ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ನಗರೋತ್ಥಾನಕ್ಕೆ ₹2,400 ಕೋಟಿ ಸಾಲ!

ಈಗಾಗಲೇ ಅನುಮೋದಿಸಿರುವ ಕಾಮಗಾರಿಗಳಿಗೆ ₹9 ಸಾವಿರ ಕೋಟಿ ಬಿಡುಗಡೆಗೆ ಬಾಕಿ
Last Updated 14 ಜನವರಿ 2022, 4:44 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆ’ ಅಡಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ₹ 6,000 ಕೋಟಿ ವಿಶೇಷ ಅನುದಾನ ಒದಗಿಸಲು ₹2,400 ಕೋಟಿ ಸಾಲ ಪಡೆಯಲು ತೀರ್ಮಾನಿಸಲಾಗಿದೆ.

ಪಾಲಿಕೆಗೆ ವಿಶೇಷ ಅನುದಾನ ಒದಗಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಕಳೆದ ಗುರುವಾರ ಒಪ್ಪಿಗೆ ನೀಡಿತ್ತು. 2021ರ ಆಗಸ್ಟ್‌ 15ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಈ ಯೋಜನೆ ಪ್ರಕಟಿಸಿದ್ದರು. ಯೋಜನೆಯ ಅವಧಿಯನ್ನು ಐದು ವರ್ಷಗಳ ಬದಲಿಗೆ ಮೂರು ವರ್ಷಗಳಿಗೆ ಸೀಮಿತಗೊಳಿಸಿ ಅನುಷ್ಠಾನಕ್ಕೆ ತರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದರು.

ಐದು ವರ್ಷಗಳಲ್ಲಿ ಅನುಷ್ಠಾನಕ್ಕೆ ಸಲಹೆ: ನಗರಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಹಣಕಾಸು ಇಲಾಖೆ, ಯೋಜನೆಯನ್ನು ಮೂರು ವರ್ಷಗಳ ಬದಲು ಐದು ವರ್ಷಗಳಲ್ಲಿ ಅನುಷ್ಠಾನ ಮಾಡಬೇಕು ಎಂದೂ ಸಲಹೆ ನೀಡಿತ್ತು. ರಾಜ್ಯ ಸರ್ಕಾರವು ಪ್ರತಿವರ್ಷ ₹2 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಪಾಲಿಕೆ ಬೇಡಿಕೆ ಇಟ್ಟಿದೆ. ಆದರೆ, ಬೆಂಗಳೂರು ನವ ನಗರೋತ್ಥಾನ ಯೋಜನೆಯಡಿ ಈಗಾಗಲೇ ಅನುಮೋದಿಸಿರುವ ಕಾಮಗಾರಿಗಳಿಗೆ ₹9 ಸಾವಿರ ಕೋಟಿಗಳ ಅನುದಾನ ಬಿಡುಗಡೆ ಬಾಕಿ ಇದೆ. ಹಾಗಾಗಿ, ಈ ‍‍‍ಪ್ರಸ್ತಾವನೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಅನುಷ್ಠಾನಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿತ್ತು.

ಒಟ್ಟು ಯೋಜನಾ ಮೊತ್ತದಲ್ಲಿ ಶೇ 40ರಷ್ಟನ್ನು (₹2,400 ಕೋಟಿ) ಕೆಯುಐಡಿಎಫ್‌ಸಿಯ ‘ಕರ್ನಾಟಕ ವಾಟರ್ ಆ್ಯಂಡ್‌ ಸ್ಯಾನಿಟೈಸೇಷನ್‌ ಪೂಲ್‌ಡ್ ಫಂಡ್‌ ಟ್ರಸ್ಟ್’ನಿಂದ ಸಾಲ ಪಡೆಯಬೇಕು. ಶೇ 10ರಷ್ಟನ್ನು ಬಿಬಿಎಂ‍ಪಿಯ ಸ್ವಂತ ಸಂಪನ್ಮೂಲದಿಂದ ಭರಿಸಬೇಕು ಎಂದು ಹಣಕಾಸು ಇಲಾಖೆ ತಿಳಿಸಿತ್ತು. ರಾಜ್ಯ ಸರ್ಕಾರ ಪ್ರತಿವರ್ಷ ₹1 ಸಾವಿರ ಕೋಟಿಯಂತೆ ₹3 ಸಾವಿರ ಕೋಟಿ ಅನುದಾನ ನೀಡಲಿದೆ. ₹2,400 ಕೋಟಿ ಸಾಲವನ್ನು (ಶೇ 9 ಬಡ್ಡಿ ಪ್ರತ್ಯೇಕ) ಬಿಬಿಎಂಪಿಯೇ ಪಾವತಿಸಬೇಕು.

‘ಪಾಲಿಕೆಗೆ ಕಳೆದ ಕೆಲವು ವರ್ಷಗಳಿಂದ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿರುವ ಮೊತ್ತ ₹1 ಸಾವಿರ ಕೋಟಿಯಷ್ಟು ಮಾತ್ರ. 9 ಸಾವಿರ ಕೋಟಿ ಬಿಡುಗಡೆಗೆ ಬಾಕಿ ಇದೆ. ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ₹1,500 ಕೋಟಿಯನ್ನು ಪಾಲಿಕೆ ಪಾವತಿಸಬೇಕಿದೆ. ಗುತ್ತಿಗೆದಾರರು ಈ ಬಗ್ಗೆ ಹಲವು ಸಲ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಇದೀಗ, ಅಮೃತ ನಗರೋತ್ಥಾನ ಯೋಜನೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಹೊರೆಯನ್ನು ಪಾಲಿಕೆ ಮೇಲೆ ಹಾಕಲು ಮುಂದಾಗಿದೆ’ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ₹7,100 ಕೋಟಿ ಯೋಜನೆಗಳನ್ನು ಪ್ರಕಟಿಸಲಾಯಿತು. ಈಜೀ‍‍ಪುರ ಮೇಲ್ಸೇತುವೆ, ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ, ಪಶ್ಚಿಮ ಕಾರ್ಡ್‌ ರಸ್ತೆಯ ಮೇಲ್ಸೇತುವೆ ಯೋಜನೆಗಳು ಇದರಲ್ಲಿ ಸೇರಿದ್ದವು. ಈ ಯೋಜನೆಗಳು ಐದು ವರ್ಷಗಳು ಕಳೆದರೂ ಪೂರ್ಣವಾಗಿಲ್ಲ. ಕಾಂಗ್ರೆಸ್‌ ಸರ್ಕಾರ ಟೆಂಡರ್‌ ಕರೆದು ಕಾರ್ಯಾದೇಶ ನೀಡಿ ಸ್ವಲ್ಪ ಅನುದಾನ ಬಿಡುಗಡೆ ಮಾಡಿತ್ತು. ಬಳಿಕ ಬಂದ ಸರ್ಕಾರಗಳು ಬೇರೆ ಯೋಜನೆಗಳತ್ತ ಗಮನ ಹರಿಸಿದವು. ಹಾಗಾಗಿ, ಈ ಯೋಜನೆಗಳು ಕುಂಟುತ್ತಾ ಸಾಗಿವೆ. ಅಮೃತ ನಗರೋತ್ಥಾನ ಯೋಜನೆಯ ಸ್ಥಿತಿಯೂ ಇದೇ ರೀತಿ ಆಗದಿದ್ದರೆ ಸಾಕು’ ಎಂದು ಮತ್ತೊಬ್ಬ ಅಧಿಕಾರಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT