ಬೆಂಗಳೂರು: ಯುವಕನನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಕೆಂಗೇರಿಯ ಕೋಣಸಂದ್ರ ಕೆರೆಯ ಬಳಿ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ. ಚಂದ್ರಾಲೇಔಟ್ ನಿವಾಸಿ ಮೊಹಮ್ಮದ್ ತಾಹೀರ್ (19) ಕೊಲೆಯಾದ ಯುವಕ.
ಚಾಮರಾಜಪೇಟೆಯ ಟಿಪ್ಪುನಗರದ ಆರೋಪಿ ನ್ಯಾಮತ್, ನದೀಮ್ ಹಾಗೂ ಸಮೀರ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸೋಮವಾರ ರಾತ್ರಿ 11ರ ಸುಮಾರಿಗೆ ತಾಹೀರ್‌ಗೆ ಕರೆ ಮಾಡಿದ್ದ ಆರೋಪಿಗಳು ನಾಯಂಡಹಳ್ಳಿ ಮೆಟ್ರೊ ನಿಲ್ದಾಣದ ಬಳಿಗೆ ಬರುವಂತೆ ಹೇಳಿದ್ದರು. ಅಲ್ಲಿಗೆ ತೆರಳಿದ ಮೇಲೆ ಆಟೋದಲ್ಲಿ ತಾಹೀರ್‌ನನ್ನು ಅಪಹರಿಸಿಕೊಂಡು ಕೆಂಗೇರಿ ಕಡೆಗೆ ಹೋಗಿದ್ದರು. ರಾತ್ರಿಯಾದರೂ ತಾಹೀರ್ ಮನೆಗೆ ಬಾರದಿದ್ದಾಗ ತಂದೆ ಸೈಯದ್ ಮೆಹಬೂಬ್ ಆತನಿಗೆ ಕರೆ ಮಾಡಿದ್ದರು. ಆದರೆ, ತಾಹೀರ್ ಕರೆ ಸ್ವೀಕರಿಸಿರಲಿಲ್ಲ. ಬಳಿಕ ನ್ಯಾಮತ್ ಮನೆಯ ಬಳಿ ಹೋಗಿ ಮೆಹಬೂಬ್ ಪುತ್ರನ ಬಗ್ಗೆ ವಿಚಾರಿಸಿದ್ದರು. ಆಗ ನ್ಯಾಮತ್ ತಂದೆ ಆತನಿಗೆ ಕರೆ ಮಾಡಿ ವಿಚಾರಿಸಿದಾಗ, ತಾನು ಕೆಂಗೇರಿಯಲ್ಲಿದ್ದು ತಾಹೀರ್ ಸಹ ತಮ್ಮೊಂದಿಗೆ ಇರುವುದಾಗಿ ಹೇಳಿದ್ದ. ತಾಹೀರ್‌ನನ್ನು ತಕ್ಷಣವೇ ಕರೆ ತರುವಂತೆ ಹೇಳಿದಾಗ ನ್ಯಾಮತ್ ಕರೆ ಕಡಿತಗೊಳಿಸಿದ್ದ ಎಂದು ಪೊಲೀಸರು ಹೇಳಿದರು.
ಆತಂಕಗೊಂಡ ಪೊಲೀಸರು ರಾತ್ರಿಯೇ ಕೆಂಗೇರಿ ಕಡೆಗೆ ತೆರಳಿ ಹುಡುಕಾಟ ನಡೆಸಿದ್ದರು. ತಾಹೀರ್ ಪತ್ತೆಯಾಗಿರಲಿಲ್ಲ. ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಬೆಳಿಗ್ಗೆ ಕೆಂಗೇರಿ ಸುತ್ತಮುತ್ತ ಹುಡುಕಾಟ ನಡೆಸಿದಾಗ ಕೆರೆ ಬಳಿ ತಾಹೀರ್ ಶವ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
‘ಹಿಂದೂಸ್ಥಾನ್ ಕಂಪನಿಯಲ್ಲಿ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ತಾಹೀರ್ ಹಾಗೂ ನ್ಯಾಮತ್ ನಡುವೆ ವರ್ಷದ ಹಿಂದೆ ಜಗಳವಾಗಿತ್ತು. ಹಳೇ ದ್ವೇಷದಿಂದ ಕೊಲೆ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.