ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಮಾರ್ಪಾಡು ಜಾಲ; ಮತ್ತೆ ಐವರ ಬಂಧನ

Last Updated 14 ಜೂನ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡಿಸಿ ದೇಶದ ಭದ್ರತೆಗೆ ಧಕ್ಕೆ ತರುವುದರ ಜೊತೆಗೆ ಕೇಂದ್ರ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮತ್ತೆ ಐವರನ್ನು ಸೋಮವಾರ ಬಂಧಿಸಿದ್ದಾರೆ.

ಸೇನೆಯ ಗುಪ್ತಚರ ವಿಭಾಗ ನೀಡಿದ್ದ ಮಾಹಿತಿ ಆಧರಿಸಿ ತನಿಖೆ ಕೈಗೊಂಡಿದ್ದ ಸಿಸಿಬಿ ಭಯೋತ್ಪಾದನಾ ನಿಗ್ರಹ ವಿಭಾಗದ (ಎಟಿಸಿ) ಅಧಿಕಾರಿಗಳು, ಬಿಟಿಎಂ ಬಡಾವಣೆಯಲ್ಲಿ ವಾಸವಿದ್ದ ಕೇರಳದ ಇಬ್ರಾಹಿಂ ಪುಲ್ಲಟ್ಟಿ (36) ಹಾಗೂ ತಮಿಳುನಾಡಿನ ಗೌತಮ್ (27) ಎಂಬುವರನ್ನು ಸೆರೆ ಹಿಡಿದಿದ್ದರು.

‘ಆರೋಪಿಗಳು ತಮ್ಮದೇ ಜಾಲ ರೂಪಿಸಿಕೊಂಡು ಕೃತ್ಯ ಎಸಗುತ್ತಿದ್ದರು. ಅವರು ನೀಡಿದ್ದ ಮಾಹಿತಿ ಆಧರಿಸಿ ತಮಿಳುನಾಡಿನ ಸಂತನ್ ಕುಮಾರ್ (29), ಸುರೇಶ್ ತಂಗವೇಲು (32), ಜೈ ಗಣೇಶ್ (30), ಕೇರಳದ ಮಹಮ್ಮದ್ ಬಷೀರ್ (51) ಹಾಗೂ ಅನೀಸ್ ಅತ್ತಿಮನ್ನೀಲ್ (30) ಎಂಬುವರನ್ನು ಬಂಧಿಸಲಾಗಿದೆ. ಇವರಿಂದ 109 ಸಿಮ್ ಕಾರ್ಡ್‌ ಅಳವಡಿಸಿದ್ದ ಎಫ್‌ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್, ಮೂರು ಸಾವಿರ ಸಿಮ್ ಕಾರ್ಡ್, 23 ಲ್ಯಾಪ್‌ಟಾಪ್, 10 ಪೆನ್ ಡ್ರೈವ್ ಹಾಗೂ ಇತರೆ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಬಿಟಿಎಂ ಲೇಔಟ್, ಮಡಿವಾಳ ಹಾಗೂ ಸುದ್ದಗುಂಟೆಪಾಳ್ಯದಲ್ಲಿ ಆರೋಪಿಗಳು ವಾಸವಿದ್ದರು. ತಮ್ಮದೇ ಜಾಗದಲ್ಲಿ ಎಫ್‌ಸಿಟಿ ಬಾಕ್ಸ್ ಇಟ್ಟುಕೊಂಡು ಕೃತ್ಯ ಎಸಗುತ್ತಿದ್ದರು.’

‘ಆರೋಪಿ ಸಂತನ್ ಕುಮಾರ್, ಮೊಬೈಲ್ ಸೇವಾ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ. ಆತನೇ ತಮಿಳುನಾಡಿನ ಸುರೇಶ್ ತಂಗವೇಲು ಹಾಗೂ ಜೈಗಣೇಶ್ ಮೂಲಕ ಸಿಮ್‌ ಕಾರ್ಡ್‌ಗಳನ್ನು ಕೊರಿಯರ್ ಮೂಲಕ ಬೆಂಗಳೂರಿಗೆ ತರಿಸುತ್ತಿದ್ದ’ ಎಂದೂ ಹೇಳಿದರು.

‘ಪಾಕಿಸ್ತಾನ, ಯುಎಇ ಹಾಗೂ ಇತರೆ ದೇಶಗಳಿಂದ ಬರುತ್ತಿದ್ದ ಐಎಸ್‌ಡಿ ಕರೆಗಳನ್ನು ಆರೋಪಿಗಳು ಸ್ಥಳೀಯ ಕರೆಗಳನ್ನಾಗಿ ಮಾರ್ಪಡಿಸುತ್ತಿದ್ದರು. ಈ ಮೂಲಕ ದೇಶದ ಭದ್ರತೆಗೆ ಧಕ್ಕೆ ತರುತ್ತಿದ್ದರು. ಹವಾಲಾ ದಂಧೆಯನ್ನೂ ನಡೆಸುತ್ತಿದ್ದ ಮಾಹಿತಿ ಇದೆ. ಆರೋಪಿಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳೂ ತನಿಖೆ ಆರಂಭಿಸಿವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT