ಬೆಂಗಳೂರು: ಆತ್ಯಾಧುನಿಕ ವಾಹನಗಳು, ಅವುಗಳ ಬಿಡಿಭಾಗಗಳ ಆಕರ್ಷಕ ಪ್ರದರ್ಶನವು ನೋಡುಗರ ಮನಸೂರೆಗೊಂಡಿತು.
ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಬಸ್ ಆ್ಯಂಡ್ ಕಾರ್ ಆಪರೇಟರ್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾ (ಬಿಒಸಿಐ) ಹಮ್ಮಿಕೊಂಡಿರುವ ‘ಪ್ರವಾಸ್ 4.0’ ಕಾರ್ಯಕ್ರಮ ಈ ವಾಹನಗಳ ಪ್ರದರ್ಶನಕ್ಕೆ ವೇದಿಕೆಯಾಯಿತು.
ದೇಶದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಸಮೂಹ ಸಾರಿಗೆ ಮಾಲೀಕರು ಮತ್ತು ಆಪರೇಟರ್‌ಗಳು ಭಾಗಿಯಾಗಿದ್ದರು. 2 ಗಂಟೆ ಚಾರ್ಜ್ ಮಾಡಿದರೆ 350 ಕಿ.ಮೀ. ಸಂಚರಿಸುವ ಸ್ಲೀಪರ್ ಬಸ್‌ನಿಂದ ಆರಂಭವಾಗಿ, ವಿದ್ಯುತ್ ಚಾಲಿತ ಸರಕು ಸಾಗಣೆ ವಾಹನದವರೆಗೆ ವಿವಿಧ ವಾಹನಗಳು ಪ್ರದರ್ಶನದಲ್ಲಿದ್ದವು. ಡೀಸೆಲ್, ಪೆಟ್ರೋಲ್ ಕಾರುಗಳು ಗಮನ ಸೆಳೆದವು.
₹ 13,500ದಿಂದ ₹ 1.5 ಲಕ್ಷದ ವರೆಗಿನ ಮೌಲ್ಯದ ಬಸ್ ಸೀಟುಗಳು ಆಕರ್ಷಕವಾಗಿದ್ದವು. ವಿವಿಧ ವಿನ್ಯಾಸದ ಸೈಡ್ ಮಿರರ್‌ಗಳು (ಕನ್ನಡಿ), ಬಸ್ ಬಾಗಿಲು, ಎಂಜಿನ್, ಚಾಸಿಗಳು ವಾಹನಗಳಷ್ಟೇ ಆಕರ್ಷಣೆಗೆ ಒಳಗಾದವು.
ನಗರದೊಳಗಿನ ಹಸಿರು ಸಮೂಹ ಸಾರಿಗೆಗಾಗಿ ಹೊಚ್ಚ ಹೊಸ ಟಾಟಾ ಅಲ್ಟ್ರಾ ಇವಿ 7ಎಂ ವಾಹನವನ್ನು ಟಾಟಾ ಮೋಟಾರ್ಸ್ ಅನಾವರಣಗೊಳಿಸಿತು. ಸುರಕ್ಷಿತ, ಸ್ಮಾರ್ಟ್ ಮತ್ತು ಸುಸ್ಥಿರ ಸಮೂಹ ಸಾರಿಗೆಗಳಾದ ಟಾಟಾ ಮ್ಯಾಗ್ನಾ ಇವಿ, ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್, ಟಾಟಾ ಅಲ್ಟ್ರಾ ಪ್ರೈಮ್ ಸಿಎನ್‌ಜಿ, ಟಾಟಾ ವಿಂಗರ್ 9 ಎಸ್, ಟಾಟಾ ಸಿಟಿರೈಡ್ ಪ್ರೈಮ್ ಮತ್ತು ಟಾಟಾ ಎಲ್‌ಪಿಓ 1822 ಉತ್ಪನ್ನಗಳನ್ನು ಪ್ರದರ್ಶಿಸಿತು. ‘ಇ–ಇಕಾ’ ಬಸ್, ಸರಕು ಸಾಗಣೆ ವಾಹನಗಳು ಅಚ್ಚರಿಗೊಳಪಡಿಸಿದವು.
ಇವಲ್ಲದೇ ವೋಲ್ವೊ, ಐಶರ್, ರೆಡ್‌ಬಸ್, ಅಭಿಬಸ್, ವೀರಾ, ಪ್ರಕಾಶ್, ಎಬರ್‌ಸ್ಟೇಚರ್, ಬಾಶ್, ಟ್ರಾನ್ಸ್ ಎಸಿಎನ್‌ಆರ್, ಸ್ಪೆರೋಸ್ ಮದರ್‌ಸನ್, ದಾಮೋದರ್ ಕೋಚ್ ಕ್ರಾಫ್ಟ್ಸ್, ಮಾರುತಿ ಸುಜುಕಿ, ಬಿಟ್ಲಾ ಸಾಫ್ಟ್‌ವೇರ್‌ನಂಥ ಕಂಪನಿಗಳು ಪಾಲ್ಗೊಂಡಿದ್ದವು. ನಿಪ್ಪಾನ್ ಪೇಂಟ್, ಜೆಬಿಎಂ ಗ್ರೂಪ್, ಇಕಾ ಮೊಬಿಲಿಟಿ, ರೆಪೊಸ್ ಎನರ್ಜಿ, ಅಶೋಕ್ ಲೇಲ್ಯಾಂಡ್, ಫ್ಯೂಚರ್, ಆಟೋಮೆಟಿಕ್ ಗ್ಲೋಬಲ್ ವೆಂಚರ್ಸ್, ರಮೇಶ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್, ಔಡಿ, ಬಿಎಂಡಬ್ಲ್ಯು ಡೆಯಟ್‌ಶೆ ಮೊಟರೆನ್, ಮರ್ಸಿಡೆಸ್–ಬೆಂಝ್, ಕಿಯಾ, ರಿನೊ ಕಂಪನಿಗಳು, ಐಡಿಯಲ್ ಇನ್ಶೂರೆನ್ಸ್ ಸಹಿತ ವಿವಿಧ ವಿಮಾ ಕಂಪನಿಗಳು ಭಾಗವಹಿಸಿದ್ದವು.
ಬಸ್, ಕಾರ್ ಆಪರೇಟರ್‌ಗಳಾದ ಇಂಟರ್‌ಸಿಟಿ, ಇಂಟ್ರಾಸಿಟಿ, ಶಾಲಾ ಬಸ್, ನೌಕರರ ಸಾರಿಗೆ, ಪ್ರವಾಸಿ ಆಪರೇಟರ್‌ಗಳು, ಪ್ರವಾಸಿ ಕ್ಯಾಬ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳು, ಪಿಪಿಪಿ–ಎಸ್‌ಪಿವಿ, ಕ್ರಿಟಿಕಲ್ ಕೇರ್ ಸಂಸ್ಥೆಗಳು ಭಾಗವಹಿಸಿದ್ದವು.
‘ಪ್ರವಾಸ್ 4.0’ ಪ್ರದರ್ಶನ–ಸಮ್ಮೇಳನ ಶನಿವಾರದವರೆಗೆ ನಡೆಯಲಿದೆ. ವಿವಿಧ ರಾಜ್ಯಗಳ ಸಾರಿಗೆ ಸಚಿವರು, ಸಾರಿಗೆ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ಸಾರಿಗೆಗೆ ಸಂಬಂಧಿಸಿದಂತೆ ವಿವಿಧ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಸಾರಿಗೆ ವ್ಯವಸ್ಥೆಯಲ್ಲಿ ಶೇ 92 ಖಾಸಗಿ: ಡಿಕೆಶಿ ಬೆಂಗಳೂರು: ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಸರ್ಕಾರಿ ವಾಹನಗಳ ಪಾಲು ಶೇ 8ರಷ್ಟು ಮಾತ್ರ ಇದೆ. ಶೇ 92ರಷ್ಟು ಖಾಸಗಿ ವಾಹನಗಳು ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ‘ಪ್ರವಾಸ್ 4.0’ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು ‘ಉದ್ಯೋಗ ಸೃಷ್ಟಿ ಮತ್ತು ಸರ್ಕಾರಕ್ಕೆ ಆದಾಯ ತರುವ ಪ್ರಮುಖ ಕ್ಷೇತ್ರ ಸಾರಿಗೆ. ಈ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲಿಯೇ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಭರವಸೆ ನಿಡಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವರ್ಚುವಲ್ ಮೂಲಕ ಮಾತನಾಡಿ ‘ಜಾಗತಿಕವಾಗಿ ಪರಿಸರ ಸಂರಕ್ಷಣೆ ಹಾಗೂ ಭವಿಷ್ಯದ ದೃಷ್ಟಿಯಿಂದ ಹಸಿರು ಇಂಧನ ಬಳಕೆಗೆ ಆದ್ಯತೆ ನೀಡಬೇಕಿದೆ’ ಎಂದು ಹೇಳಿದರು. ಎಲೆಕ್ಟ್ರಿಕ್ ಎಥೆನಾಲ್ ಸಿಎನ್‌ಜಿ ಮೂಲಕ ಸಂಚರಿಸುವ ವಾಹನಗಳ ಬಳಕೆ ಹೆಚ್ಚಿಸಬೇಕು. ಭವಿಷ್ಯದಲ್ಲಿ ಅಂತಹ ವಾಹನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಅದಕ್ಕಾಗಿಯೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಯಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ ಎಂದರು. ಉತ್ತರಪ್ರದೇಶ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅರುಣಾಚಲ ಪ್ರದೇಶ ಸಾರಿಗೆ ಸಚಿವ ಒಜಿಂಗ್ ತಾಸಿಂಗ್ ಬಿಒಸಿಐ ಅಧ್ಯಕ್ಷ ಪ್ರಸನ್ನ ಪಟವರ್ಧನ್ ಮಾಜಿ ಸಚಿವ ಅಭಯಚಂದ್ರ ಜೈನ್ ಸಾರಿಗೆ ಕ್ಷೇತ್ರದ ಪ್ರಮುಖರಾದ ವಿಜಯ ಸಂಕೇಶ್ವರ ಜಿ.ಆರ್.ಷಣ್ಮುಗಪ್ಪ ಪ್ರಸನ್ನ ರಾಧಾಕೃಷ್ಣ ಹೊಳ್ಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.