ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧವಾಗಿದೆ ₹ 289 ಕೋಟಿ ವೆಚ್ಚದ ಕಾರ್ಯಯೋಜನೆ

ನಗರದ ವಾಯು ಗುಣಮಟ್ಟ ಸುಧಾರಣೆ *ನಿರ್ಮಾಣವಾಗಲಿದೆ ಕಮಾಂಡ್‌ ಸೆಂಟರ್‌ * ಕೇಂದ್ರದಿಂದ ₹ 139 ಕೋಟಿ ಮಂಜೂರು
Last Updated 3 ನವೆಂಬರ್ 2020, 19:02 IST
ಅಕ್ಷರ ಗಾತ್ರ

ಬೆಂಗಳೂರು: ವಾಯುಮಾಲಿನ್ಯದ ಮೂಲ ಪತ್ತೆ ಹಚ್ಚಿ ನಗರದ ಗಾಳಿಯ ಗುಣಮಟ್ಟ ಸುಧಾರಣೆ ಮಾಡಲು ಹಾಗೂ ವಾತಾವರಣದ ಗಾಳಿಯ ಗುಣಮಟ್ಟದ ಮೇಲೆ ನಿಗಾ ಇಡಲು ಬಿಬಿಎಂಪಿ ₹ 279 ಕೋಟಿ ವೆಚ್ಚದ ಕಾರ್ಯ ಯೋಜನೆ ಸಿದ್ಧಪಡಿಸಿದೆ.

ವಾಯು ಗುಣಮಟ್ಟಕ್ಕೆ ಸಂಬಂಧಿಸಿದ ಸಮಗ್ರ ದತ್ತಾಂಶಗಳ ಮೇಲೆ ನಿಗಾ ಇಡುವುದಕ್ಕೆ ₹ 44 ಕೋಟಿ ವೆಚ್ಚದಲ್ಲಿ ಹಾಗೂ ಕಸ ವಿಲೇವಾರಿ ಮೇಲೆ ನಿಗಾ ಇಡುವುದಕ್ಕೆ ₹ 22.22 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಕೇಂದ್ರೀಕೃತ ನಿಯಂತ್ರಣ ಮತ್ತು ಕಮಾಂಡ್‌ ಕೇಂದ್ರಗಳನ್ನು (ಸಿಸಿಸಿ) ಸ್ಥಾಪಿಸುವ ಪ್ರಸ್ತಾಪವೂ ಈ ಕಾರ್ಯ ಯೋಜನೆಯಲ್ಲಿದೆ. 15ನೇ ಕೇಂದ್ರ ಹಣಕಾಸು ಆಯೋಗದ ನಿಧಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯವು ಮೊದಲ ಕಂತಿನಲ್ಲಿ ₹ 139 ಕೋಟಿ ಅನುದಾನ ಮಂಜೂರು ಮಾಡಿದೆ.

ವಾಹನಗಳಿಂದ ಹೊಗೆ ಹೊರಸೂಸುವಿಕೆ ಪ್ರಮಾಣ ಪತ್ತೆಗೆ ಕೃತಕ ಬುದ್ಧಿಮತ್ತೆಯನ್ನು ಬಿಬಿಎಂಪಿ ಬಳಸಲಿದೆ. ಈ ಸಲುವಾಗಿಯೇ ಶಬ್ದ ಮಾಪಕಗಳು, ವಾತಾವರಣ ಸೇರುವ ಹೊಗೆಯ ಪ್ರಮಾಣ ಪತ್ತೆ ಹಚ್ಚುವ ಪರಿಕರಗಳು, ರಸ್ತೆಯಲ್ಲಿ ಕಸ ಗುಡಿಸುವ ಯಂತ್ರಗಳು, ನೀರು ಚಮುಕಿಸುವ ಯಂತ್ರಗಳನ್ನು ಖರೀದಿಸಲಿದೆ.

ಕಸ ಸುಡುವುದರಿಂದ ವಾತಾವರಣದ ಗಾಳಿಯ ಮೇಲಾಗುವ ಪ್ರಮಾಣ ಪತ್ತೆ ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮಗಳ ನಿಯಂತ್ರಣ ಕ್ರಮಗಳನ್ನೂ ಈ ಕಾರ್ಯ ಯೋಜನೆ ಒಳಗೊಂಡಿದೆ. ನಗರದ ಹಸಿರೀಕರಣ, ರಸ್ತೆ ಗುಂಡಿ ಮುಚ್ಚುವಿಕೆ, ರಸ್ತೆಗಳನ್ನು ಕತ್ತರಿಸಿದರೆ ಅವುಗಳ ವೈಜ್ಞಾನಿಕವಾಗಿ ದುರಸ್ತಿಪಡಿಸುವ ನಿರ್ದಿಷ್ಟ ಕಾರ್ಯಕ್ರಮಗಳನ್ನು ಬಿಬಿಎಂಪಿ ರೂಪಿಸಲಿದೆ. ವಾಯು ಗುಣಮಟ್ಟದ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಿದೆ.

ರಸ್ತೆಗಳಲ್ಲಿ ವಾಹನ ಸಂಚಾರದ ವೇಳೆ ಪಥ ಶಿಸ್ತು (ಲೇನ್‌ ಡಿಸಿಪ್ಲೀನ್‌) ಕಾಪಾಡುವುದು, ಬಸ್‌ ಬೇಗಳ ನಿರ್ಮಾಣ, ಟೆಂಡರ್‌ಶ್ಯೂರ್‌ ರಸ್ತೆಗಳ ನಿರ್ಮಾಣ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯ ತೆರವು, ಇವುಗಳಿಂದ ಆಗುವ ಮಾಲಿನ್ಯ ಮೇಲೆ ನಿಗಾ ಇಡುವುದೂ ಈ ಯೋಜನೆಯಲ್ಲಿ ಸೇರಿದೆ.

ನಗರದಲ್ಲಿ ಬಿಬಿಎಂಪಿ ಸಹಯೋಗದಲ್ಲಿ 2018ರ ಜುಲೈನಲ್ಲಿ 'ಸಿ40 ನಗರಗಳ ಕಾರ್ಯಾಗಾರ' ಏರ್ಪಡಿಸಲಾಗಿತ್ತು. ಜಗತ್ತಿನ ಪ್ರಮುಖ ಮಹಾನಗರಗಳ ವಾಯು ಗುಣಮಟ್ಟ ಸುಧಾರಣೆ ಕುರಿತು ಸಮಾಲೋಚನೆ ನಡೆದಿತ್ತು.

ಜಂಕ್ಷನ್‌ಗಳಲ್ಲಿ ಕಾರಂಜಿ

ವಾಯು ಮಾಲಿನ್ಯ ನಿಯಂತ್ರಣಕ್ಕೆ ಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ಕಾರಂಜಿ ನಿರ್ಮಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಕಾರಂಜಿಗಳಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಬಳಸುವ ಪ್ರಸ್ತಾಪವನ್ನೂ ಪಾಲಿಕೆ ಹೊಂದಿದೆ.

***

ವಾಯು ಗುಣಮಟ್ಟ ನಿಯಂತ್ರಣ ಯೋಜನೆಯ ಕಾಮಗಾರಿಗಳಿಗೆ ಶೀಘ್ರವೇ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಿದ್ದೇವೆ. ಆ ಬಳಿಕ ಟೆಂಡರ್‌ ಕರೆದು ಯೋಜನೆ ಅನುಷ್ಠಾನಗೊಳಿಸಲಿದ್ದೇವೆ

- ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

***

ಯಾವುದಕ್ಕೆ ಎಷ್ಟು ವೆಚ್ಚ? (₹ ಕೋಟಿಗಳಲ್ಲಿ)

ವಾಯು ಗುಣಮಟ್ಟದ ಮೇಲೆ ಮೇಲೆ ನಿಗಾ ಇಡಲು ಸಿಸಿಸಿ ಸ್ಥಾಪನೆ; 44

ಶಬ್ದ ಮಾಪಕ, ವಾಹನಗಳ ಹೊಗೆ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಕೆ; 8.37

ಕಸ ಗುಡಿಸುವ ಯಂತ್ರ, ನೀರು ಚಮುಕಿಸುವ ಯಂತ್ರ ಖರೀದಿ, ನಿರ್ವಹಣೆ; 50.22

ಕಸ ಸುಡುವುದರ ಮೇಲೆ ನಿಗಾ, ಕಸ ವಿಲೇವಾರಿಗೆ ಸಿಸಿಸಿ ಸ್ಥಾಪನೆ; 22.22

ಹಸಿರೀಕರಣ ಅಭಿಯಾನ; 19.53

ರಸ್ತೆ ಗುಂಡಿ ಮುಚ್ಚುವುದು, ಕತ್ತರಿಸಿದ ರಸ್ತೆ ದುರಸ್ತಿ; 19.53

ವಾಯು ಗುಣಮಟ್ಟದ ಜಾಗೃತಿ ಅಭಿಯಾನ; 13.95

ಸಂಚಾರ ವ್ಯವಸ್ಥೆ ಸುಧಾರಣೆ; 50.22

ಜಂಕ್ಷನ್‌ಗಳಲ್ಲಿ ಕಾರಂಜಿ ನಿರ್ಮಾಣ; 27.90

ಕಟ್ಟಡ ತ್ಯಾಜ್ಯದ ಮಾಲಿನ್ಯ ನಿಯಂತ್ರಣ; 22.32

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT