ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಹಂಚಿಕೆ: ಆಯುಕ್ತರ ಅನುಮೋದನೆ ಇಲ್ಲದೆಯೇ ಶುದ್ಧ ಕ್ರಯಪತ್ರ ವಿತರಣೆ ಆರೋಪ

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಬದಲಿ ನಿವೇಶನ ಹಂಚಿಕೆ
Last Updated 1 ಫೆಬ್ರುವರಿ 2022, 18:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಉಪ ಕಾರ್ಯದರ್ಶಿ–1 ಆಗಿದ್ದ ಎಂ.ಎಸ್‌.ಎನ್‌.ಬಾಬು ಅವರು ನಿವೇಶನವೊಂದಕ್ಕೆ ಹೈಕೋರ್ಟ್‌ನ ಮಧ್ಯಂತರ ಆದೇಶ ಉಲ್ಲಂಘಿಸಿ ಹಾಗೂಆಯುಕ್ತರ ಅನುಮೋದನೆಯನ್ನೇ ಪಡೆಯದೆ ಶುದ್ಧ ಕ್ರಯಪತ್ರ ಮಾಡಿಕೊಟ್ಟ ಆರೋಪ ಎದುರಿಸುತ್ತಿದ್ದು, ಈ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸುವುದಕ್ಕೆ ಪ್ರಾಧಿಕಾರದ ಆಯುಕ್ತರು ಶಿಫಾರಸು ಮಾಡಿದ್ದಾರೆ.

ಹೊಸೂರು-ಸರ್ಜಾಪುರ ರಸ್ತೆ (ಎಚ್‌ಎಸ್‌ಆರ್‌) ಬಡಾವಣೆಯ ಸೆಕ್ಟರ್-6ರಲ್ಲಿ 50x80 ಅಡಿ ವಿಸ್ತೀರ್ಣದ ನಿವೇಶನ (ಸಂಖ್ಯೆ 626/ಸಿ) ಹಾಗೂ ಇತರ ಸ್ವತ್ತುಗಳಿಗೆ ಸಂಬಂಧಿಸಿದಂತೆ ಬಿಡಿಎ ನೀಡಿರುವ ಹಂಚಿಕೆ ಪತ್ರಗಳನ್ನು ರದ್ದುಗೊಳಿಸುವಂತೆ ಕೋರಿ ಮೆ.ನಿಖಿಲ್ ಕನ್ಸ್ಟ್ರಕ್ಷನ್ಸ್ ಪ್ರೈ.ಲಿಮಿಟೆಡ್‌ ಸಂಸ್ಥೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (ಸಂಖ್ಯೆ:4524/2020) ಸಲ್ಲಿಸಿತ್ತು. ಈ ಪ್ರಕರಣ ಸಂಬಂಧ 2020ರ ಜೂನ್‌ 26ರಂದುಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್‌, ‘ಎಚ್‌ಎಸ್‌ಆರ್‌ ಬಡಾವಣೆಯ ಸೆಕ್ಟರ್‌ 6ರಲ್ಲಿ ನಿವೇಶನ ಸಂಖ್ಯೆ 626/ಸಿಗೆ ಸಂಬಂಧಪಟ್ಟಂತೆ ಮುಂದಿನ ಆದೇಶದವರೆಗೆ ಬಿಡಿಎ ಯಾವುದೇ ಕ್ರಮಕೈಗೊಳ್ಳುವಂತಿಲ್ಲ’ ಎಂದು ಸೂಚಿಸಿತ್ತು.

ಹೈಕೋರ್ಟ್‌ನ ಮಧ್ಯಂತರ ಆದೇಶದ ಹೊರತಾಗಿಯೂ ಉಪಕಾರ್ಯದರ್ಶಿ–1 ವಿಭಾಗದ ಅಧಿಕಾರಿಗಳು ಎಂ.ಬಸವರಾಜ ನಾಯ್ಕ್ ಅವರಿಗೆ ಈ ನಿವೇಶನವನ್ನು ಬದಲಿ ನಿವೇಶನವನ್ನಾಗಿ ಹಂಚಿಕೆ ಮಾಡಿದ್ದರು. ಅದರ ಶುದ್ಧ ಕ್ರಯಪತ್ರವನ್ನು 2020ರ ಮಾರ್ಚ್‌ 3ರಂದು ನೋಂದಾಯಿಸಿಕೊಟ್ಟಿದ್ದರು. ಇದಕ್ಕೆ ಪ್ರಾಧಿಕಾರದ ಆಯುಕ್ತರ ಅನುಮೋದನೆ ಪಡೆದಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ಸಂಸ್ಥೆಯವರು ಬಿಡಿಎ ವಿರುದ್ಧ ನ್ಯಾಯಾಂಗ ನಿಂದನಾ ಮೊಕದ್ದಮೆಯನ್ನೂ ದಾಖಲಿಸಿದ್ದರು.

1984ರ ಬಿಡಿಎ (ನಿವೇಶನಗಳ ಹಂಚಿಕೆ) ನಿಯಮ 6 ಮತ್ತು 14(1)ರ ಪ್ರಕಾರನಿವೇಶನದಾರರಿಗೆ ‘ಗುತ್ತಿಗೆ ಮತ್ತು ಮಾರಾಟ ಒಪ್ಪಂದ ಪತ್ರ’ವನ್ನು ಮೊದಲು ನೋಂದಾಯಿಸಿ ಕೊಡಬೇಕು. 10 ವರ್ಷಗಳ ಗುತ್ತಿಗೆ ಅವಧಿ ಮುಗಿದ ನಂತರವಷ್ಟೇ ಶುದ್ಧ ಕ್ರಯಪತ್ರವನ್ನು‌‌‌‌‌ ನೋಂದಾಯಿಸಿ ಕೊಡಲು ಅವಕಾಶವಿದೆ. ಆದರೆ, ಉಪಕಾರ್ಯದರ್ಶಿ–1 ವಿಭಾಗದವರು ಸರ್ಕಾರದ ಅನುಮತಿ ಇಲ್ಲದೇ ಹಾಗೂ ಮೇಲಧಿಕಾರಿಗಳ ಅನುಮತಿಯನ್ನೂ ಪಡೆಯದೆಯೇ ನಿವೇಶನದಾರರಿಗೆ ನೇರವಾಗಿ ಶುದ್ಧ ಕ್ರಯ ಪತ್ರ ನೋಂದಾಯಿಸಿಕೊಟ್ಟಿದ್ದರು.

ಈ ಕರ್ತವ್ಯ ಲೋಪಕ್ಕಾಗಿ ಪ್ರಾಧಿಕಾರವು ಉಪಕಾರ್ಯದರ್ಶಿ–1 ಆಗಿದ್ದ ಕೆಎಎಸ್‌ ಅಧಿಕಾರಿ ಎಂ.ಎಸ್.ಎನ್.ಬಾಬು ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ದೋಷಾರೋಪಣಾ ಪಟ್ಟಿಯೊಂದಿಗೆ ಸರ್ಕಾರಕ್ಕೆ 2021ರ ಡಿ.7ರಂದು ಪ್ರಸ್ತಾವನೆ ಸಲ್ಲಿಸಿದೆ. ಬಿಡಿಎ ಮೇಲ್ವಿಚಾರಕ ಡಿ.ಅಶ್ವತ್ಥನಾರಾಯಣ ರಾವ್ ಮತ್ತು ಪ್ರಥಮದರ್ಜೆ ಸಹಾಯಕ ಎಸ್.ಮಂಜುನಾಥ್ (ನಿವೃತ್ತರಾಗಿದ್ದಾರೆ) ವಿರುದ್ಧವೂ ಪ್ರಾಧಿಕಾರದಲ್ಲಿ ಇಲಾಖಾ ವಿಚಾರಣೆ ನಡೆಸಲು ದೋಷಾರೋಪಣಾ ಪಟ್ಟಿ ಜಾರಿಗೊಳಿಸಲಾಗಿದೆ. ಅವರ ವಿರುದ್ಧದ ಆರೋಪಗಳ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಂಡಿದೆ.

‘ಈ ಪ್ರಕರಣದಲ್ಲಿ ಎಂ.ಎಸ್.ಎನ್‌ ಬಾಬು ಹಾಗೂ ಅವರ ಕಚೇರಿ ಮೇಲ್ವಿಚಾರಕ ಡಿ.ಅಶ್ವತ್ಥನಾರಾಯಣ ರಾವ್‌ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿದ್ದ ಎಸ್‌.ಮಂಜುನಾಥ್‌ ಅವರು ಕರ್ತವ್ಯ ಲೋಪವೆಸಗಿರುವುದು ಆಂತರಿಕ ತನಿಖೆಯಿಂದ ದೃಢಪಟ್ಟಿದೆ. ಹಾಗಾಗಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆಗೆ ಒಳಪಡಿಸಲು 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17(ಎ) ರನ್ವಯ ಅನುಮತಿ ನೀಡಬಹುದು’ ಎಂದು ಬಿಡಿಎ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಬರೆದ ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT