ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಒಬ್ಬರಿಗೆ ಹಂಚಿಕೆಯಾದ ಬದಲಿ ನಿವೇಶನ ಇನ್ನೊಬ್ಬರಿಗೂ ಹಂಚಿಕೆ

ಹಳೆ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಿದ್ದ ಉಪಕಾರ್ಯದರ್ಶಿ–1 ವಿಭಾಗ
Last Updated 2 ಫೆಬ್ರುವರಿ 2022, 19:28 IST
ಅಕ್ಷರ ಗಾತ್ರ

ಬೆಂಗಳೂರು: ಒಬ್ಬ ವ್ಯಕ್ತಿಗೆ ಬದಲಿ ನಿವೇಶನದ ರೂಪದಲ್ಲಿ ಹಂಚಿಕೆಯಾಗಿದ್ದ ನಿವೇಶನವನ್ನು ಯಾವುದೇ ಸೂಚನೆ ನೀಡದೆಯೇ ರದ್ದುಪಡಿಸಿ, ಅದನ್ನು ಇನ್ನೊಬ್ಬ ವ್ಯಕ್ತಿಗೆ ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉಪ ಕಾರ್ಯದರ್ಶಿ –1 ಆಗಿ ಕಾರ್ಯ ನಿರ್ವಹಿಸಿದ್ದ ಇಬ್ಬರು ಕೆಎಎಸ್‌ ಅಧಿಕಾರಿಗಳು ಎದುರಿಸುತ್ತಿದ್ದಾರೆ. ಈ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆಗೆ ಒಳಪಡಿಸಲು ಪ್ರಾಧಿಕಾರವು ಶಿಫಾರಸು ಮಾಡಿದೆ.

ಜಿ.ಗುರುಪ್ರಸಾದ್ ಅವರಿಗೆ ಜೆ.ಪಿ.ನಗರ ಬಡಾವಣೆಯ ಒಂಬತ್ತನೇ ಹಂತದ ಎರಡನೇ ಬ್ಲಾಕ್ ಬಡಾವಣೆಯ 40x60 ಅಡಿ ವಿಸ್ತೀರ್ಣದ ನಿವೇಶನವನ್ನು (ಸಂಖ್ಯೆ 464 ) ಬಿಡಿಎ ಹಂಚಿಕೆ ಮಾಡಿತ್ತು. ಅವರ ಕೋರಿಕೆ ಮೇರೆಗೆ 2006ರಲ್ಲಿ ಎಚ್‌.ಎಸ್.ಆರ್. ಬಡಾವಣೆಯ 6ನೇ ಸೆಕ್ಟರ್‌ನಲ್ಲಿ ಬದಲಿ ನಿವೇಶನವನ್ನು (ಸಂಖ್ಯೆ 553) ಹಂಚಿಕೆ ಮಾಡಲಾಗಿತ್ತು. ಹಳೆಯ ಬಡಾವಣೆಯಲ್ಲಿ ಅವರಿಗೆ ನಿಯಮಬಾಹಿರವಾಗಿ ನಿವೇಶನ ಹಂಚಿಕೆಯಾದ್ದರಿಂದ ನಿವೇಶನ ರದ್ದತಿ ಪತ್ರವನ್ನು ಏಕಪಕ್ಷೀಯವಾಗಿ 2009ರ ಜೂನ್‌ 1 ರಂದು ನೋಂದಾಯಿಸಲಾಗಿದೆ.

ರವಿರಾಜ್ ಅವರಿಗೆ ಬಿ.ಟಿ.ಎಂ. ಬಡಾವಣೆಯ ಆರನೇ ಹಂತದ 2ನೇ ಬ್ಲಾಕ್‌ನಲ್ಲಿ ನಿವೇಶನ (ಸಂಖ್ಯೆ 530) ಹಂಚಿಕೆಯಾಗಿತ್ತು. ಇದನ್ನು ಬದಲಿಸಿ ಎಚ್.ಎಸ್.ಆರ್. ಬಡಾವಣೆಯ 6ನೇ ಸೆಕ್ಟರ್‌ನಲ್ಲಿ ನಿವೇಶನವನ್ನು (ಸಂಖ್ಯೆ 553) ಹಂಚಿಕೆ ಮಾಡಿ 2019ರ ಜ.17 ರಂದು ನೋಂದಾಯಿಸಲಾಗಿದೆ.
ಈ ನಿವೇಶನವನ್ನು ಬಿಡಿಎ ಈ ಹಿಂದೆಯೇ ಗುರುಪ್ರಸಾದ್‌ ಅವರಿಗೆ ಹಂಚಿಕೆ ಮಾಡಿತ್ತು.

ಜಿ.ಗುರುಪ್ರಸಾದ್ ಅವರಿಗೆ ಬಿಡಿಎ ಕಾಯ್ದೆ 1976ರ ನಿಯಮ 11(ಎ)ಗೆ ವಿರುದ್ಧವಾಗಿ ಅದಾಗಲೇ ಅಭಿವೃದ್ಧಿ ಹೊಂದಿದ ಹಳೆಯ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡುವ ಮೂಲಕ ಉಪಕಾರ್ಯದರ್ಶಿ–1 ವಿಭಾಗದ ಅಧಿಕಾರಿಗಳು ಹಾಗೂ ನೌಕರರು ಕರ್ತವ್ಯ
ಲೋಪ ಎಸಗಿರುವುದು ಪ್ರಾಧಿಕಾರವು ನಡೆಸಿದ ಆತಂರಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ.

ಉಪಕಾರ್ಯದರ್ಶೀ–1 ಆಗಿ ಕಾರ್ಯನಿರ್ವಹಿಸಿದ್ದ ಕೆಎಎಸ್‌ ಅಧಿಕಾರಿಗಳಾದ ಚಿದಾನಂದ ಹಾಗೂ ಸುಧಾ, ಅವರ ಕಚೇರಿಯ ಮೇಲ್ವಿಚಾರಕ ಡಿ.ಅಶ್ವತ್ಥನಾರಾಯಣ ರಾವ್ ಹಾಗೂ ಪ್ರಥಮದರ್ಜೆ ಸಹಾಯಕ (ನಿವೃತ್ತರಾಗಿದ್ದಾರೆ) ಎಸ್.ಮಂಜುನಾಥ ಕರ್ತವ್ಯಲೋಪ ಎಸಗಿದ್ದು ಇವರನ್ನು 1988ರ ಭ್ರಷ್ಟಾಚಾರ ತಡೆ ಕಾಯ್ದೆಯ 1988ರ ನಿಯಮ 17(ಎ) ರನ್ವಯ ವಿಸ್ತೃತ ವಿಚಾರಣೆಗೆ ಒಳಪಡಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅನುಮತಿ ನೀಡಬಹುದು ಎಂದು ಬಿಡಿಎ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ 2022ರ ಜ. 5ರಂದು ಅಭಿಪ್ರಾಯ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT