ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಪೋರ್ಟ್‌ ಪರ್ಯಾಯ ರಸ್ತೆಯ ಭಯ

ಕ್ಯಾಬ್‌ಗಳ ರಾತ್ರಿ ಸಂಚಾರಕ್ಕೆ ಪೊಲೀಸರ ನಿರ್ಬಂಧ l ಪ್ರಯಾಣಿಕರಿಗೆ ಬಳ್ಳಾರಿ ರಸ್ತೆಯೇ ಗತಿ
Last Updated 28 ನವೆಂಬರ್ 2019, 7:18 IST
ಅಕ್ಷರ ಗಾತ್ರ

ಬೆಂಗಳೂರು: ಸುಲಿಗೆಕೋರರ ಕಾಟ, ಕಳ್ಳರ ಹಾವಳಿ, ಕುಡುಕರ ಕಿರುಕುಳ, ಕೆಲ ಕ್ಯಾಬ್ ಚಾಲಕರು ಹಾಗೂ ಪ್ರಯಾಣಿಕರ ನಡುವಿನ ಗಲಾಟೆ... ಹಲವು ಅಪರಾಧ ಕೃತ್ಯಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪರ್ಯಾಯ ರಸ್ತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–7ರಲ್ಲಿ (ಬಳ್ಳಾರಿ ರಸ್ತೆ) ದಟ್ಟಣೆ ಸಾಮಾನ್ಯ. ಇಂಥ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಾಗವಾರ ಜಂಕ್ಷನ್‌ನಿಂದ ಬಾಗಲೂರು ಮಾರ್ಗವಾಗಿ ಹಾಗೂ ಹೆಣ್ಣೂರು ಬಂಡೆಯಿಂದ ಬಾಗಲೂರು ಮಾರ್ಗ ವಾಗಿ ವಿಮಾನ ನಿಲ್ದಾಣಕ್ಕೆ ಶುಲ್ಕರಹಿತ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಈ ಎರಡೂ ರಸ್ತೆಯಲ್ಲಿ ಸಂಚರಿಸುವವರಿಗೆ ರಕ್ಷಣೆ ಇಲ್ಲದಂತಾಗಿದೆ.

ಇತ್ತೀಚೆಗೆ ಕ್ಯಾಬ್‌ ಚಾಲಕನೊಬ್ಬ ಪರ್ಯಾಯ ರಸ್ತೆಯಲ್ಲಿ ಕೋಲ್ಕತ್ತದ ಮಹಿಳೆಯನ್ನು ಕೊಲೆ ಮಾಡಿದ್ದ. ಇನ್ನೊಬ್ಬ ಚಾಲಕ, ಮಹಿಳೆಯೊಬ್ಬರನ್ನು ನಿರ್ಜನ ಪ್ರದೇಶದಲ್ಲಿ ನಡುರಾತ್ರಿ ಇಳಿಸಿ ಹೋಗಿದ್ದ. ಕಗ್ಗತ್ತಲಲ್ಲಿ ಒಂಟಿಯಾಗಿ ಸಿಲುಕಿದ್ದ ಮಹಿಳೆ ಪೊಲೀಸರ ನೆರವಿ ನಿಂದ ವಿಮಾನ ನಿಲ್ದಾಣ ತಲುಪಿದ್ದರು.

ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಸಂಜೆ 7ರಿಂದ ಮರುದಿನ ಬೆಳಿಗ್ಗೆ 7ರವರೆಗೆ ಪರ್ಯಾಯ ರಸ್ತೆಯಲ್ಲಿ ಕ್ಯಾಬ್‌ಗಳು ಸಂಚರಿಸಬಾರದು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಚಾಲಕರು, ‘ಕೆಲವರು ಮಾಡಿದ ತಪ್ಪಿಗೆ ಎಲ್ಲ ಚಾಲಕರಿಗೆ ಶಿಕ್ಷೆ ವಿಧಿಸುವುದು ಸರಿಯಲ್ಲ. ರಸ್ತೆಯಲ್ಲಿ ಅಪರಾಧಗಳು ಘಟಿಸದಂತೆ ಸೂಕ್ತ ಭದ್ರತೆ ನೀಡುವತ್ತ ಕಮಿಷನರ್‌ ಗಮನ ಹರಿಸಬೇಕು. ಭದ್ರತೆ ನೀಡಲಾಗದು ಎಂದು ಕೈ ಚೆಲ್ಲಿ ನಿರ್ಬಂಧ ವಿಧಿಸಬಾರದು’ ಎಂದು ಹೇಳಿದರು.

‘ನಸುಕಿನ 4ರಿಂದ ಬೆಳಿಗ್ಗೆ 8ರವರೆಗೆ ಹಾಗೂ ರಾತ್ರಿ 7ರಿಂದ 11ರವರೆಗೆ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಹೆಚ್ಚಿರುತ್ತದೆ. ಈ ಅವಧಿಯಲ್ಲೇ ಕ್ಯಾಬ್‌ಗಳಿಗೆ ಬೇಡಿಕೆ ಇರುತ್ತದೆ. ರಾತ್ರಿ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದರಿಂದ ಅನಿವಾರ್ಯವಾಗಿ ಶುಲ್ಕ ಪಾವತಿಸಿ ಬಳ್ಳಾರಿ ರಸ್ತೆಯಲ್ಲಿ ಓಡಾಡುತ್ತಿದ್ದೇವೆ. ಶುಲ್ಕದ ಹೊರೆ ಪ್ರಯಾಣಿಕರ ಮೇಲೆಯೇ ಬೀಳುತ್ತಿದೆ’ ಎಂದು ಚಾಲಕರು ಹೇಳಿದರು.

ಪೊಲೀಸರೂ ಸುಳಿಯದ ಜಾಗ: ಪರ್ಯಾಯ ರಸ್ತೆಯ ವಾಸ್ತವ ಸ್ಥಿತಿಯನ್ನು ತಿಳಿಯಲು ಹೊರಟಾಗ, ಈ ರಸ್ತೆಯಲ್ಲಿ ಪೊಲೀಸರು ಸುಳಿಯುವುದಿಲ್ಲವೆಂಬ ಮಾಹಿತಿ ಕ್ಯಾಬ್ ಚಾಲಕರಿಂದ ತಿಳಿಯಿತು.

ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯರಸ್ತೆ ಮೂಲಕ ಪರ್ಯಾಯ ರಸ್ತೆ ಆರಂಭವಾಗುತ್ತದೆ. ಸಾರಾಯಿಪಾಳ್ಯ, ರೇವಾ ಕಾಲೇಜು,ನಿರಂತರ ಲೇಔಟ್, ಕಟ್ಟಿಗೇನಹಳ್ಳಿ ಗೇಟ್, ಬಾಗಲೂರು ಹಾಗೂ ಮೈಲನಹಳ್ಳಿ ಮೂಲಕ ವಿಮಾನ ನಿಲ್ದಾಣ ತಲುಪಬಹುದು.

ಸಾರಾಯಿಪಾಳ್ಯ ಹಾಗೂ ರೇವಾ ಕಾಲೇಜು ನಡುವಿನ ರಸ್ತೆಯಲ್ಲೇ ಹೆಚ್ಚಿನ ಅಪರಾಧಗಳು ಘಟಿಸುತ್ತಿವೆ. ರಸ್ತೆ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಹೆಚ್ಚಿದ್ದು, ಅಲ್ಲಿಯೇ ಅಡಗಿ ಕುಳಿತುಕೊಂಡು ಸುಲಿಗೆಕೋರರು ದಾಳಿ ಮಾಡುತ್ತಿದ್ದಾರೆ. ಈ ರಸ್ತೆಯಲ್ಲಿ ಪೊಲೀಸರ ಗಸ್ತು ಇಲ್ಲದಿರುವುದು ಸುಲಿಗೆಕೋರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ ಎಂಬುದು ಸ್ಥಳೀಯರ ಆರೋಪ.

‘ಪರ್ಯಾಯ ರಸ್ತೆ ಹಾಳಾಗಿದೆ. ಕ್ಯಾಬ್‌ಗಳು ನಿಧಾನವಾಗಿ ಚಲಿಸುವಾಗ ಹಾಗೂ ರಸ್ತೆ ಪಕ್ಕದಲ್ಲಿ ಕ್ಯಾಬ್‌ ನಿಲ್ಲಿಸಿ ಚಾಲಕರು ಮೂತ್ರ ವಿಸರ್ಜನೆಗೆ ಹೋದಾಗ ದುಷ್ಕರ್ಮಿಗಳು ದಾಳಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನನ್ನ ಸ್ನೇಹಿತನನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ₹ 3,000 ಹಣ ಕಿತ್ತುಕೊಂಡು ಹೋಗಿದ್ದಾರೆ’ ಎಂದು ಉಬರ್ ಕ್ಯಾಬ್ ಚಾಲಕ ವೇಣುಗೋಪಾಲ್ ಹೇಳಿದರು.

’ಟೋಲ್ ಶುಲ್ಕವನ್ನೂ ಪ್ರಯಾಣಿಕರಿಂದಲೇ ಸಂಗ್ರಹಿಸಲಾಗುತ್ತದೆ. ದಟ್ಟಣೆ ಕಿರಿಕಿರಿ ಇಲ್ಲದೆ ಶುಲ್ಕರಹಿತ
ವಾಗಿ ನಿಲ್ದಾಣದಿಂದ ನಗರಕ್ಕೆ ಪರ್ಯಾಯ ರಸ್ತೆಯಲ್ಲಿ ಹೋಗುವಂತೆ ಪ್ರಯಾಣಿಕರೇ ಒತ್ತಾಯಪಡಿಸುತ್ತಾರೆ’ ಎಂದರು.

ಚಾಲಕ ಹನುಮಂತ, ‘ಟೋಲ್ ಹಣ ಉಳಿಯುತ್ತದೆ ಎಂಬ ಕಾರಣಕ್ಕೆ ಪರ್ಯಾಯ ರಸ್ತೆಯಲ್ಲಿ ಹೋಗುತ್ತೇವೆ. ಈಗ ರಸ್ತೆ ಹದಗೆಟ್ಟಿದ್ದು, ಇಂಥ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ರಸ್ತೆ ಪಕ್ಕದಲ್ಲಿ ಕ್ಯಾಬ್ ನಿಲ್ಲಿಸಿದರೆ, ಬಿಡಿಭಾಗ ಕಳವು ಮಾಡುತ್ತಾರೆ. ಕುಡುಕರ ಗುಂಪು ಸುಖಾಸುಮ್ಮನೇ ಗಲಾಟೆ ಮಾಡಿ ಹಲ್ಲೆ ಮಾಡುತ್ತದೆ’ ಎಂದು ದೂರಿದರು.

‘ಗಸ್ತು ವಾಹನ ನಿಯೋಜಿಸಿ’

‘ಬಹುತೇಕ ಕ್ಯಾಬ್ ಚಾಲಕರು, ದಿನದ ದುಡಿಮೆ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಒಬ್ಬ ಚಾಲಕ ದಿನಕ್ಕೆ ಮೂರು ಬಾರಿ ನಿಲ್ದಾಣಕ್ಕೆ ಹೋಗಿಬರುತ್ತಾನೆ. ಪ್ರತಿ ಬಾರಿಯೂ ಶುಲ್ಕ ಕಟ್ಟಲೇಬೇಕು. ಅದೇ ಪರ್ಯಾಯ ರಸ್ತೆಯಲ್ಲಿ ಹೋದರೆ ಹಣ ಉಳಿಯುತ್ತದೆ’ ಎಂದು ಚಾಲಕರೊಬ್ಬರು ಹೇಳಿದರು.

‘ಪರ್ಯಾಯ ರಸ್ತೆಯಲ್ಲಿ ಪೊಲೀಸ್‌ ಚೌಕಿಯೊಂದನ್ನು ನಿರ್ಮಿಸಬೇಕು. ರಾತ್ರಿ ಹೊತ್ತಿನಲ್ಲಿ ಹೊಯ್ಸಳ ಗಸ್ತು ವಾಹನ ನಿಯೋಜಿಸಬೇಕು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರನ್ನು ಪತ್ತೆ ಮಾಡಿ ಜೈಲಿಗಟ್ಟಬೇಕು. ಆವಾಗಲೇ ಅಪರಾಧಗಳು ಕಡಿಮೆ ಆಗುತ್ತವೆ’ ಎಂದರು.

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪರ್ಯಾಯ ರಸ್ತೆಯಲ್ಲಿ ರಾತ್ರಿ ವೇಳೆ ಕ್ಯಾಬ್‌ಗಳ ಸಂಚಾರ ನಿರ್ಬಂಧಿಸಲಾಗಿದೆ.

-ಭಾಸ್ಕರ್ ರಾವ್ ನಗರ ಪೊಲೀಸ್ ಕಮಿಷನರ್

ರಸ್ತೆಯುದ್ದಕ್ಕೂ ಮೂರು ಬಾರ್‌ಗಳಿವೆ. ಒಂದು ರೇವಾ ಕಾಲೇಜು ಸಮೀಪವೇ ಇದೆ. ಅಲ್ಲಿಯೇ ರಾತ್ರಿ ಮದ್ಯ ಕುಡಿದು ಸುಲಿಗೆಕೋರರು ದಾಳಿ ಮಾಡುತ್ತಿದ್ದಾರೆ.

- ರಾಮಮೂರ್ತಿ, ಉಬರ್ ಕ್ಯಾಬ್ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT