ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ವಾಪಸ್‌ ಕೊಡಲಾಗದ್ದಕ್ಕೆ ಅಯ್ಯಪ್ಪ ಕೊಲೆ: ಅಂಗೂರ್‌

ಪೊಲೀಸರ ಮುಂದೆ ಹೇಳಿಕೆ ನೀಡಿದ ಸುಧೀರ್‌ ಅಂಗೂರ್‌
Last Updated 1 ನವೆಂಬರ್ 2019, 3:11 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಕೊಡಬೇಕಾದ ಸಾಲಕ್ಕಾಗಿ ಅಯ್ಯಪ್ಪ ದೊರೆ 24 ಗಂಟೆಗಳ ಗಡುವು ನೀಡಿದ್ದರು. ತಕ್ಷಣ ಹಣ ಕೊಡದಿದ್ದರೆ ಅಲಯನ್ಸ್‌ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆನನ್ನ ಸಹೋದರ ಮಧುಕರ್‌ ಅವರನ್ನು ತರುವುದಾಗಿ ಬೆದರಿಕೆ ಹಾಕಿದ್ದರು. ಈ ಕಾರಣಕ್ಕಾಗಿ ಅವರನ್ನು ಕೊಲೆ ಮಾಡುವ ಯೋಜನೆ ಕಾರ್ಯಗತಗೊಳಿಸಿದ್ದೆ’

ಅಲಯನ್ಸ್‌ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಅಲಯನ್ಸ್‌ ವಿವಿ ಕುಲಪತಿ ಸುಧೀರ್‌ ಜಿ. ಅಂಗೂರ್‌,ಹಿರಿಯ ಪೊಲೀಸ್‌ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

‘ನಾನು ಅಯ್ಯಪ್ಪ ದೊರೆ ಅವರಿಂದ ₹ 9 ಕೋಟಿ ಸಾಲ ಪಡೆದಿದ್ದೆ. ಅದರಲ್ಲಿ ₹ 4.5 ಕೋಟಿಯನ್ನು ಚೆಕ್‌ಗಳ ಮೂಲಕ ವಾಪಸ್‌ ಮಾಡಿದ್ದೆ. ಉಳಿದ ಹಣವನ್ನು ಅಕ್ಟೋಬರ್‌ 9ರಂದು ಹಿಂತಿರುಗಿಸುವಂತೆ ಹೇಳಿದ್ದರು. ಬಳಿಕ ಕರೆ ಮಾಡಿದ್ದ ಅಯ್ಯಪ್ಪ 24 ಗಂಟೆಯೊಳಗೆ ಹಣ ಕೊಡದಿದ್ದರೆ ಮಧುಕರ್‌ ಅವರನ್ನು ಕುಲಪತಿ ಸ್ಥಾನಕ್ಕೆ ತರುವುದಾಗಿ ಎಚ್ಚರಿಸಿದ್ದರು’ ಎಂದು ತಿಳಿಸಿದ್ದಾರೆ.

‘ಈ ಕಾರಣಕ್ಕೆ ಅಯ್ಯಪ್ಪ ಅವರನ್ನು ಕೊಲೆ ಮಾಡಲು ಯೋಜನೆ ರೂಪಿಸಿದೆ. ಈ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಸೂರಜ್‌ಗೆ ಹೇಳಿದ್ದೆ. ಅಂತೆಯೇ ಅಯ್ಯಪ್ಪ ಅವರ ಚಲನವಲನದ ಮೇಲೆ ಗಮನ ಇಡುವಂತೆ ಸೂರಜ್‌ಗೆ ತಿಳಿಸಿದ್ದೆ. ನಾನಂದುಕೊಂಡಂತೆ ಕಾರ್ಯಾಚರಣೆ ಚುರುಕುಗೊಂಡಿತು’ ಎಂದಿದ್ದಾರೆ.

‘ನಾನು ಹಣಕಾಸು ವ್ಯವಹಾರದಲ್ಲಿ ದುರ್ಬಲನಾಗಿದ್ದರಿಂದ ಹಣ ವಾಪಸ್‌ ಕೊಡುವ ಶಕ್ತಿ ಇರಲಿಲ್ಲ. ಈ ಕಾರಣಕ್ಕಾಗಿ ಕುಲಪತಿ ಹುದ್ದೆ ನನ್ನ ಕೈತಪ್ಪುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ’ ಎಂದು ಅವರು ವಿವರಿಸಿದ್ದಾರೆ.

‘ಅಯ್ಯಪ್ಪ ದೊರೆ ಬೇರೆ ಬೇರೆ ವ್ಯವಹಾರ ನಡೆಸುತ್ತಿದ್ದುದ್ದರಿಂದ ಕೊಲೆ ಮಾಡಿದರೂ ಸಿಕ್ಕಿಕೊಳ್ಳುವುದಿಲ್ಲ’ ಎಂದು ಭಾವಿಸಿದ್ದೆ. ಅಕ್ಟೋಬರ್‌ 16ರಂದು ಅಯ್ಯಪ್ಪ ದೊರೆ ಅವರನ್ನು ಕೊಲೆ ಮಾಡಲಾಗಿದ್ದು, ಮರು ದಿನ ಅಂದರೆ ಅಕ್ಟೋಬರ್ 17ರಂದು ಸುಧೀರ್‌ ಹಾಗೂ ಸೂರಜ್‌ ಅವರನ್ನು ಬಂಧಿಸಲಾಗಿದೆ. 18ರಂದು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಹಾಜರುಪಡಿಸಿ, ಪೊಲೀಸರ ವಶಕ್ಕೆ ಪಡೆಯಲಾಗಿದೆ.

‘₹ 20 ಸಾವಿರ ಮುಂಗಡ ನೀಡಿದ್ದರು’

ಕೊಲೆ ಆರೋಪಿ ಸೂರಜ್‌ಗೆ ಕೇವಲ ₹ 20 ಸಾವಿರವನ್ನು ಸುಧೀರ್‌ ನೀಡಿದ್ದಾರೆ. ಕೊಲೆಯ ಬಳಿಕ ₹ 20 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದರು. ಈ ಕೆಲಸಕ್ಕಾಗಿ ಐವರ ನೆರವು ಪಡೆಯುವಂತೆ ಸೂಚಿಸಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT