ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಹಕ್ಕು ರಕ್ಷಣೆಗೆ ದೊಡ್ಡ ಅಂದೋಲನ ಅಗತ್ಯ

ಎಐಟಿಯುಸಿ ಶತಮಾನೋತ್ಸವದಲ್ಲಿ ವಿ. ಅನಂತಸುಬ್ಬರಾವ್ ಪ್ರತಿಪಾದನೆ
Last Updated 31 ಅಕ್ಟೋಬರ್ 2020, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರ್ಮಿಕರ ನ್ಯಾಯಬದ್ಧ ಬೇಡಿಕೆಗಳ ಈಡೇರಿಕೆಗೆ ಮತ್ತು ಕಾರ್ಮಿಕ ವಿರೋಧಿ ಸರ್ಕಾರಗಳ ವಿರುದ್ಧ ದೊಡ್ಡಮಟ್ಟದ ಆಂದೋಲನಗಳು ರೂಪುಗೊಳ್ಳುವ ಅಗತ್ಯವಿದೆ’ ಎಂದು ಎಐಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ವಿ. ಅನಂತಸುಬ್ಬರಾವ್ ಹೇಳಿದರು.

ಆಲ್‌ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌(ಎಐಟಿಯುಸಿ) ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಶತಮಾನೋತ್ಸವ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾರ್ಮಿಕ ಸಂಘಟನೆ ರೂಪುಗೊಂಡು 100 ವರ್ಷ ಕಳೆದಿದೆ. ಆದರೂ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಸಂಘಟಿತ ಹೋರಾಟ ಇನ್ನಷ್ಟು ಗಟ್ಟಿಯಾಗಬೇಕಿದೆ’ ಎಂದು ಅವರು ಹೇಳಿದರು.

‘ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರವು ಕಾರ್ಮಿಕ ಕಾನೂನುಗಳ ಸುಧಾರಣೆ ಹೆಸರಿನಲ್ಲಿ ಕಾರ್ಪೋರೇಟ್ ಬಂಡವಾಳಶಾಹಿಗಳನ್ನು, ಬಹುರಾಷ್ಟ್ರೀಯ ಕಂಪನಿಗಳನ್ನು ಓಲೈಕೆ ಮಾಡುತ್ತಿದೆ. ಅದಕ್ಕಾಗಿ ಕಾರ್ಮಿಕ ಕಾಯ್ದೆಗಳನ್ನು ಸಡಿಲು ಮಾಡಿ ದುಡಿಯುವ ಜನರನ್ನು ಆ ಕಂಪನಿಗಳ ಗುಲಾಮರನ್ನಾಗಿ ಮಾಡಲಾಗುತ್ತಿದೆ. ಇದರ ವಿರುದ್ಧ ಆಂದೋಲನ ನಡೆಯಲೇಬೇಕು’ ಎಂದು ಪ್ರತಿಪಾದಿಸಿದರು.

‘ಕಾರ್ಖಾನೆಗಳ ಕಾರ್ಮಿಕರನ್ನು ಮಾಲೀಕರ ಜೀತದಾಳುಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆ(ಕೋಡ್‌) ರೂಪಿಸಿದೆ. ಕಾಯಂ ನೌಕರರು ಮತ್ತು ‌ಕಾರ್ಮಿಕ ಸಂಘಟನೆಗಳನ್ನು ಮೂಲೆಗುಂಪು ಮಾಡುವುದು ಇದರ ಹಿಂದಿನ ಉದ್ದೇಶ. ಕೋಡ್ ಹೆಸರಿನಲ್ಲಿ ಕಾರ್ಮಿಕರ ಎಲ್ಲಾ ಹಕ್ಕಗಳನ್ನು ಕಸಿದುಕೊಳ್ಳಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಟಿಯುಸಿ ಕಾರ್ಯಾಧ್ಯಕ್ಷ ನಾಯಕ ಎಚ್. ಮಹದೇವನ್ ಮಾತನಾಡಿ, ‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರ್ಮಿಕ ವರ್ಗವನ್ನು ವಿಮೋಚನಾ ಚಳವಳಿ ಮೂಲಕ ಒಟ್ಟುಗೂಡಿಸಲು ಎಐಟಿಯುಸಿ ಪ್ರಮುಖ ಪಾತ್ರ ವಹಿಸಿತು. ಕಾರ್ಮಿಕರ ಶೋಷಣೆಯ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಎಐಟಿಯುಸಿ ಚಳವಳಿಗಳ ಫಲವಾಗಿ ಸಂಘಟಿತ ವಲಯದಲ್ಲಿ ಕಾರ್ಮಿಕರ ಬದುಕು ಸುಧಾರಿಸಲು ಸಾಧ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ನೂರು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕಾರ್ಮಿಕರ ಪರವಾರ ಅನೇಕ ಕಾಯ್ದೆಗಳು ರೂಪುಗೊಂಡಿವೆ. ಆದರೆ, ಈಗ ಆ ಎಲ್ಲಾ ಕಾನೂನುಗಳನ್ನು ನಾಲ್ಕು ಸಂಹಿತೆ(ಕೋಡ್‌) ಮೂಲಕ ಬದಲಿಸಲು ಸರ್ಕಾರ ಹೊರಟಿದೆ. ಕಾರ್ಮಿಕರನ್ನು ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗಿ ತಳ್ಳಲು ಮುಂದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT