ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಕ್ಕೆ ಸಾಲದ ಸಂಬಳ: ನಗರಕ್ಕೆ ಬಂದು ಕಳ್ಳತನ

Last Updated 24 ಫೆಬ್ರುವರಿ 2022, 16:21 IST
ಅಕ್ಷರ ಗಾತ್ರ

ಬೆಂಗಳೂರು: ಕಾರಿನ ಗಾಜು ಒಡೆದು ಹಣ ಹಾಗೂ ಬೆಲೆಬಾಳುವ ವಾಚ್‌ಗಳನ್ನು ಕದ್ದಿದ್ದ ಆರೋಪದಡಿ ಸತೀಶ್ ಎಂಬಾತನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.

‘ಚಿತ್ತೂರಿನ ನಿವಾಸಿ ಸತೀಶ್, ತಿರುಪತಿಯ ಲಾಡ್ಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಜೀವನ ನಿರ್ವಹಣೆಗೆ ಸಂಬಳ ಸಾಲದಿದ್ದರಿಂದ ಆಗಾಗ ಬೆಂಗಳೂರಿಗೆ ಬಂದು ಕೃತ್ಯ ಎಸಗಿ ಪರಾರಿಯಾಗುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘2021ರ ಸೆಪ್ಟೆಂಬರ್ 18ರಂದು ನಗರಕ್ಕೆ ಬಂದಿದ್ದ ಆರೋಪಿ, ಚಂದ್ರಾಲೇಔಟ್ ಹಾಗೂ ಹಲವೆಡೆ ಸುತ್ತಾಡಿದ್ದ. ಉದ್ಯಮಿಯೊಬ್ಬರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಫಾರ್ಚ್ಯೂನರ್ ಕಾರು ಗಮನಿಸಿದ್ದ. ಅದರ ಕಿಟಕಿ ಗಾಜುಗಳನ್ನು ಪಡೆದು, ಒಳಗಿದ್ದ ₹ 2.50 ಲಕ್ಷ ನಗದು ಹಾಗೂ ಬೆಲೆಬಾಳುವ ಎರಡು ವಾಚ್‌ಗಳನ್ನು ಕದ್ದೊಯ್ದಿದ್ದ.’

‘ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಆರಂಭದಲ್ಲಿ ಆತನ ಸುಳಿವು ಸಿಕ್ಕಿರಲಿಲ್ಲ. ಇದೇ ಮಾದರಿಯಲ್ಲಿ ಜ್ಞಾನಭಾರತಿ ಹಾಗೂ ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಗಳಲ್ಲೂ ಕೃತ್ಯ ನಡೆದಿದ್ದು ಗಮನಕ್ಕೆ ಬಂದಿತ್ತು. ಹೀಗಾಗಿ, ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು’ ಎಂದೂ ಮೂಲಗಳು ತಿಳಿಸಿವೆ.

‘ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಹಲವು ಪುರಾವೆಗಳನ್ನ ಸಂಗ್ರಹಿಸಿ ಪರಿಶೀಲಿಸಲಾಗಿತ್ತು. ಸುಳಿವು ಸಿಗುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಯಿತು. ಆತನಿಂದ ₹ 8 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT