ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

74 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

1,756 ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ರವೆರೆಗೆ ಮತದಾನ, 9,563 ಸಿಬ್ಬಂದಿ ನಿಯೋಜನೆ
Last Updated 12 ಮೇ 2018, 6:04 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ 1,756 ಮತಗಟ್ಟೆಗಳಲ್ಲಿ ಶನಿವಾರ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 74 ಅಭ್ಯರ್ಥಿಗಳ ಭವಿಷ್ಯ ಸಂಜೆಯ ಒಳಗೆ ಮತಪೆಟ್ಟಿಗೆ ಸೇರಲಿದೆ.

ಎಲ್ಲ ಮತಗಟ್ಟೆಗಳಲ್ಲೂ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶುಕ್ರವಾರ ಸಂಜೆಯೇ ಮತಗಟ್ಟೆ ಕೇಂದ್ರಗಳನ್ನು ತಲುಪಿ ಮತದಾನಕ್ಕೆ ಅಗತ್ಯ ಪ್ರಕ್ರಿಯೆ ಪೂರೈಸಿದರು.

50 ಅಣಕು ಮತದಾನ

ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದ ಮತದಾನ ಆರಂಭವಾಗಲಿದ್ದು, ಅದಕ್ಕೂ ಮೊದಲು ಮತಗಟ್ಟೆ ಸಿಬ್ಬಂದಿ 50 ಅಣಕು ಮತದಾನ ಮಾಡಲಿದ್ದಾರೆ. ವಿ.ವಿ.ಪ್ಯಾಟ್‌ ಮೂಲಕ ತಾವು ಮತದಾನ ಮಾಡಿದ ಚಿಹ್ನೆ ಖಾತ್ರಿ ಪಡಿಸಿಕೊಳ್ಳಲಿದ್ದಾರೆ. ನಂತರ ವಿದ್ಯುನ್ಮಾನ ಮತ ಯಂತ್ರಗಳನ್ನು ಸಹಜ ಸ್ಥಿತಿಗೆ ತಂದು ಸಾರ್ವಜನಿಕರಿಗೆ ಮತದಾನಕ್ಕೆ ಅವಕಾಶ ಮಾಡಿ ಕೊಡಲಿದ್ದಾರೆ. ಈ ಎಲ್ಲ ಪ್ರಕ್ರಿಯೆ ಗಳನ್ನೂ ಬೆಳಿಗ್ಗೆ 6.50ರ ಒಳಗೆ ಪೂರ್ಣಗೊಳಿಸಲಿದ್ದಾರೆ.

9563 ಸಿಬ್ಬಂದಿ

ಜಿಲ್ಲೆಯಲ್ಲಿ ಸ್ಥಾಪಿಸಿರುವ 1,756 ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು 9,563 ಮತಗಟ್ಟೆ ಸಿಬ್ಬಂದಿ, 326 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. 18 ಗುಲಾಬಿ ಬಣ್ಣದ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ.

ಮತಗಟ್ಟೆಗಳತ್ತ ಪಯಣ

ಜಿಲ್ಲೆಯ ಏಳು ಕ್ಷೇತ್ರಗಳ ಮತಗಟ್ಟೆಗಳಿಗೆ ನಿಯೋಜ ನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ 7ರಿಂದಲೇ ಆಯಾ ಕ್ಷೇತ್ರಗಳಲ್ಲಿ ನಿಗದಿ ಮಾಡಿದ್ದ ಮಸ್ಟರಿಂಗ್ ಕೇಂದ್ರಗಳಿಗೆ ತಲುಪಿದರು.

ಶಿವಮೊಗ್ಗ ನಗರ ಕ್ಷೇತ್ರದ ಸಿಬ್ಬಂದಿ ಎಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು, ಶಿವಮೊಗ್ಗ ಗ್ರಾಮಾಂತರ ಸಿಬ್ಬಂದಿ ಸಹ್ಯಾದ್ರಿ ವಾಣಿಜ್ಯ ಕಾಲೇಜು, ಭದ್ರಾವತಿ ಕ್ಷೇತ್ರದವರು ಸಂಚಿ ಹೊನ್ನಮ್ಮ ಬಾಲಿಕಾ ಪದವಿಪೂರ್ವ ಕಾಲೇಜು, ತೀರ್ಥಹಳ್ಳಿ ಯು.ಆರ್.ಅನಂತಮೂರ್ತಿ ಕಾಲೇಜು, ಶಿಕಾರಿಪುರ ಕ್ಷೇತ್ರದ ಸಿಬ್ಬಂದಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸೊರಬ ಕ್ಷೇತ್ರದವರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸಾಗರ ಕ್ಷೇತ್ರದ ಅಧಿಕಾರಿಗಳು, ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಬಂದು ಮತಯಂತ್ರಗಳನ್ನು ಪಡೆದರು.

ಎಲ್ಲ ಕೇಂದ್ರಗಳಲ್ಲೂ ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವು ಕೇಂದ್ರಗಳಲ್ಲಿ ಬೇಗನೆ ಯಂತ್ರಗಳನ್ನು ನೀಡಿದರೆ, ಮತ್ತೆ ಕೆಲವು ಕೇಂದ್ರಗಳಲ್ಲಿ ಮಧ್ಯಾಹ್ನದ ನಂತರ ಯಂತ್ರಗಳನ್ನು ನೀಡಲಾಯಿತು.

ಮತಗಟ್ಟೆಗಳಿಗೆ ತೆರಳುವ ಮೊದಲು ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡವರು ಅಂಚೆ ಮತ ಚಲಾಯಿಸಿ, ಅಲ್ಲೇ ಇಡಲಾಗಿದ್ದ ಮತಪೆಟ್ಟಿಗೆಗೆ ಹಾಕಿದರು.

ಮೇ 15ಕ್ಕೆ ಮತ ಎಣಿಕೆ; ಪೊಲೀಸ್ ಕಾವಲು

ಶನಿವಾರ ನಡೆಯುವ ಚುನಾವಣೆಯ ಫಲಿತಾಂಶ ಮೇ 15ರಂದು ಹೊರ ಬೀಳಲಿದೆ. ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಡೆಯಲಿದೆ.

ಶನಿವಾರ ರಾತ್ರಿಯೇ ಎಲ್ಲ ಮತಯಂತ್ರಗಳೂ ಮತ ಎಣಿಕೆ ಕೇಂದ್ರ ತಲುಪಲಿವೆ. ಭದ್ರತೆಗೆ ಸಕಲ ವ್ಯವಸ್ಥೆ ಮಾಡಲಾಗಿದ್ದು, ಸುತ್ತಲೂ ಬೆಳಕಿನ ಸೌಲಭ್ಯ ಕಲ್ಪಿಸಲಾಗಿದೆ. ಮೂರು ರಾತ್ರಿ, ಎರಡು ಹಗಲು ನಿರಂತರವಾಗಿ ಪೊಲೀಸ್‌, ಅರೆ ಮಿಲಿಟರಿ ಪಡೆಗಳ ಸರ್ಪ ಕಾವಲು ಹಾಕಲಾಗಿದೆ.

ಕ್ಷೇತ್ರವಾರು ಮತದಾರರು

ಶಿವಮೊಗ್ಗ ಗ್ರಾಮಾಂತರ  2,07,624
ಶಿವಮೊಗ್ಗ ನಗರ         2,56,361
ಭದ್ರಾವತಿ               2,07,624
ತೀರ್ಥಹಳ್ಳಿ              1,84,122
ಶಿಕಾರಿಪುರ              1,88,206
ಸೊರಬ                 1,84,585
ಸಾಗರ                  1,93,797
–––––––––––––––––––––
ಒಟ್ಟು                  14,26,208

–––––––––––––––––––––

ಒಂದು ಗುರುತು ಪತ್ರ ಜತೆಗಿರಲಿ

ಮತದಾನ ಮಾಡಲು ಬರುವ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಕಡ್ಡಾಯ. ಅಂತಹ ಮತದಾರರು ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ ಅಥವಾ ವಾಹನ ಚಾಲನಾ ಪರವಾನಗಿ ಪತ್ರ, ಉದ್ಯೋಗ ಗುರುತಿನ ಪತ್ರ, ಭಾವಚಿತ್ರ ಇರುವ ಪಾಸ್‌ಬುಕ್‌, ಪಾನ್‌ಕಾರ್ಡ್, ಸ್ಮಾರ್ಟ್‌ ಕಾರ್ಡ್ ಸೇರಿದಂತೆ ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT