ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಬಿಡಲು ಮಧುಪಂಡಿತ್ ದಾಸ್‌ಗೆ ಪತ್ರ

ಇಸ್ಕಾನ್ ಅಕ್ಷಯ ಪಾತ್ರ ಪ್ರತಿಷ್ಠಾನ: ಅಧಿಕಾರ ದುರಪಯೋಗ ಆರೋಪ
Last Updated 23 ನವೆಂಬರ್ 2020, 20:47 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ಷಯ ಪಾತ್ರ ಪ್ರತಿಷ್ಠಾನ ದಲ್ಲಿ ನಡೆದಿದೆ ಎನ್ನಲಾದ ಅಧಿಕಾರ, ಸಂಪನ್ಮೂಲ ದುರುಪಯೋಗ ಮತ್ತು ಲೆಕ್ಕಪತ್ರದಲ್ಲಿ ಬದಲಾವಣೆ ಆರೋಪದ ಕಾರಣ ಪ್ರತಿಷ್ಠಾನದ ಆಡಳಿತ ಸೂತ್ರವನ್ನು ಸ್ವತಂತ್ರ ವ್ಯಕ್ತಿಗಳಿಗೆ ನೀಡಬೇಕು’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಲಹರ್‌ ಸಿಂಗ್‌ ಸಿರೋಯ ಅವರು ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್‌ ದಾಸ್ ಅವರಿಗೆ ಪತ್ರ ಬರೆದಿದ್ದಾರೆ.

‘ಅಕ್ಷಯಪಾತ್ರ ಪ್ರತಿಷ್ಠಾನದ ನಿಮ್ಮ ಮಾಜಿ ಸಹೋದ್ಯೋಗಿಗಳೇ ಈ ಎಲ್ಲ ಆರೋಪಗಳನ್ನು ಮಾಡಿದ್ದಾರೆ. ನಿಮ್ಮ ಬಗ್ಗೆ ಜನರಲ್ಲಿ ಸಂಶಯ ಮೂಡಿರುವುದರಿಂದ, ಸಂಶಯ ಹೋಗಲಾಡಿಸಬೇಕು. ಹೀಗಾಗಿ ಇಸ್ಕಾನ್‌ಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲದ ವ್ಯಕ್ತಿಗಳಿಂದ ತನಿಖೆ ನಡೆಸುವುದು ಸೂಕ್ತ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಮಾಜಿ ಮುಖ್ಯ ವಿಚಕ್ಷಣಾ ಆಯುಕ್ತ ಕೆ.ವಿ.ಚೌಧರಿ ಮತ್ತು ಥರ್ಮಾಕ್ಸ್‌ನ ಸಿಇಒ ಎಂ.ಎಸ್‌.ಉನ್ನಿಕೃಷ್ಣನ್ ಅವರಿಂದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದೀರಿ. ಇವರ ವಿಶ್ವಾಸಾರ್ಹತೆಯ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ. ಆದರೆ, ಇವರು ಪ್ರತಿಷ್ಠಾನದ ಟ್ರಸ್ಟಿಗಳಾಗಿದ್ದಾರೆ. ಇದು ಹಿತಾಸಕ್ತಿಯ ಸಂಘರ್ಷವಾಗುತ್ತದೆ’ ಎಂದು ಲಹರ್‌ ಸಿಂಗ್‌ ತಿಳಿಸಿದ್ದಾರೆ.

‘ಈ ವಿಚಾರದಲ್ಲಿ ಸತ್ಯ ಸಂಗತಿ ಹೊರಬರಬೇಕಾದರೆ, ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ ನ್ಯಾಯಾಧೀಶರ ಸಲಹೆ ಪಡೆದು ನಿಷ್ಪಕ್ಷ ತನಿಖಾ ಸಮಿತಿಯನ್ನು ರಚಿಸಬೇಕು. ಇಲ್ಲವಾದಲ್ಲಿ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಅಥವಾ ಸಿಬಿಐ ತನಿಖೆ ಎದುರಿಸಬೇಕಾದ ಪ್ರಮೇಯವೂ ಒದಗಬಹುದು’ ಎಂದೂ ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT