ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ನೀತಿ ಜಾರಿಗೆ ಸಿದ್ಧಲಿಂಗಯ್ಯ ಒತ್ತಾಯ

ಟಿ.ಎಸ್.ಛಾಯಾಪತಿ ಅವರಿಗೆ ಅಂಕಿತ ಪುಸ್ತಕ ಪುರಸ್ಕಾರ
Last Updated 22 ನವೆಂಬರ್ 2019, 2:01 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಪುಸ್ತಕಗಳ ಪ್ರಕಟಣೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವೇ ಪುಸ್ತಕ ನೀತಿ ಜಾರಿಗೆ ತರಬೇಕು’ ಎಂದು ಕವಿ ಡಾ. ಸಿದ್ಧಲಿಂಗಯ್ಯ ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೈಸೂರಿನ ‘ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ ಮುಖ್ಯಸ್ಥ ಟಿ.ಎಸ್.ಛಾಯಾಪತಿ ಅವರಿಗೆ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ‌‘ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಪುಸ್ತಕ ಪ್ರಾಧಿಕಾರದ ಈ ಹಿಂದಿನ ಅಧ್ಯಕ್ಷರು ನೀಡಿರುವ ಪುಸ್ತಕ ನೀತಿಗೆ ಸಂಬಂಧಿಸಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದರೆ ಪುಸ್ತಕೋದ್ಯಮಕ್ಕೆ ಅನುಕೂಲ ಆಗಲಿದೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರಿಗೆ ಸಬ್ಸಿಡಿ ದರದಲ್ಲಿ ಕಾಗದ ಪೂರೈಸಬೇಕು. ಒಂದು ಪುಸ್ತಕದ 500 ಪ್ರತಿಗಳನ್ನಾದರೂ ಗ್ರಂಥಾಲಯ ಇಲಾಖೆ ಖರೀದಿಸಬೇಕು ಎಂಬ ಶಿಫಾರಸನ್ನು ಸರ್ಕಾರ ಶೀಘ್ರವೇ ಜಾರಿಗೊಳಿಸಬೇಕು’ ಎಂದು ಹೇಳಿದರು.

‘ತಮಿಳುನಾಡಿನಲ್ಲಿ ಏಷ್ಯಾದಲ್ಲೇ ಅತೀ ದೊಡ್ಡ ಗ್ರಂಥಾಲಯ ಇದೆ. ದೇಶದಲ್ಲೇ ಅತೀ ದೊಡ್ಡದಾದ ಗ್ರಂಥಾಲಯವನ್ನು ಕರ್ನಾಟಕ
ದಲ್ಲಿ ತೆರೆಯಬೇಕು. ಕನ್ನಡದ ಕೆಲಸ ಮಾಡಲು ಸರ್ಕಾರಗಳಿಗೆ ಇಚ್ಛಾಶಕ್ತಿ ಇರಬೇಕು’ ಎಂದರು.

‘ಕಲಾಗ್ರಾಮ ಅಥವಾ ಬೇರೆ ಎಲ್ಲಾದರೂ ಪುಸ್ತಕ ಉದ್ಯಾನ ನಿರ್ಮಿಸಬೇಕು. ಈವರೆಗೆ ಪ್ರಕಟವಾಗಿರುವ ಎಲ್ಲಾ ಪುಸ್ತಕಗಳು ಅಲ್ಲಿ ಪ್ರದರ್ಶನಕ್ಕೆ ಇಡಬೇಕು. ಕವಿಗಳು, ಲೇಖಕರ ಭಾವಚಿತ್ರಸಹಿತ ಪರಿಚಯ ಅಲ್ಲಿಯ ಜನರಿಗೆ ಸಿಗುವಂತೆ ಮಾಡಬೇಕು’ ಎಂದು ಹೇಳಿದರು.

ಪುರಸ್ಕಾರ ಸ್ವೀಕರಿಸಿದ ಟಿ.ಎಸ್. ಛಾಯಾಪತಿ, ‘ಸ್ನಾತಕೋತ್ತರ ಪದವಿ ಪಡೆದಿದ್ದ ನಾನು ಬ್ಯಾಂಕ್ ಅಥವಾ ಬೇರೆ ಉದ್ಯೋಗಕ್ಕೆ ಸೇರಬಹುದಿತ್ತು. ಆದರೆ, ತಂದೆ ತ.ಸು. ಶಾಮರಾಯರ ಆಸೆಯಂತೆ ಪ್ರಕಾಶನ ಆರಂಭಿಸಿದೆ. ಯುವ ಬರಹಗಾರರನ್ನು ಬೆಳಕಿಗೆ ತರಲು, ಸಾಹಿತ್ಯಾಭಿರುಚಿ ಬೆಳೆಸುವ ಉದ್ದೇಶದಿಂದ ಈ ಪ್ರಕಾಶನ ಸಂಸ್ಥೆ ಶುರು ಮಾಡಿದೆ’ ಎಂದು ತಿಳಿಸಿದರು.

‘ಸಾಹಿತಿಗಳು ಪ್ರತಿಷ್ಠೆ ಬಿಡಬೇಕು’

‘ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಷಯ ಬಂದಾಗ ಸಾಹಿತಿಗಳು ಪ್ರತಿಷ್ಠೆ ಬಿಡುವುದು ಒಳ್ಳೆಯದು’ ಎಂದು ಸಿದ್ಧಲಿಂಗಯ್ಯ ಸಲಹೆ ನೀಡಿದರು.

‘ಸಭೆ, ಸಮಾರಂಭಗಳಲ್ಲಿ ಅಧ್ಯಕ್ಷತೆ ವಹಿಸಲು, ಇಲ್ಲವೆ ಅತಿಥಿಗಳಾಗಿ ಕರೆಯಲಿಲ್ಲ ಎಂಬ ಕಾರಣಕ್ಕೆ ಕೆಲವರು ಕಾರ್ಯಕ್ರಮಗಳಿಗೆ ಹೋಗುವುದೇ ಇಲ್ಲ. ಹಾಗೆ ಮಾಡದೆ ಕನ್ನಡದ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಕರೆಯದಿದ್ದರೂ ಪಾಲ್ಗೊಳ್ಳಬೇಕು. ವೇದಿಕೆಯಲ್ಲಿ ಕುಳಿತವರಷ್ಟೇ ಅತಿಥಿಗಳಲ್ಲ, ಸಭಿಕರ ಸಾಲಿನಲ್ಲಿ ಕುಳಿತವರೂ ಅತಿಥಿಗಳೇ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT