ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದರಕ್ಷೆ ಹೊರಗಿಟ್ಟು ವಿದ್ಯಾರ್ಥಿಗಳ ಧರಣಿ

ಐಐಎಂಬಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಿತ್ತಿಪತ್ರ ಪ್ರದರ್ಶನ
Last Updated 19 ಡಿಸೆಂಬರ್ 2019, 20:28 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ನಿಷೇಧಾಜ್ಞೆ ನಡುವೆಯೂ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಬನ್ನೇರುಘಟ್ಟ ರಸ್ತೆಯ ಐಐಎಂಬಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗುರುವಾರ ಸಂಜೆ ಕಾಲೇಜು ಆವರಣದಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.

‘ನಾವು ನಿಮ್ಮ ರಾಜಕೀಯವನ್ನು ಅರ್ಥಮಾಡಿಕೊಳ್ಳಬಲ್ಲೆವು, ನಮ್ಮನ್ನು ವಿಭಜಿಸಲು ನಿಮ್ಮಿಂದ ಸಾಧ್ಯವಿಲ್ಲ, ಏಕೆಂದರೆ ನಾವು ಭಾರತೀಯರು’ ಎಂದು ಭಿತ್ತಿಪತ್ರಗಳನ್ನು ತೋರಿಸಿ ಮೌನ ಪ್ರತಿಭಟನೆ ನಡೆಸಿದರು. ‘ಅನ್ಯಾಯವೇ ಕಾನೂನು ಆದಾಗ, ದಂಗೆ ಕರ್ತವ್ಯವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಬ್ರಿಟಿಷರಂತೆ ದೇಶದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕಾಲೇಜು ದ್ವಾರದ ಎದುರು ಪ್ರತಿಭಟನೆ ನಡೆಸಲು ಮುಂದಾದ ಮೂವರು ಶಿಕ್ಷಕರು ಹಾಗು ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರ ಈ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ತಮ್ಮ ಪಾದರಕ್ಷೆಗಳನ್ನು ಗೇಟಿನ ಮುಂಭಾಗ ಇಟ್ಟು ಪ್ರತಿಭಟಿಸಿದರು. ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸುವವರೆಗೂ ಪಾದರಕ್ಷೆಗಳನ್ನು ಹಿಂಪಡೆಯಲು ನಿರಾಕರಿಸಿದರು. ಪಾದರಕ್ಷೆ ತೆಗೆದುಕೊಳ್ಳುವುದಾದರೆ ಗೇಟಿನ ಹೊರಗೆ ಹೋಗಿ ತೆಗೆದುಕೊಳ್ಳುವುದಾಗಿ ಪಟ್ಟು ಹಿಡಿದರು. ಇದಕ್ಕೆ ಪೊಲೀಸರು ಒಪ್ಪಲಿಲ್ಲ.

ವಶಕ್ಕೆ ಪಡೆದವರ ಬಿಡುಗಡೆ: ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಪೊಲೀಸರು ವಶಕ್ಕೆ ಪಡೆದ ವಿದ್ಯಾರ್ಥಿ– ಶಿಕ್ಷಕರನ್ನು ಬಿಡುಗಡೆ ಮಾಡಿದರು. ಇದಕ್ಕೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ವ್ಯಕ್ತಪಡಿಸಿದರು. ಬಿಡುಗಡೆಗೊಂಡ ಶಿಕ್ಷಕರೊಬ್ಬರು, ‘ನಮ್ಮ ಈ ಪ್ರತಿಭಟನೆ ಗಣತಂತ್ರದ ಉಳಿವಿಗಾಗಿ. ಇದನ್ನು ಬಲ ಪ್ರಯೋಗದಿಂದ ಹತ್ತಿಕ್ಕಲು ಪ್ರಯತ್ನಿಸಬೇಡಿ’ ಎಂದು ಎಚ್ಚರಿಸಿದರು.

ಪ್ರತಿಭಟನೆ ಹಿಂಪಡೆಯುವಂತೆ ಒತ್ತಡ: ‘ಪ್ರತಿಭಟನೆ ಹಿಂಪಡೆಯಿರಿ, ಇಲ್ಲದಿದ್ದಲ್ಲಿ ಕ್ರಮ ಜರುಗಿಸಲಾಗುವುದು’ ಎನ್ನುವ ಮೂಲಕ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿತು. ವಿದ್ಯಾರ್ಥಿಗಳು ಇದಕ್ಕೆ ಜಗ್ಗಲಿಲ್ಲ. ಒತ್ತಡ ತಂತ್ರದ ವಿರುದ್ಧ ಮೊಬೈಲ್ ಟಾರ್ಚ್ ಲೈಟ್ ಹತ್ತಿಸಿ ಮೌನದಿಂದಲೇ ‘ಮಣಿಯುವುದಿಲ್ಲ’ ಎಂಬ ಸಂದೇಶ ಸಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT