ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾಪುರ ರಸ್ತೆ: ಹೊಸ ತಂತ್ರಜ್ಞಾನ ಕೈಬಿಟ್ಟ ಬಿಡಿಎ

ರಾಷ್ಟ್ರೀಯ ಹೆದ್ದಾರಿ ದರ್ಜೆಯಲ್ಲೇ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಟೆಂಡರ್
Last Updated 28 ಸೆಪ್ಟೆಂಬರ್ 2021, 17:34 IST
ಅಕ್ಷರ ಗಾತ್ರ

ಬೆಂಗಳೂರು: ಅಂಜನಾಪುರ ಮುಖ್ಯರಸ್ತೆಯನ್ನು ಸಿಮೆಂಟ್‌ ಸ್ಟೆಬಿಲೈಸೇಷನ್ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸುವ ಪ್ರಸ್ತಾವ ಕೈಬಿಟ್ಟಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದಿಂದ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿತ್ತು. ಸ್ಥಳೀಯರು ಹೋರಾಟ ನಡೆಸಿದ ಬಳಿಕ ಈಗ ವಾಹನ ಸಂಚಾರಕ್ಕೆ ಸುಗಮಗೊಳಿಸಲಾಗಿದೆ.

ಶಾಶ್ವತವಾಗಿ ರಸ್ತೆ ಅಭಿವೃದ್ಧಿಪಡಿಸಲು ಟೆಂಡರ್ ಪ್ರಕ್ರಿಯೆಯನ್ನೂ ಬಿಡಿಎ ಆರಂಭಿಸಿದೆ. ಈ ಹಿಂದಿನ ಯೋಜನೆಯಂತೆ ಸಿಮೆಂಟ್‌ ಸ್ಟೆಬಿಲೈಸೇಷನ್‌ ಎಂಬ ಹೊಸ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಹಳೇ ರಸ್ತೆಯಲ್ಲಿನ ಜಲ್ಲಿ ತೆಗೆದು ಮತ್ತೆ ಹೊಸದಾಗಿ ಜಲ್ಲಿ ಹಾಕುವ ಬದಲಿಗೆ ಅಲ್ಲಿರುವ ಡಾಂಬರ್ ಮತ್ತು ಜಲ್ಲಿಯನ್ನೇ ಒಂದು ಅಡಿಯಷ್ಟು ಆಳದವರಿಗೆ ಯಂತ್ರಗಳ ಮೂಲಕ ಪುಡಿ ಮಾಡುವುದು. ಆ ಪುಡಿಗೆ ಸಿಮೆಂಟ್ ಬಳಸಿ ಗಟ್ಟಿಗೊಳಿಸಿ, ಅದರ ಮೇಲೆ ಡಾಂಬರ್ ಹಾಕಲು ಯೋಜನೆ ರೂಪಿಸಲಾಗಿತ್ತು.

6.8 ಕಿಲೋ ಮೀಟರ್ ರಸ್ತೆಯನ್ನು ₹25 ಕೋಟಿ ವೆಚ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರು ಈ ಹೊಸ ಪ್ರಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದ್ದರು. ಹೀಗಾಗಿ, ಬಿಡಿಎ ಈ ಯೋಜನೆಯನ್ನು ಬದಲಿಸಿ ಟೆಂಡರ್ ನೋಟಿಫಿಕೇಷನ್ ಪ್ರಕಟಿಸಿದೆ.

‘ಎರಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿರುವ ಪ್ರಮುಖ ರಸ್ತೆ ಇದಾಗಿದೆ. ಪ್ರತಿದಿನ ಭಾರಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಹೊಸ ತಂತ್ರಜ್ಞಾನ ಬಳಸಿ ಗುಣಮಟ್ಟದ ರಸ್ತೆ ಅಭಿವೃದ್ಧಿಪಡಿಸಿದ್ದರೆ ಹೆಚ್ಚು ದಿನ ಬಾಳಿಕೆ ಬರುತ್ತಿತ್ತು. ಅದನ್ನು ಮಾಡದೆ ಹಳೇ ಮಾದರಿಯಲ್ಲೇ ರಸ್ತೆ ಅಭಿವೃದ್ಧಿಪಡಿಸಿದರೆ ಬಾಳಿಕೆ ಬರುವುದಿಲ್ಲ’ ಎಂಬುದು ಸ್ಥಳೀಯರ ಅನುಮಾನ.

‘ಮಾದರಿಯಾಗಿ ರಸ್ತೆ ಅಭಿವೃದ್ಧಿಯಾಗಲಿದೆ ಎಂಬ ಕಾರಣಕ್ಕೆ ಇಷ್ಟು ದಿನ ಕಾದಿದ್ದೆವು. ಹಳೇ ಮಾದರಿಯಲ್ಲೇ ರಸ್ತೆ ನಿರ್ಮಿಸುವುದಾದರೆ ಜನರನ್ನು ಇಷ್ಟು ದಿನ ಕಾಯಿಸುವ ಅಗತ್ಯ ಇರಲಿಲ್ಲ’ ಎಂದು ನಾರಾಯಣನಗರದ ನಿವಾಸಿ ಪವನ್ ವಸಿಷ್ಠ ಹೇಳುತ್ತಾರೆ.

‘ಹೊಸ ತಂತ್ರಜ್ಞಾನದ ಅಳವಡಿಸದಿದ್ದರೂ, ಗುಣಮಟ್ಟದಲ್ಲಿ ರಾಜಿ ಮಾಡಿಕೊಲ್ಳುವುದಿಲ್ಲ. ಭಾರಿ ವಾಹನಗಳ ಸಂಚಾರವೇ ಈ ರಸ್ತೆಯಲ್ಲಿ ಹೆಚ್ಚಾಗಿರುವ ಕಾರಣ ರಾಷ್ಟ್ರೀಯ ಹೆದ್ದಾರಿ ದರ್ಜೆಯಲ್ಲೇ ಅಭಿವೃದ್ಧಿಯಾಗಲಿದೆ’ ಎಂದು ಬಿಡಿಎ ಎಂಜಿನಿಯರಿಂಗ್ ಸದಸ್ಯ ಶಾಂತರಾಜಣ್ಣ ಸ್ಪಷ್ಟಪಡಿಸಿದರು.

‘ಕಡಬಗೆರೆ ಕ್ರಾಸ್‌ನಿಂದ ಮಾದನಾಯಕನಹಳ್ಳಿ ತನಕದ 12 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಪಡಿಸಬೇಕಿದೆ. ಈ ರಸ್ತೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು’ ಎಂದು ಹೇಳಿದರು.

15 ದಿನಗಳಲ್ಲಿ ಕಾಮಗಾರಿ

‘ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲೇ ರಸ್ತೆ ಅಭಿವೃದ್ಧಿಪಡಿಸಲು ಬಿಡಿಎ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಎಂ. ಕೃಷ್ಣಪ್ಪ ತಿಳಿಸಿದರು.

‘ವಾಹನ ದಟ್ಟಣೆ ಹೆಚ್ಚಿರುವ ಕಾರಣ ಗುಣಮಟ್ಟದ ರಸ್ತೆ ನಿರ್ಮಾಣ ಆಗಬೇಕು. ಈ ರಸ್ತೆಯಲ್ಲಿ ಪ್ರಯೋಗ ಮಾಡಲು ಆಗುವುದಿಲ್ಲ. ಹೈಟೆನ್ಷನ್‌ ವಿದ್ಯುತ್ ಮಾರ್ಗ ಹಾದು ಹೋಗಿದ್ದು, ಅದರ ಕೆಳಗಿನ ಜಾಗವನ್ನು ಉದ್ಯಾನವಾಗಿ ಮಾರ್ಪಡಿಸಲಾಗುವುದು. ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಅನುದಾನ ಅಗತ್ಯವಾದರೆ ಒದಗಿಸಲಾಗುವುದು ಎಂದು ಬಿಡಿಎ ಅಧ್ಯಕ್ಷರು ಭರವಸೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT