ಗುರುವಾರ , ಜುಲೈ 7, 2022
23 °C
ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ

ಪ್ರತಿಭಟನಾ ಮೆರವಣಿಗೆ: ಸರ್ಕಾರದ ವಿರುದ್ಧ ಗುಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ತಮ್ಮ ಕೂಗಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಗುಡುಗಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸೋಮವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ಚಲೊ’ ಮೆರವಣಿಗೆಯಲ್ಲಿ ಪ್ರತಿಭಟನನಿರತರು ಘೋಷಣಾ ಫಲಕ ಪ್ರದರ್ಶಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಮೆರವಣಿಗೆಯಲ್ಲಿ ಸಾಗಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಮೆರವಣಿಗೆ ಅಂತ್ಯಗೊಳಿಸಿ ಬಹಿರಂಗ ಸಭೆ ನಡೆಸಿದ ಪ್ರತಿಭಟನಕಾರರು, ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ‘ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ತಲುಪಿಸಲಾಗುವುದು. ಧರಣಿಯನ್ನು ಕೈಬಿಡಿ’ ಎಂದರು. ಅದಕ್ಕೆ ಒಪ್ಪದ ಪ್ರತಿಭಟನಕಾರರು, ‘ಮುಖ್ಯಮಂತ್ರಿ ಅವರೇ ಸ್ಥಳಕ್ಕೆ ಬರಬೇಕು. ಅಲ್ಲಿವರೆಗೂ ಉದ್ಯಾನದಲ್ಲಿ ಧರಣಿ ಮುಂದುವರಿಸಲಾಗುವುದು’ ಎಂದು ಹೇಳಿದರು.

ಬಟ್ಟೆ ಹಾಗೂ ಅಗತ್ಯ ವಸ್ತುಗಳ ಬ್ಯಾಗ್‌ ಸಮೇತ ನಗರಕ್ಕೆ ಬಂದಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಉದ್ಯಾನದಲ್ಲೇ ರಾತ್ರಿ ತಂಗಿದ್ದಾರೆ. ಕೆಲವರು ಮಕ್ಕಳನ್ನೂ ತಮ್ಮ ಜೊತೆ ಕರೆತಂದಿದ್ದಾರೆ.

‘ರಾಜ್ಯದ ಅಂಗನವಾಡಿಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಹಲವು ಯೋಜನೆಗಳ ಜಾರಿ ಕೆಲಸವನ್ನು ಅವರಿಂದ ಮಾಡಿಸಿಕೊಳ್ಳಲಾಗುತ್ತಿದೆ. ಆದರೆ, ಕೆಲಸಕ್ಕೆ ತಕ್ಕ ವೇತನವನ್ನು ಮಾತ್ರ ನೀಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಹೀಗಾಗಿ, ಈ ಬಾರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದೇವೆ’ ಎಂದು ಪ್ರತಿಭಟನಕಾರರು ಹೇಳಿದರು.

‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ಸೇವಾ ಹಿರಿತನ ಪರಿಗಣಿಸಿ ಸಂಬಳ ಹೆಚ್ಚಿಸಬೇಕು. ನಿವೃತ್ತರಾದವರಿಗೆ ಪಿಂಚಣಿ ನೀಡಬೇಕು. ರಾಷ್ಟ್ರೀಯ ಶಿಕ್ಷಣ ಯೋಜನೆಯಡಿ ಅಂಗನವಾಡಿಗಳಲ್ಲಿ ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ಕೇಂದ್ರಗಳನ್ನು ತೆರೆದು, ಸಹಾಯಕಿಯರನ್ನೇ ಕೆಲಸಕ್ಕೆ ತೆಗೆದುಕೊಳ್ಳಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು’ ಎಂದೂ ಅವರು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು