ಶನಿವಾರ, ನವೆಂಬರ್ 28, 2020
19 °C
ಬಿಡಿಎ: ಶುಲ್ಕ ಹೆಚ್ಚಳಕ್ಕೆ ವಿರೋಧ

ಕೋವಿಡ್ ಕಷ್ಟ ಕಾಲದಲ್ಲಿ ಶುಲ್ಕ ಏರಿಕೆ ಬರೆ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಕಾಣಿಸಿಕೊಂಡ ಬಳಿಕ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಂತಹ ಸಂದಿಗ್ಧ ಕಾಲದಲ್ಲೇ ನಾಗರಿಕ ಸೇವೆಗಳ ಶುಲ್ಕವನ್ನು ಬಿಡಿಎ ಹೆಚ್ಚಿಸಿದೆ. 

ಈ ಹಿಂದೆ ಒಮ್ಮೆಗೆ ಶೇ 5ರಿಂದ 10ರಷ್ಟು ಶುಲ್ಕ ಏರಿಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ, ಖಾತಾ ಶುಲ್ಕ, ಫ್ಲ್ಯಾಟ್‌ ಖರೀದಿಯ ಅರ್ಜಿ ಶುಲ್ಕ, ನೋಂದಣಿ ಶುಲ್ಕ, ನಿವೇಶನ ಖರೀದಿ ಅರ್ಜಿ ಶುಲ್ಕ, ಖಾಲಿ ನಿವೇಶನಗಳಿಗೆ ವಿಧಿಸುವ ದಂಡನಾ ಶುಲ್ಕಗಳೆಲ್ಲವನ್ನೂ ಏಕಾಏಕಿ ಶೇ 200ರಿಂದ ಶೇ 250ರಷ್ಟು ಹೆಚ್ಚಿಸಲಾಗಿದೆ. 

ಆ.28ರಂದು ನಡೆದಿದ್ದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಶುಲ್ಕ ಪರಿಷ್ಕರಣೆ ಪ್ರಸ್ತಾಪಕ್ಕೆ ಅನುಮೋದನೆ ಪಡೆಯಲಾಗಿದೆ. ಅ.6ರಿಂದಲೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌, ‘ಬಿಡಿಎ ಶುಲ್ಕಗಳನ್ನು ಪ್ರತಿ ವರ್ಷವೂ ಪರಿಷ್ಕರಣೆ ಮಾಡಬೇಕು. ಆದರೆ, ನಾಲ್ಕು ವರ್ಷಗಳಿಂದ ಈ ಪ್ರಕ್ರಿಯೆ ನಡೆದಿರಲಿಲ್ಲ. ಹಾಗಾಗಿ ಈ ಬಾರಿ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ನಾಲ್ಕು ವರ್ಷಗಳಲ್ಲಿ ಏರಿಕೆ ಆಗದ ಕಾರಣ, ಈಗ ವಿಧಿಸಿದ ಶುಲ್ಕಗಳ ದರ ಹೆಚ್ಚು ಇರುವಂತೆ ಕಾಣಿಸುತ್ತದೆ’ ಎಂದು ಸಮಜಾಯಿಷಿ ನೀಡಿದರು.

‘ಶುಲ್ಕಗಳನ್ನು ಪರಿಷ್ಕರಿಸುವಂತೆ ಸರ್ಕಾರವೂ ಸೂಚನೆ ನೀಡಿತ್ತು’ ಎಂದರು.

‘ಕೊರೊನಾ ಸೋಂಕು ಕಾಣಿಸಿಕೊಂಡು ಜನ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲೇ ಬಿಡಿಎ ವಿವಿಧ ಶುಲ್ಕಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸುತ್ತಾರೆ ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರ ಎಸ್‌.ಶ್ಯಾಮ್‌ ಜುಜಾರೆ.

‘ನಮ್ಮ ಬಡಾವಣೆಯಲ್ಲಂತೂ ಅಗತ್ಯ ಮೂಲಸೌಕರ್ಯಗಳೇ ಇಲ್ಲ. ಸೌಕರ್ಯ ಕಲ್ಪಿಸುವ ಬಗ್ಗೆ ಕಾಳಜಿ ವಹಿಸದ ಬಿಡಿಎ ಶುಲ್ಕ ಪರಿಷ್ಕರಣೆಗೆ ಏಕಿಷ್ಟು ಆತುರ ತೋರಿಸಬೇಕು’ ಎಂದು ಅವರು ಪ್ರಶ್ನಿಸಿದರು.

‘ಬಿಡಿಎ ಫ್ಯ್ಲಾಟ್‌ಗಳನ್ನು ಖರೀದಿಸುವವರೇ ಇಲ್ಲ. ಇನ್ನು ಅದರ ಅರ್ಜಿ ಶುಲ್ಕ ಹೆಚ್ಚಳ ಮಾಡಿ ಏನು ಪ್ರಯೋಜನ. ಖಾತಾ ಶುಲ್ಕ ಹೆಚ್ಚಿಸುವುದಕ್ಕೆ ಅಭ್ಯಂತರ ಇಲ್ಲ’ ಎಂದು ಅರ್ಕಾವತಿ ಬಡಾವಣೆ ನಿವೇಶನದಾರರ ಸಂಘದ ಅಧ್ಯಕ್ಷ ಜಿ.ಶಿವಪ್ರಕಾಶ್‌ ಹೇಳಿದರು. 

‘ಖಾಲಿ ನಿವೇಶನಗಳಿಗೆ ದಂಡ ಹಾಸ್ಯಾಸ್ಪದ’

‘ಖಾಲಿ ನಿವೇಶನಗಳಿಗೆ ದಂಡನಾ ಶುಲ್ಕ ವಿಧಿಸುವ ಪ್ರಸ್ತಾಪವೇ ಹಾಸ್ಯಾಸ್ಪದ’ ಎನ್ನುತ್ತಾರೆ ಜಿ.ಶಿವಪ್ರಕಾಶ್‌.

‘ಅರ್ಕಾವತಿ ಬಡಾವಣೆಯಲ್ಲಿ ಯಾರ ನಿವೇಶನಗಳು ಎಲ್ಲಿವೆ ಎಂಬುದು ಬಿಡಿಎ ಅಧಿಕಾರಿಗಳಿಗೂ ಗೊತ್ತಿಲ್ಲ. ಎಷ್ಟೋ ಕಡೆ ನಿವೇಶನ ಸಂಪರ್ಕಿಸಲು ರಸ್ತೆಯೇ ಇಲ್ಲ, ನೀರಿನ ವ್ಯವಸ್ಥೆ ಇಲ್ಲ. ಅಲ್ಲಿ ಮನೆ ಕಟ್ಟುವುದಾದರೂ ಹೇಗೆ. ಮನೆ ಕಟ್ಟಿಲ್ಲ ಎಂಬ ಕಾರಣಕ್ಕೆ ನಿವೇಶನದಾರರಿಗೆ ದಂಡ ವಿಧಿಸುವುದಕ್ಕೆ ಮೂಲಸೌಕರ್ಯವನ್ನೇ ಕಲ್ಪಿಸದ ಬಿಡಿಎಗೆ ಯಾವ ನೈತಿಕತೆ ಇದೆ’ ಎಂದು ಅವರು ಪ್ರಶ್ನಿಸಿದರು.

‘ಶ್ಯಾಂ ಭಟ್‌ ಆಯುಕ್ತರಾಗಿದ್ದಾಗಲೂ ಖಾಲಿ ನಿವೇಶನಗಳಿಗೆ ಭಾರಿ ದಂಡ ವಿಧಿಸಲು ಬಿಡಿಎ ಮುಂದಾಗಿತ್ತು. ನಾವು ಪ್ರತಿಭಟನೆ ನಡೆಸಿದ ಬಳಿಕ ಈ ಪ್ರಸ್ತಾಪ ಕೈಬಿಟ್ಟಿತ್ತು. ಮತ್ತೆ ಈ ಪ್ರಯತ್ನಕ್ಕೆ ಬಿಡಿಎ ಮುಂದಾದರೆ ಪ್ರತಿಭಟನೆ ಅನಿವಾರ್ಯ’ ಎಂದು ಎಚ್ಚರಿಸಿದರು.

***

ಶುಲ್ಕ ಪರಿಷ್ಕರಣೆ– ಯಾವುದಕ್ಕೆ ಎಷ್ಟು?(₹ಗಳಲ್ಲಿ)

ನಿವೇಶನದ ವಿಸ್ತೀರ್ಣ; ಈಗಿನ ದರ; ಪರಿಷ್ಕೃತ ದರ

20x30 ಅಡಿ; 500; 1 ಸಾವಿರ

30x40 ಅಡಿ; 2 ಸಾವಿರ; 4 ಸಾವಿರ

40x60 ಅಡಿ; 5 ಸಾವಿರ; 10 ಸಾವಿರ 

50x80 ಅಡಿ; 10 ಸಾವಿರ; 20ಸಾವಿರ

50x80 ಅಡಿ ಮೇಲ್ಪಟ್ಟು; 15 ಸಾವಿರ; 30 ಸಾವಿರ 

ಖಾಲಿ ನಿವೇಶನಗಳಿಗೆ ದಂಡನಾ ಶುಲ್ಕ (₹ಗಳಲ್ಲಿ)

ನಿವೇಶನ ವಿಸ್ತೀರ್ಣ; ಈಗಿನ ದರ; ಪರಿಷ್ಕೃತ ದರ; ನಿರ್ವಹಣೆ ಶುಲ್ಕ (ಪ್ರತಿ ತಿಂಗಳಿಗೆ)

20x30 ಅಡಿ; 5 ಸಾವಿರ; 5 ಸಾವಿರ; 100

20x30 ಅಡಿಯಿಂದ 30x40 ಅಡಿವರೆಗೆ;10 ಸಾವಿರ; 15ಸಾವಿರ; 150

30x40 ಅಡಿ; 40ಸಾವಿರ; 60 ಸಾವಿರ; 200

30x40 ಅಡಿಯಿಂದ 40x60 ಅಡಿವರೆಗೆ; 50ಸಾವಿರ; 1.20 ಲಕ್ಷ; 200

40x60 ಅಡಿಯಿಂದ 50x80 ಅಡಿವರೆಗೆ; 2.50 ಲಕ್ಷ; 3.75 ಲಕ್ಷ; 250

50x80 ಅಡಿ ಮೇಲ್ಪಟ್ಟು; 4 ಲಕ್ಷ; 6 ಲಕ್ಷ; 300;

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು