ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರಿಗೆ ನಿಶ್ಚಿತ ಆದಾಯ ದೊರೆಯಲಿ’

ಐಕ್ಯ ಹೋರಾಟ ಸಮಿತಿಯಿಂದ ಕೃಷಿ ಕಾಯ್ದೆ ಮಾಹಿತಿ ಕಾರ್ಯಾಗಾರ
Last Updated 20 ಜನವರಿ 2021, 17:52 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದ ಹೊರತು ರೈತರ ಬದುಕು ಉದ್ಧಾರವಾಗುವುದಿಲ್ಲ. ಅವರ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸುವುದರ ಜೊತೆಗೆ ಕನಿಷ್ಠ ಆದಾಯ ಗಳಿಸುವಂತೆ ಸರ್ಕಾರ ಮಾಡಬೇಕು’ ಎಂದು ಕೃಷಿ ತಜ್ಞ ಡಾ. ಟಿ.ಎನ್. ಪ್ರಕಾಶ್‌ ಕಮ್ಮರಡಿ ಹೇಳಿದರು.

‘ನಾವು ಭಾರತೀಯರು’ ಹಾಗು ‘ರೈತ-ದಲಿತ-ಕಾರ್ಮಿಕರ ಐಕ್ಯ ಹೊರಾಟ’ದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಮಸೂದೆಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸುಮಾರು 26 ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಆದರೆ, 23 ಬೆಳೆಗಳಿಗೆ ಅವರು ಖರ್ಚು ಮಾಡಿದ್ದಕ್ಕಿಂತ ಕಡಿಮೆ ವರಮಾನ ಬರುತ್ತದೆ’ ಎಂದರು.

‘ರಾಜ್ಯದ ರೈತರ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದರೂ ಸರ್ಕಾರಕ್ಕೆ ₹11 ಸಾವಿರ ಕೋಟಿ ಮಾತ್ರ ಖರ್ಚಾಗುತ್ತದೆ. ಸರ್ಕಾರಕ್ಕೆ ಇದು ಹೊರೆಯೂ ಎನಿಸುವುದಿಲ್ಲ. ಬದಲಾಗಿ ಮಧ್ಯಾಹ್ನದ ಬಿಸಿಯೂಟ, ಕಾರಾಗೃಹ ಸೇರಿದಂತೆ ಇತರೆ ಸಂಸ್ಥೆಗಳಿಗೆ ಆಹಾರ ಒದಗಿಸಲು ಸರ್ಕಾರ ರೈತರಿಂದಲೇ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು’ ಎಂದು ಸಲಹೆ ನೀಡಿದರು.

ನಾವು ಭಾರತೀಯರು ಸಂಸ್ಥೆಯ ವಿನಯ್ ಶ್ರೀನಿವಾಸ್‌, ‘ಕೇಂದ್ರ ಸರ್ಕಾರದ ಮೂರು ಮತ್ತು ರಾಜ್ಯ ಸರ್ಕಾರ ತಂದಿರುವ ನಾಲ್ಕು ತಿದ್ದುಪಡಿ ಕಾಯ್ದೆಗಳು ರೈತ ವಿರೋಧಿ ಆಗಿವೆ. ಭೂಮಿಯ ಕಾರ್ಪೊರೇಟೀಕರಣ ಮಾಡಲಾಗುತ್ತಿದೆ’ ಎಂದು ದೂರಿದರು.

‘ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಎಲ್ಲ ಕಾಯ್ದೆಗಳು ಆಹಾರ ಭದ್ರತೆಗೆ, ಕೃಷಿಗೆ ಅಪಾಯ ತಂದೊಡ್ಡಲಿವೆ. ಆಹಾರ ವಿತರಣಾ ವ್ಯವಸ್ಥೆಯೂ ಏರುಪೇರಾಗಲಿದೆ’ ಎಂದು ಹೇಳಿದರು.

‘ನಮ್ಮೂರ ಭೂಮಿ ನಮಗಿರಲಿ’ ಆಂದೋಲನದ ವಿ. ಗಾಯತ್ರಿ, ‘ಮೂರು ದಶಕಗಳ ಹಿಂದೆ ಭಾರತವು ವಿಶ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದಾಗಿಂದಲೇ ಕೃಷಿಯ ಖಾಸಗೀಕರಣ ಪ್ರಾರಂಭವಾಯಿತು. ದೇಶದ ಸಾಂಪ್ರದಾಯಿಕ ಕೃಷಿ ಸಣ್ಣ ರೈತರನ್ನು ಆಧರಿಸಿದೆ. ಆದರೆ ಹೊಸ ಕಾಯ್ದೆಗಳನ್ನು ದೊಡ್ಡ ರೈತರನ್ನು ಮಾತ್ರ ಕೇಂದ್ರೀಕರಿಸಿ ರೂಪಿಸಲಾಗಿದೆ. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಅಷ್ಟೊಂದು ಮಹತ್ವ ಸಿಕ್ಕಿಲ್ಲ’ ಎಂದರು.

ಕಾರ್ಯಾಗಾರದಲ್ಲಿ ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಾಮಾರಾಜನಗರ ಮುಂತಾದ ಜಿಲ್ಲೆಗಳಿಂದ‌ ರೈತರು, ವಿದ್ಯಾರ್ಥಿಗಳು ಹಾಗು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT