿದ್ದಾರೆ.

‘2006ರ ಹೊಸ ಶಿಕ್ಷಣ ಕಾಯ್ದೆಯಡಿ ವಾರಕ್ಕೆ 16 ಗಂಟೆಯ ಅವಧಿ ನಿಗದಿಪಡಿಸಲಾಗಿದೆ. ಹೀಗಾಗಿ ಅಲ್ಲಿಂದೀಚೆಗೆ ನೇಮಕಗೊಂಡ ಉಪನ್ಯಾಸಕರಿಗೆ ಈ ನಿಯಮ ಅನ್ವಯವಾಗಲಿ. ಅದಕ್ಕಿಂತ ಮೊದಲು ನೇಮಕಗೊಂಡವರಿಗೆ ಇದನ್ನು ಅನ್ವಯಿಸುವುದು ಎಷ್ಟು ಸರಿ’ ಎಂದು ಹಲವು ಉಪನ್ಯಾಸಕರು ಪ್ರಶ್ನಿಸಿದ್ದಾರೆ.

‘ನೂತನ ಸುತ್ತೋಲೆಯಿಂದಾಗಿ ಮಾತೃ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವ ಉಪನ್ಯಾಸಕರು 20 ಗಂಟೆಗಳ ಕಾರ್ಯಭಾರ ಇಲ್ಲದಿದ್ದರೆ, ಬೇರೆ ಕಾಲೇಜಿಗೆ ಹೋಗಬೇಕಾಗಿದೆ. ಕೆಲವು ಕಾಲೇಜುಗಳು 40ರಿಂದ 80 ಕಿ.ಮೀ.ನಷ್ಟು ದೂರದಲ್ಲಿವೆ.55 ವರ್ಷ ಮೇಲ್ಪಟ್ಟ ಉಪನ್ಯಾಸಕರಿಗೆ ವಾರಕ್ಕೆ ಮೂರು ದಿನ ಅಷ್ಟು ದೂರ ಪ್ರಯಾಣಿಸಿ ಬೋಧನೆ ಮಾಡಲು ಸಾಧ್ಯವಿದೆಯೇ? ಹೀಗಾದರೆ ಎರಡೂ ಕಾಲೇಜುಗಳಲ್ಲಿ ಶಿಕ್ಷಣಮಟ್ಟ ಕುಸಿಯುವ ಅಪಾಯ ಎದುರಾಗಬಹುದು’ ಎಂದು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಆತಂಕ ವ್ಯಕ್ತಪಡಿಸಿದರು.

ಕೆಲವು ಕಾಲೇಜುಗಳಲ್ಲಿ ಆಡಳಿತ ಮಂಡಳಿಯವರು ಅನುದಾನರಹಿತ ವಿಷಯ, ಸಂಯೋಜನೆ ವಿಭಾಗಗಳನ್ನು ತೆರೆದು ಪ್ರಸ್ತುತ ಕಾರ್ಯ
ನಿರ್ವಹಿಸುತ್ತಿರುವಉಪನ್ಯಾಸಕರ ಮೇಲೆ ಒತ್ತಡ ಹಾಕಿ ಕಾಲೇಜುಗಳನ್ನು ನಡೆಸುವ ನಿದರ್ಶನವೂ ಇದೆ. ಎನ್‌ಎಸ್‌ಎಸ್‌, ಕ್ರೀಡೆಯಂತಹ ಹೊಣೆಯನ್ನೂ ಈ ಉಪನ್ಯಾಸಕರು ಹೊರುತ್ತಿದ್ದಾರೆ. ಇಲಾಖೆಯು ಇಂತಹ ಕಾರ್ಯಭಾರ ಪರಿಗಣಿಸುತ್ತಿಲ್ಲ ಎಂಬ ದೂರೂ ಇದೆ.

ಕಾರ್ಯಭಾರ ಹೇಳಿ ಮೋಸ: ಹಲವು ಕಾಲೇಜುಗಳ ಆಡಳಿತ ಮಂಡಳಿಗಳು ಕಾರ್ಯಭಾರದ ನೆಪ ಹೇಳಿ ಸಂಬಳ ಪಡೆಯುತ್ತಿವೆ. ಇನ್ನೊಂದು ಕಾಲೇಜಿಗೆ ನಿಯೋಜಿಸುವುದಾಗಿಯೂಹೇಳಿಕೊಂಡಿವೆ. ಆದರೆ ಹಾಗೆ ಮಾಡದೇ ಇರುವುದಕ್ಕಾಗಿ ಲೆಕ್ಕಪರಿಶೋಧನೆಯ ವೇಳೆ ಬಹಳ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ಈ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಪರಿಷ್ಕರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಕನಗವಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸುತ್ತೋಲೆಯನ್ನು ವಿರೋಧಿಸಲಾಗುವುದು. ಅನುದಾನಿತ ಕಾಲೇಜುಗಳಲ್ಲಿ ಇನ್ನೊಂದು ವಿಭಾಗ ತೆರೆಯುವುದಕ್ಕೆ ಅವಕಾಶ ಕೊಡಲಿ, ಸಮಸ್ಯೆ ಸರಿಹೋಗುತ್ತದೆ
-ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ

ಉ‍‍‍‍ಪನ್ಯಾಸಕರಿಗೆ ತೊಂದರೆ ಕೊಡುವ ಉದ್ದೇಶ ಇಲ್ಲ, ಕಾಲೇಜು ಆಡಳಿತ ಮಂಡಳಿಗಳು ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಿದರೆ ಸಮಸ್ಯೆ ಆಗಲಾರದು
-ಕನಗವಲ್ಲಿ , ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT