ಬುಧವಾರ, ಏಪ್ರಿಲ್ 8, 2020
19 °C

ಬಿಗಿ ಭದ್ರತೆಯಲ್ಲಿ ಅಮೂಲ್ಯಾ ಲಿಯೋನಾ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ್ರೋಹ ಆರೋಪದಡಿ ಬಂಧಿಸಲಾಗಿರುವ ಅಮೂಲ್ಯಾ ಲಿಯೋನಾ (19) ಅವರನ್ನು ನ್ಯಾಯಾಂಗ ಬಂಧನದಿಂದ ಪೊಲೀಸ್‌ ಕಸ್ಟಡಿಗೆ ಪಡೆದು ಬಿಗಿ ಭದ್ರತೆಯಲ್ಲಿ ಬಸವೇಶ್ವರನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು.

ಚಿಕ್ಕಪೇಟೆ ಎಸಿಪಿ ಮಹಾಂತ ರೆಡ್ಡಿ ನೇತೃತ್ವದ ತಂಡ ಅಮೂಲ್ಯಾ ಅವರನ್ನು ವಿಚಾರಣೆ ನಡೆಸುತ್ತಿದೆ. ಪ್ರತಿಭಟನೆ ಆಯೋಜಕರನ್ನು ಈಗಾಗಲೇ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದ್ದು, ಅದರ ಆಧಾರದಲ್ಲೇ ಅಮೂಲ್ಯಾ ಅವರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಮೂಲ್ಯಾ ಈ ಹಿಂದೆ ವಾಸವಾಗಿದ್ದ ರೂಂಗೆ ಕರೆದೊಯ್ದು ಪರಿಶೀಲಿಸಲಾಯಿತು. ಯುವತಿಯ ಹೇಳಿಕೆಯನ್ನು ವಿಡಿಯೊ ರೆಕಾರ್ಡಿಂಗ್‌ ಮಾಡಲಾಗುತ್ತಿದೆ. ಈಕೆ ಪೊಲೀಸರ ವಿಚಾರಣೆಗೆ ಅಸಹಕಾರ ನೀಡುತ್ತಿದ್ದಾರೆ. ಸ್ವಾತಂತ್ರ್ಯ ಉದಾನದ ಬಳಿ ನಡೆದ ಸಭೆಯಲ್ಲಿ ತಾನು ಫೇಸ್‌ಬುಕ್‌ನಲ್ಲಿ ಬರೆದಿರುವುದನ್ನೇ ಮಾತನಾಡಲು ಪ್ರಯತ್ನಿಸಿದೆ. ಆದರೆ, ಅವಕಾಶ ಕೊಡಲಿಲ್ಲ ಎಂದು ಹೇಳಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಗುರುವಾರವೂ ಅಮೂಲ್ಯಾ ವಿಚಾರಣೆ ಮುಂದುವರಿಯಲಿದೆ. ಈಕೆ ವಿಚಾರಣೆಯ ಬಳಿಕ ಪ್ರಕರಣ ಸಂಬಂಧ ಇನ್ನೂ ಕೆಲವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಠಾಣೆ ಗೇಟ್‌ ಬಂದ್‌: ಅಮೂಲ್ಯಾ ವಿಚಾರಣೆ ಹಿನ್ನೆಲೆಯಲ್ಲಿ  ಬಸವೇಶ್ವರ ನಗರ ಠಾಣೆ ಗೇಟ್ ಬಂದ್ ಮಾಡಲಾಗಿತ್ತು. ಸಾರ್ವಜನಿಕರ ಪ್ರವೇಶ ನಿರ್ಭಂಧಿಸಲಾಗಿತ್ತು. ಗೇಟ್‌ನಲ್ಲಿ ಐವರು ಪಿಎಸ್ಐ ಸೇರಿ 15 ಪೊಲೀಸರನ್ನು ನಿಯೋಜಿಸಲಾಗಿತ್ತು. ದೂರು ನೀಡಲು ಬರುವ ಸಾರ್ವಜನಿಕರನ್ನು ಒಳಗೆ ಬಿಡಲಿಲ್ಲ. ಗುರುವಾರ ಬರುವಂತೆ ಹೇಳಿ ವಾಪಸ್‌ ಕಳುಹಿಸಲಾಯಿತು.

'ನಮ್ಮ ಕಷ್ಟ ಹೇಳಿಕೊಳ್ಳಲು ಬಂದರೆ ಠಾಣೆಯೊಳಗೆ ಬಿಡುತ್ತಿಲ್ಲ. ಅಮೂಲ್ಯಾಳಿಗಾಗಿ ಠಾಣೆ ಪ್ರವೇಶವನ್ನೇ ನಿರ್ಬಂಧಿಸಿರುವುದು ಖಂಡನೀಯ' ಎಂದು ಸ್ಥಳೀಯರೊಬ್ಬರು ದೂರಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆದ ಪ್ರತಿಭಟನಾ ಸಭೆಯ ವೇಳೆ ಅಮೂಲ್ಯಾ ಪಾಕ್‌ ಪರ ಘೋಷಣೆ ಕೂಗಿದ್ದರು. ಆನಂತರ ಅವರನ್ನು ವೇದಿಕೆಯಲ್ಲಿ ಎಳೆದಾಡಲಾಗಿತ್ತು. ಕೈಯಿಂದ ಮೈಕ್‌ ಕಸಿದು
ಕೊಳ್ಳಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)