ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | 76ನೇ ಸ್ವಾತಂತ್ರ್ಯೋತ್ಸವಕ್ಕೆ ಸಕಲ ಸಿದ್ಧತೆ

Published 13 ಆಗಸ್ಟ್ 2023, 23:30 IST
Last Updated 13 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಆ. 15ರಂದು ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳು ಮಾಡಲಾಗಿದೆ.

ಆಕರ್ಷಕ ಪರೇಡ್‌, ಸಾಂಸ್ಕೃತಿಕ ಕಾರ್ಯಕ್ರಮ, ಸೇನಾ ಸಿಬ್ಬಂದಿಯಿಂದ ಮೈನವಿರೇಳಿಸುವ ಮೋಟಾರ್‌ ಬೈಕ್‌ ಸಾಹಸ ಪ್ರದರ್ಶನಕ್ಕೆ ಮಾಣಿಕ್‌ ಷಾ ಪರೇಡ್‌ ಮೈದಾನ ಸಜ್ಜಾಗಿದೆ. ಗಣ್ಯರು, ಸಾರ್ವಜನಿಕರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಂಭ್ರಮ ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ಬೆಳಿಗ್ಗೆ 9 ಗಂಟೆಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಮುಖ್ಯಮಂತ್ರಿ ಅವರು ತೆರೆದ ಜೀಪಿನಲ್ಲಿ ಪರೇಡ್‌ ತುಕಡಿಗಳ ಪರಿವೀಕ್ಷಣೆ ನಡೆಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ’ ಎಂದು ವಿವರಿಸಿದರು.

‘ಪರೇಡ್‌ನಲ್ಲಿ ಬಿಎಸ್‌ಎಫ್‌, ಮಹಿಳಾ ಸಿಆರ್‌ಪಿಎಫ್‌, ಗೋವಾ ಪೊಲೀಸ್‌, ಮಹಿಳಾ ಕೆಎಸ್‌ಆರ್‌ಪಿ, ಕೆಎಸ್‌ಆರ್‌ಪಿ, ಸಿಎಆರ್, ಕೆಎಸ್‌ಐಎಸ್‌ಎಫ್‌, ಎನ್‌ಸಿಸಿ ಸಶಸ್ತ್ರ ತುಕಡಿಗಳು ಹಾಗೂ ಪೊಲೀಸ್‌ ತಂಡಗಳು ಭಾಗವಹಿಸಲಿವೆ. ಹೋಂ ಗಾರ್ಡ್ಸ್‌, ಟ್ರಾಫಿಕ್‌ ವಾರ್ಡನ್‌, ಅಗ್ನಿಶಾಮಕ ದಳ ಸಿಬ್ಬಂದಿ, ಡಾಗ್‌ ಸ್ಕ್ವಾಡ್‌, ರಮಣಶ್ರೀ ಅಂಧರ ಶಾಲೆ ವಿದ್ಯಾರ್ಥಿಗಳು ಮತ್ತು ಸಮರ್ಥನಂ ಅಂಗವಿಕಲ ಮಕ್ಕಳು ಅವರಿಗೆ ಸಾಥ್‌ ನೀಡಲಿದ್ದಾರೆ. ಬ್ಯಾಂಡ್‌ನ 38 ತುಕಡಿಗಳಲ್ಲಿ ಸುಮಾರು 1,350 ಜನ ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗಾಗಿ ಇರುವ ವೀಕ್ಷಣಾ ಗ್ಯಾಲರಿಯನ್ನು ವಿಸ್ತರಿಸಿ ಹೆಚ್ಚು ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜೆ.ಪಿ. ನಗರದ ‍ಪಬ್ಲಿಕ್‌ ಶಾಲೆಯ 750 ಮಕ್ಕಳು ‘ವೀರ ನಮನ’ ಪ್ರಸ್ತುತ ಪಡಿಸಲಿದ್ದಾರೆ. ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳಿಂದ ‘ವೀರಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ’ದ ನೃತ್ಯರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಂದ ರೋಪ್‌ ಸ್ಕಿಪಿಂಗ್, ಎಂ.ಇ.ಜಿ. ತಂಡದಿಂದ ಕಲಾರಿಪಯಟ್ಟು, ಎ.ಎಸ್.ಸಿ ತಂಡದಿಂದ ಟೆಂಟ್‌ ಪೆಗ್ಗಿಂಗ್‌ ಮತ್ತು ಎ.ಎಸ್.ಸಿ ತಂಡದಿಂದ ಬೈಕ್ ಸಾಹಸ ಪ್ರದರ್ಶನ ನೀಡಲಿದ್ದಾರೆ’ ಎಂದು ಹೇಳಿದರು.

ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ಭಾನುವಾರ ನಡೆಯಿತು.

ಸಂಚಾರ ನಿರ್ಬಂಧ

‘15ರಂದು ಬೆಳಿಗ್ಗೆ 8ರಿಂದ 11ರವರೆಗೆ ಕಬ್ಬನ್ ರಸ್ತೆಯಲ್ಲಿ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ್‌ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ್ ಬಿ. ತಿಳಿಸಿದರು. 

‘ಮೈದಾನದ ಸುತ್ತಮುತ್ತ ವಾಹನ ನಿಲುಗಡೆಗೆ ಸ್ಥಳಾವಕಾಶದ ಸಮಸ್ಯೆ ಇರುವುದರಿಂದ ಸಾರ್ವಜನಿಕರು ಬಸ್‌ ಹಾಗೂ ಮೆಟ್ರೊ ಸೇವೆ ಬಳಸಿಕೊಳ್ಳಬೇಕು’ ಎಂದು ಮನವಿ ಮಾಡಿದರು. 

ಬಿಗಿ ಭದ್ರತೆ

ಸ್ವಾತಂತ್ರ್ಯ ದಿನಾಚರಣೆಗೆ ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು ಭದ್ರತೆಗೆ 1786 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ತಿಳಿಸಿದರು. ಒಂಬತ್ತು ಡಿಸಿಪಿ 15 ಎಸಿಪಿ 43 ಪೊಲೀಸ್‌ ಇನ್‌ಸ್ಪೆಕ್ಟರ್‌ 110 ಪಿಎಸ್‌ಐ 72ಎಎಸ್‌ಐ 554 ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ 70 ಮಹಿಳಾ ಪೊಲೀಸ್‌ 157 ಸಾದಾ ಉಡುಪಿನ ಸಿಬ್ಬಂದಿಗಳು ಮತ್ತು 56 ಕ್ಯಾಮರಾ ಸಿಬ್ಬಂದಿಗಳು ಹಾಗೂ 10 ಶಸಸ್ತ್ರ ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ಕಣ್ಗಾವಲಿಗೆ 100 ಸಿ.ಸಿ ಟಿ.ವಿ ಕ್ಯಾಮೆರಾಗಳು ಮೂರು ಬ್ಯಾಗೇಜ್‌ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ’ ಎಂದರು.

ಎಲ್ಲೆಲ್ಲಿ ಪ್ರವೇಶ?

ಗೇಟ್‌-2: ಅತಿಗಣ್ಯ ವ್ಯಕ್ತಿಗಳು ಗಣ್ಯ ವ್ಯಕ್ತಿಗಳು ಸ್ವಾತಂತ್ರ್ಯ ಹೋರಾಟಗಾರರು ರಕ್ಷಣಾ ಇಲಾಖೆ ಅಧಿಕಾರಿ ಪತ್ರಿಕಾ ಪ್ರತಿನಿಧಿಗಳಿಗೆ

ಗೇಟ್‌-3: ಇತರೆ ಎಲ್ಲ ಇಲಾಖೆಯ ಅಧಿಕಾರಿಗಳು ನಿವೃತ್ತ ಸೇನಾಧಿಕಾರಿಗಳು ಬಿಎಸ್‌ಎಫ್‌ ಅಧಿಕಾರಿಗಳಿಗೆ

ಗೇಟ್‌-4: ಸಾರ್ವಜನಿಕರಿಗಾಗಿ

ಧ್ವಜಾರೋಹಣದ ಸಮಯ: ಬೆಳಿಗ್ಗೆ 9

ಅಂಕಿ–ಅಂಶಗಳು

03 ಮಾಣೆಕ್ ಷಾ ಪರೇಡ್ ಮೈದಾನಕ್ಕೆ ಪ್ರವೇಶ ದ್ವಾರಗಳು

38 ಪಥಸಂಚಲನದಲ್ಲಿ ಭಾಗವಹಿಸುವ ತಂಡಗಳು

100 ಮೈದಾನದಲ್ಲಿ ಸಿ.ಸಿ. ಟಿವಿ ಕ್ಯಾಮರಾ

1500 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು

1786 ಭದ್ರತೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆ

ರಮಣಶ್ರೀ ಅಕಾಡೆಮಿಯ ಅಂಧ ಮಕ್ಕಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ರಮಣಶ್ರೀ ಅಕಾಡೆಮಿಯ ಅಂಧ ಮಕ್ಕಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT