ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಿಡೆನ್ಸಿ ರಸ್ತೆ ದಟ್ಟಣೆ: ಬೀಗ ಹಾಕಿ ಪೊಲೀಸರ ಜೊತೆ ವಾಗ್ವಾದ

Last Updated 25 ನವೆಂಬರ್ 2022, 19:53 IST
ಅಕ್ಷರ ಗಾತ್ರ

ಬೆಂಗಳೂರು: ರೆಸಿಡೆನ್ಸಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಸಮಸ್ಯೆ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಹೋಗಿದ್ದ ಸಂಚಾರ ಪೊಲೀಸರ ಜೊತೆ ಬಿಷಪ್ ಕಾಟನ್ ಶಾಲೆ ಸಿಬ್ಬಂದಿ ವಾಗ್ವಾದ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.

ಶಾಂತಿನಗರ ಜೋಡು ರಸ್ತೆಯ ಮಿಷನ್ ರಸ್ತೆ ಹಾಗೂ ರಿಚ್ಮಂಡ್ ವೃತ್ತಕ್ಕೆ ಹೊಂದಿಕೊಂಡಿರುವ ರೆಸಿಡೆನ್ಸಿ ರಸ್ತೆಯಲ್ಲಿ ಬಿಷಪ್ ಕಾಟನ್ ಬಾಲಕರ ಹಾಗೂ ಬಾಲಕಿಯರ ಪ್ರತ್ಯೇಕ ಶಾಲೆಗಳಿವೆ. ಶಾಲೆಗಳಿಗೆ ಮಕ್ಕಳನ್ನು ಬಿಡಲು ಬರುವ ಪೋಷಕರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಆಂಬುಲೆನ್ಸ್ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕುರಿತು ‘ಪ್ರಜಾವಾಣಿ’ಯು ಸೆಪ್ಟೆಂಬರ್ 21ರಂದು ‘ಶಾಲಾ ವಲಯ ದಟ್ಟಣೆ ತಾಪತ್ರಯ’ ಶೀರ್ಷಿಕೆಯಡಿ ವರದಿಗಳನ್ನು ಪ್ರಕಟಿಸಿತ್ತು.

‘ಶಾಲೆಯೊಳಗೆ ದೊಡ್ಡ ಮೈದಾನವಿದೆ. ಖಾಸಗಿ ಹಾಗೂ ಪೋಷಕರ ವಾಹನಗಳನ್ನು ಮೈದಾನದೊಳಗೆ ಬಿಡಲು ಶಾಲೆ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಇದುವೇ ದಟ್ಟಣೆಗೆ ಪ್ರಮುಖ ಕಾರಣ’ ಎಂಬ ಆರೋಪವಿದೆ.

ಪೊಲೀಸರಿಗೇ ಬೆದರಿಕೆ: ರೆಸಿಡೆನ್ಸಿ ರಸ್ತೆಯಲ್ಲಿ ಶುಕ್ರವಾರ ಕರ್ತವ್ಯದಲ್ಲಿದ್ದ ಪೊಲೀಸರು, ‘ಮಕ್ಕಳನ್ನು ಕರೆತರುವ ವಾಹನಗಳಿಗೆ ಮೈದಾನದೊಳಗೆ ಪ್ರವೇಶ ಕಲ್ಪಿಸಿ’ ಎಂದು ಸಿಬ್ಬಂದಿಯನ್ನು ಕೋರಿದರು.

ಅಷ್ಟಕ್ಕೆ ಕೋಪಗೊಂಡ ಸಿಬ್ಬಂದಿ, ಮೈದಾನದ ಪ್ರವೇಶ ದ್ವಾರಗಳನ್ನು ದಿಢೀರ್ ಬಂದ್ ಮಾಡಿದರು. ‘ಮೈದಾನ ದೊಳಗೆ ವಾಹನ ಬಿಡುವುದಿಲ್ಲ. ನೀವು ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ. ಕಾನೂನಿನ ಪ್ರಕಾರ ನಿಮಗೂ (ಪೊಲೀಸರು) ಶಾಲೆಯೊಳಗೆ ‍ಪ್ರವೇಶವಿಲ್ಲ’ ಎಂದು ಪೊಲೀಸರನ್ನೇ ಬೆದರಿಸಿದರು. ಇನ್‌ಸ್ಪೆಕ್ಟರ್ ಸ್ಥಳಕ್ಕೆ ಬಂದರೂ ಸಿಬ್ಬಂದಿ ಕ್ಯಾರೆ ಎನ್ನಲಿಲ್ಲ.

ಸಿಬ್ಬಂದಿ ವರ್ತನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶಾಲೆ ಆಡಳಿತ ಮಂಡಳಿ ಸದಸ್ಯರು ಲಭ್ಯರಾಗಲಿಲ್ಲ.

ನೋಟಿಸ್ ಕೊಟ್ಟರೂ ಸುಧಾರಿಸಿಲ್ಲ: ‘ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ರೆಸಿಡೆನ್ಸಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚು. ಶಾಲೆಗಳ ವರ್ತನೆಯಿಂದ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ. ಶಾಲೆಯೊಳಗೆ ಜಾಗವಿದ್ದರೂ ಮಕ್ಕಳ ಪೋಷಕರ ವಾಹನಗಳನ್ನು ಒಳಗೆ ಬಿಡುತ್ತಿಲ್ಲ. ಈ ಸಂಬಂಧ ಹಲವು ಬಾರಿ ನೋಟಿಸ್‌ ನೀಡಿದರೂ ಶಾಲೆಯವರು ಸುಧಾರಿಸಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT