ಬೆಂಗಳೂರು: ನಗರದಲ್ಲಿ ತಿಮಿಂಗಿಲ ವಾಂತಿಯನ್ನು (ಅಂಬಗ್ರಿಸ್) ಮಾರಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಎಸ್.ಜೆ. ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
‘ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಸಂಗ್ರಹಿಸಿದ್ದ ಅಂಬರ್ಗ್ರಿಸ್‌ನ್ನು ಆರೋಪಿಗಳು ನಗರಕ್ಕೆ ತಂದಿದ್ದರು. ಅವರನ್ನು ಬಂಧಿಸಿ, ₹ 20 ಕೋಟಿ ಮೌಲ್ಯದ ಅಂಬರ್ಗ್ರಿಸ್ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಎನ್.ಆರ್.ರಸ್ತೆಯಲ್ಲಿರುವ ವಸತಿಗೃಹವೊಂದರ ಕೊಠಡಿಯಲ್ಲಿ ಉಳಿದುಕೊಂಡಿದ್ದ ಇಬ್ಬರು ಆರೋಪಿಗಳು, ಅಂಬರ್ಗ್ರಿಸ್ ತಂದಿರುವ ಮಾಹಿತಿ ಸಿಕ್ಕಿತ್ತು. ದಾಳಿ ಮಾಡಿದಾಗ ಅವರ ಬಳಿ ಎರಡೂವರೆ ಕೆ.ಜಿ ಅಂಬರ್ಗ್ರಿಸ್ ಪತ್ತೆಯಾಯಿತು. ವಿಚಾರಣೆ ನಡೆಸಿದಾಗ, ಹೊಸಕೋಟೆ ಬಳಿ ಮತ್ತಿಬ್ಬರ ಕಡೆ ಅಂಬರ್ಗ್ರಿಸ್ ಇರುವುದು ಗೊತ್ತಾಯಿತು.’
‘ಹೊಸಕೋಟೆಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ, ಅವರಿಂದ 17 ಕೆ.ಜಿ 500 ಗ್ರಾಂ ತಿಮಿಂಗಿಲ ವಾಂತಿ ಜಪ್ತಿ ಮಾಡಲಾಯಿತು’ ಎಂದೂ ತಿಳಿಸಿವೆ.
‘ತಿಮಿಂಗಿಲಿನ ವಾಂತಿಯನ್ನು ತೇಲಾಡುವ ಚಿನ್ನ ಎನ್ನುತ್ತಾರೆ. ಸುಗಂಧ ದ್ರವ್ಯ ಹಾಗೂ ಮಾದಕವಸ್ತು ತಯಾರಿಕೆಯಲ್ಲಿ ಬಳಸುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಇದನ್ನು ತಿಳಿದುಕೊಂಡ ಆರೋಪಿಗಳು, ಅಕ್ರಮವಾಗಿ ಹಣ ಗಳಿಸಲು ಅಂಬರ್ಗ್ರಿಸ್ ಮಾರಲು ಬಂದಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.