‘ನಮ್ಮ ಮೆಟ್ರೊ’ ಸೇರಿದ 6 ಬೋಗಿ ರೈಲು

7
ಸಂಚಾರಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ * ತಿಂಗಳ ಅಂತ್ಯದಲ್ಲಿ ಮತ್ತೊಂದು ರೈಲು ಸೇರ್ಪಡೆ

‘ನಮ್ಮ ಮೆಟ್ರೊ’ ಸೇರಿದ 6 ಬೋಗಿ ರೈಲು

Published:
Updated:
Deccan Herald

ಬೆಂಗಳೂರು: ‘ನಮ್ಮ ಮೆಟ್ರೊ’ಗೆ ಮತ್ತೊಂದು ಆರು ಬೋಗಿಗಳ ರೈಲು ಸೇರ್ಪಡೆಯಾಗಿದೆ. ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ ಸಂಚರಿಸುವ ಈ ನೂತನ ರೈಲು ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ಬೆಳಿಗ್ಗೆ 11.44 ನಿಮಿಷಕ್ಕೆ ಬೈಯಪ್ಪನಹಳ್ಳಿ ಕಡೆಗೆ ಪ್ರಯಾಣ ಆರಂಭಿಸಿತು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೊಸ ರೈಲಿಗೆ ಚಾಲನೆ ನೀಡಿದರು.

ದಟ್ಟಣೆ ಅವಧಿಯಲ್ಲಿ ಮೆಟ್ರೊ ರೈಲುಗಳು ವಿಪರೀತ ದಟ್ಟಣೆಯಿಂದ ಕೂಡಿರುತ್ತಿದ್ದವು. ಬೋಗಿಗಳ ಒಳಗೆ ಕಾಲಿಡುವುದಕ್ಕೂ ಜಾಗವಿಲ್ಲದಷ್ಟು ಪ್ರಯಾಣಿಕರ ದಟ್ಟಣೆ ಇರುತ್ತಿತ್ತು. ಹಾಗಾಗಿ ದಟ್ಟಣೆ ಅವಧಿಯಲ್ಲಾದರೂ 6 ಬೋಗಿಗಳ ಮೆಟ್ರೊ ಆರಂಭಿಸುವಂತೆ ಪ್ರಯಾಣಿಕರು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಮೇಲೆ ಒತ್ತಡ ಹೇರುತ್ತಲೇ ಇದ್ದರು.

2018ರ ಜೂನ್‌ 22ರಂದು 6 ಬೋಗಿಗಳ ಮೊದಲ ರೈಲು ಸಂಚಾರ ಆರಂಭಿಸಿತ್ತು. ದಟ್ಟಣೆ ಅವಧಿಯಲ್ಲಿ ಮಾತ್ರ ಸಂಚಾರ ನಡೆಸುತ್ತಿದ್ದ ಆ ರೈಲು ಪ್ರಯಾಣಿಕರಿಂದ ತುಂಬಿರುತ್ತಿತ್ತು. ಇನ್ನು ಮುಂದೆ 6 ಬೋಗಿಗಳ ಎರಡು ರೈಲುಗಳು ಲಭ್ಯವಾಗುವುದರಿಂದ ದಟ್ಟಣೆ ಅವಧಿಯಲ್ಲಿ ಪ್ರಯಾಣಿಕು ಕೊಂಚ ನಿಟ್ಟುಸಿರು ಬಿಡಬಹುದು.

‘ನಾನು ನಿತ್ಯ ವಿಜಯನಗರದಿಂದ ಬೈಯಪ್ಪನಹಳ್ಳಿವರೆಗೆ ಮೆಟ್ರೊದಲ್ಲಿ ಪ್ರಯಾಣಿಸುತ್ತೇನೆ. ಬೆಳಿಗ್ಗೆ 9 ಗಂಟೆ ಹೊತ್ತಿಗೆ ರೈಲಿನೊಳಗೆ ಸೇರಿಕೊಳ್ಳುವುದಕ್ಕೂ ಆಗದಷ್ಟು ಪ್ರಯಾಣಿಕರು ತುಂಬಿರುತ್ತಾರೆ. ಮೆಜೆಸ್ಟಿಕ್‌ ನಿಲ್ದಾಣದಲ್ಲಂತೂ ರೈಲಿನ ಒಳಗೆ ಸೇರಿಕೊಳ್ಳುವುದಕ್ಕೆ  ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಇನ್ನು ಮುಂದೆಯಾದರೂ ದಟ್ಟಣೆ ಕಡಿಮೆ ಆಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಶಿವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆರು ಬೋಗಿಗಳ ಎರಡು ರೈಲುಗಳನ್ನು ಓಡಿಸಿದ ಮಾತ್ರಕ್ಕೆ ಪ್ರಯಾಣಿಕರ ಸಮಸ್ಯೆ ನಿವಾರಣೆ ಆಗದು. ನಿಗಮದವರು ಆದಷ್ಟು ಬೇಗ ಪ್ರತಿಯೊಂದು ರೈಲಿನ ಬೋಗಿಗಳ ಸಂಖ್ಯೆಯನ್ನು 6ಕ್ಕೆ ಹೆಚ್ಚಿಸಬೇಕು’ ಎಂದು ರಾಜಾಜಿನಗರದ ರಾಘವೇಂದ್ರ ಒತ್ತಾಯಿಸಿದರು.

*****

‘ತಿಂಗಳಾಂತ್ಯದಲ್ಲಿ ಮತ್ತೊಂದು 6 ಬೋಗಿ ರೈಲು’

ಅಕ್ಟೋಬರ್‌ ಅಂತ್ಯದೊಳಗೆ 6 ಬೋಗಿಗಳ ಇನ್ನೊಂದು ರೈಲು ಸಂಚಾರ ಆರಂಭಿಸಲಿದೆ ಎಂದು ಅಜಯ್‌ ಸೇಠ್‌ ತಿಳಿಸಿದರು.

ಹೊಸ ರೈಲನ್ನು ಬಿಇಎಂಎಲ್‌ ಈಗಾಗಲೇ ಬಿಎಂಆರ್‌ಸಿಲ್‌ಗೆ ಹಸ್ತಾಂತರಿಸಿದೆ. ಅದಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸ ಪ್ರಗತಿಯಲ್ಲಿದೆ.

‘ಬಿಇಎಂಎಲ್‌ ನವೆಂಬರ್‌ ತಿಂಗಳಲ್ಲಿ ಮತ್ತೆ ಮೂರು ರೈಲುಗಳನ್ನು ನಿಗಮಕ್ಕೆ ಹಸ್ತಾಂತರಿಸಲಿದೆ. ಆ ರೈಲುಗಳು ಡಿಸೆಂಬರ್‌ ಅಂತ್ಯಕ್ಕೆ ಅಥವಾ ಜನವರಿಯಲ್ಲಿ ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿವೆ’ ಎಂದು ಸೇಠ್‌ ಮಾಹಿತಿ ನೀಡಿದರು.

‘ಹಸಿರು ಮಾರ್ಗಕ್ಕೆ ಹೋಲಿಸಿದರೆ ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು. ಬೆಳಿಗ್ಗೆ 9.30ರಿಂದ 10.30ರ ನಡುವೆ ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ಮೆಟ್ರೊದಲ್ಲಿ ಪ್ರಯಾಣಿಸುತ್ತಾರೆ. ಈ ಅವಧಿಯಲ್ಲಿ ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಒಂದು ಗಂಟೆಗೆ ಸರಾಸರಿ 19,400 ಮಂದಿ ಹಾಗೂ ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ ಸರಾಸರಿ 9,700 ಮಂದಿ ಪ್ರಯಾಣಿಸುತ್ತಾರೆ. ಹಾಗಾಗಿ ನಿಗಮಕ್ಕೆ ಇನ್ನು ಹಸ್ತಾಂತರವಾಗಲಿರುವ  ಐದು ರೈಲುಗಳನ್ನು ನೇರಳೆ ಮಾರ್ಗದಲ್ಲೇ ಓಡಿಸಬೇಕಾಗುತ್ತದೆ. ನಂತರವಷ್ಟೇ ಹಸಿರು ಮಾರ್ಗದಲ್ಲಿ 6 ಬೋಗಿಗಳ ರೈಲು ಓಡಿಸುತ್ತೇವೆ’ ಎಂದರು.

ಪಾದಚಾರಿ ಮೇಲ್ಸೇತುವೆ ಉದ್ಘಾಟನೆ

ಮೆಜೆಸ್ಟಿಕ್‌ನ ಮೆಟ್ರೊ ನಿಲ್ದಾಣದಿಂದ ಬಿಎಂಟಿಸಿ ನಿಲ್ದಾಣ, ಕೆಎಸ್‌ಆರ್‌ಟಿಸಿ ಟರ್ಮಿನಲ್‌ಗಳು ಹಾಗೂ ಸಂಗೊಳ್ಳಿ ರಾಯಣ್ಣ ನಗರ ರೈಲುನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.

ಮೆಜೆಸ್ಟಿಕ್‌ನಲ್ಲಿ ಈಗಾಗಲೇ ಇದ್ದ ಮೇಲ್ಸೇತುವೆಗೆ ಹೊಂದಿಕೊಂಡಂತೆ ಸುಮಾರು 70 ಮೀ ಉದ್ದದ ಉಕ್ಕಿನ ಮೇಲ್ಸೇತುವೆಯನ್ನು ಬಿಎಂಆರ್‌ಸಿಎಲ್ ನಿರ್ಮಿಸಿದೆ. 100 ಮೀ ಉದ್ದದಷ್ಟು ಹಳೆಯ ಮೇಲ್ಸೇತುವೆಯನ್ನು ನವೀಕರಣಗೊಳಿಸಿದೆ. 6 ಮೀ ಅಗಲದ ಈ ಸೇತುವೆಯ ಕಾಮಗಾರಿ ಮೂರು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದರೂ ಪ್ರಯಾಣಿಕರ ಬಳಕೆಗೆ ಲಭ್ಯವಾಗಿರಲಿಲ್ಲ.

ತೆರೆಯಿತು ಹೊಸದ್ವಾರ: ಕೆಎಸ್‌ಆರ್‌ಟಿಸಿ ಟರ್ಮಿನಲ್‌ ಕಡೆಯ ಎರಡು ಪ್ರವೇಶ ದ್ವಾರಗಳನ್ನು ಗುರುವಾರದಿಂದ ತೆರೆಯಲಾಗಿದೆ. ಇದರೊಂದಿಗೆ ನಿಲ್ದಾಣ ಐದು ದ್ವಾರಗಳೂ ಪ್ರಯಾಣಿಕರ ಬಳಕೆಗೆ ತೆರೆದುಕೊಂಡಂತಾಗಿದೆ. ಈ ದ್ವಾರವನ್ನು ಬಳಸುವ ಮೂಲಕ ಪ್ರಯಾಣಿಕರು ಇನ್ನು ಮೆಜೆಸ್ಟಿಕ್‌ ನಿಲ್ದಾಣದ ಕಾನ್‌ಕೋರ್ಸ್ ಹಂತದಿಂದ ನೇರವಾಗಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಕಡೆಗೆ ಹೋಗಬಹುದು. ಈ ಪ್ರವೇಶ ದ್ವಾರದ ಬಳಿಯೇ ಹೊಸ ಪಾದಚಾರಿ ಮೇಲ್ಸೇತುವೆ ಇದೆ. 

ನಿತ್ಯ 56 ಸಾವಿರ ಪ್ರಯಾಣಿಕರು ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣವನ್ನು ಬಳಸುತ್ತಾರೆ.

ಹೊಸ ರೈಲಿನಲ್ಲಿ ಆಧುನಿಕ ಸೌಲಭ್ಯ

* ಹೆಚ್ಚು ಇಂಧನ ಕ್ಷಮತೆಯನ್ನು ಹೊಂದಿದ್ದು, ಶೇ 15ರಷ್ಟು ಇಂಧನ ಉಳಿತಾಯವಾಗಲಿದೆ

* ಎಲ್‌ಇಡಿ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದ್ದು, ಅವು ಬೆಳಕಿನ ಅಗತ್ಯವನ್ನು ಗುರುತಿಸಿ ಸ್ವಯಂಚಾಲಿತವಾಗಿ ಹೊತ್ತಿಕೊಳ್ಳಲಿವೆ.

* ವಾತಾವರಣದ ಉಷ್ಣಾಂಶಕ್ಕೆ ಅನುಗುಣವಾಗಿ ಹವಾನಿಯಂತ್ರಣ ವ್ಯವಸ್ಥೆಯನ್ನು ಸರಿದೂಗಿಸುವ ವೆಂಟ್‌ ಮೋಡ್‌ ವ್ಯವಸ್ಥೆ ಇದರಲ್ಲಿದೆ

* ವೋಲ್ಟೇಜ್‌ ವ್ಯತ್ಯಯ ಹಾಗೂ ಕಂಪನಾಂಕ ವ್ಯತ್ಯಯವನ್ನು ದೂರದಿಂದಲೇ ನಿಯಂತ್ರಣ ಮಾಡುವ ಸಲುವಾಗಿ ರೈಲು ನಿರ್ವಹಣಾ ವ್ಯವಸ್ಥೆ ಅಳವಡಿಸಲಾಗಿದೆ

* ತುರ್ತು ಸಂದರ್ಭದಲ್ಲಿ 3 ಬೋಗಿಗಳ ಎರಡು ಘಟಕಗಳು ಒಟ್ಟಿಗೆ ಕಾರ್ಯನಿರ್ವಹಿಸುವಂತೆ ಮಾಡಬಲ್ಲ ಪೆಂಡೆಂಟ್‌ ಕಂಟ್ರೋಲ್‌ ಆಪರೇಷನ್‌ ವ್ಯವಸ್ಥೆ (ಹೋಸ್ಟ್ಲರ್‌ ಮೋಡ್‌) ಅಳವಡಿಸಲಾಗಿದೆ. ರೈಲುಗಳ ನಿರ್ವಹಣೆ ವೇಳೆ ಇದು ಉಪಯೋಗಕ್ಕೆ ಬರಲಿದೆ

*  ಬೋಗಿಗಳ ರೈಲಿನಲ್ಲಿ ಎರಡು ಕಂಪ್ರೆಸರ್‌ ಬಳಕೆಯಾಗುತ್ತಿತ್ತು. 6 ಬೋಗಿಗಳ ರೈಲಿನಲ್ಲಿ 4ರ ಬದಲು 3 ಕಂಪ್ರೆಸರ್‌ಗಳು ಬಳಕೆಯಾಗಲಿವೆ

* ರೈಲು ಬ್ರೇಕ್‌ ವ್ಯವಸ್ಥೆಗೆ ಡೇಟಾ ಲಾಗರ್‌ ಅಳವಡಿಸಲಾಗಿದೆ

* ಜಾಹೀರಾತು ಪ್ರದರ್ಶನಕ್ಕೆ ಸ್ಪ್ಲಿಟ್‌ ಸ್ಕ್ರೀನ್‌ ಸೌಲಭ್ಯ ಕಲ್ಪಿಸಲಾಗಿದೆ

***

ಅಂಕಿ ಅಂಶ

6 ಬೋಗಿಗಳೋ ರೈಲಿನಲ್ಲಿ ಏಕಕಾಲದಲ್ಲಿ ಪ್ರಯಾಣಿಸಬಹುದಾದ ಪ್ರಯಾಣಿಕರ ಗರಿಷ್ಠ ಸಂಖ್ಯೆ 2,074

3 ಬೋಗಿಗಳ ಮೆಟ್ರೊ ರೈಲಿನಲ್ಲಿ ಏಕಕಾಲಕ್ಕೆ ಪ್ರಯಣಿಸಬಹುದಾದ ಪ್ರಯಾಣಿಕರ ಗರಿಷ್ಠ ಸಂಖ್ಯೆ 975

6 ಬೋಗಿಗಳ ರೈಲಿನಲ್ಲಿ ಆಸನಗಳ ಸಂಖ್ಯೆ 280

ಹೊಸ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ತಗಲಿದ ವೆಚ್ಚ ₹ 1.40 ಕೋಟಿ

Tags: 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !