ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣಿರುವ ಮರಕ್ಕೆ ಕಲ್ಲೇಟು ಜಾಸ್ತಿ...!

ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌
Last Updated 10 ಜೂನ್ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು: ನಲವತ್ತು ವರ್ಷಗಳ ರಾಜಕೀಯ ಬದುಕನ್ನು ಬೇರು ಮಟ್ಟದಿಂದ ಕರಗತ ಮಾಡಿಕೊಂಡ ವ್ಯಕ್ತಿತ್ವ. ಕೇವಲ ರಾಜಕಾರಣ–ಕಾನೂನು ಮಾತ್ರವಲ್ಲ, ಹೊಡಿ, ಬಡಿ, ಕಡಿಯಂಥ ವೈರತ್ವವನ್ನೂ ಎದುರಿಸಿದವರು. ಅಕ್ರಮ ಆಸ್ತಿ ಗಳಿಕೆಯಂಥ ಪ್ರಕರಣದಿಂದ ಹಿಡಿದು ರೌಡಿ ಶೂಟೌಟ್‌ ಪ್ರಕರಣದಲ್ಲಿ ನಂಟು ಹೊಂದಿದ್ದಾರೆ ಎಂಬ ಆರೋಪವನ್ನು ಎದುರಿಸಿ ಈಜಿ ಬಂದವರು. ಯಲಹಂಕ ಕ್ಷೇತ್ರದ ‘ಕ್ಲಾಸ್‌’ ಮತ್ತು ‘ಮಾಸ್‌’ ಮತದಾರರ ಮನವೊಲಿಸಿ ಬಿಜೆಪಿ ಬಾವುಟದ ಅಡಿ ಮೂರನೇ ಬಾರಿಗೆ ಗೆದ್ದವರು ಶಾಸಕ ಎಸ್‌.ಆರ್‌.ವಿಶ್ವನಾಥ್‌.

ಗೆಲುವಿನ ಹಿಂದಿನ ಪರಿಶ್ರಮ ಹಾಗೂ ಮುಂದಿನ ಗುರಿ ಕುರಿತು ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು.

*ಅಪರಾಧಿಗಳ ಜತೆಗಿನ ಪ್ರಕರಣಗಳು ನಿಮ್ಮ ಮೇಲೆ ತಳುಕು ಹಾಕಿಕೊಂಡವು ಏಕೆ?

ರಾಜಕೀಯವಾಗಿ ಅಥವಾ ನಾಗರಿಕ ಪ್ರಕರಣಗಳ ಮೂಲಕ ನನ್ನನ್ನು ಹಣಿಯಲಾಗದು ಎಂದು ಅರಿತ ಮಂದಿ ಇಂಥ ತಂತ್ರ ಮುಂದಿಟ್ಟರು. ಉದಾಹರಣೆಗೆ ಕಡಬಗೆರೆ ಶೀನನ ಮೇಲಿನ ಶೂಟೌಟ್‌ ಪ್ರಕರಣದಲ್ಲಿ ನಾನು ಹಿನ್ನೆಲೆಯಲ್ಲಿದ್ದೇನೆ ಎಂದು ಅವನೇ ನನ್ನ ಮೇಲೆ ಆರೋಪ ಮಾಡಿದಾಗ ಒಂದು ಕ್ಷಣ ಎಲ್ಲರೂ ನಂಬುವ ಸ್ಥಿತಿ ನಿರ್ಮಾಣವಾಯಿತು. ಅವೆಲ್ಲಾ ನ್ಯಾಯಾಲಯದಲ್ಲಿ ಬಿದ್ದುಹೋಗಿವೆ. ರಾಜಕೀಯದಲ್ಲಿ ಬೇರೆಯವರತ್ತ ಕಲ್ಲು ಹೊಡೆಯುವವರು ಜಾಸ್ತಿ. ಸಮೃದ್ಧ ಫಲ ಹೊಂದಿರುವ ಮರವೇ ಕಲ್ಲೇಟಿಗೆ ಹೆಚ್ಚು ಗುರಿಯಾಗುತ್ತದೆ.

*ಮತದಾರರ ಒಲವು ಗಳಿಸಲು ಏನು ಮಾಡಿದಿರಿ?

ಈ ಬಾರಿ ಚುನಾವಣೆಯಲ್ಲಿ ಶೇ 63ರಷ್ಟು ಮತದಾನವಾಗಿದೆ. ಇದು ವಿಶೇಷ. ಏಕೆಂದರೆ ಅಪಾರ್ಟ್‌ಮೆಂಟ್‌ ನಿವಾಸಿಗಳು, ಸುಶಿಕ್ಷಿತರೆನಿಸಿಕೊಂಡವರು ವೋಟು ಹಾಕಲು ಬರುವುದೇ ಇಲ್ಲ. ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘಗಳನ್ನು ಭೇಟಿಯಾಗಿ ಜಾಗೃತಿ ಮೂಡಿಸಿದೆವು. ಸಹಜವಾಗಿ ಒಲವು ವ್ಯಕ್ತವಾಯಿತು. ಮೂರನೇ ಬಾರಿ ಆಯ್ಕೆ ಮಾಡುವ ಮೂಲಕ ಎರಡು ಬಾರಿ ಗೆದ್ದು ನಾನು ಮಾಡಿದ ಕೆಲಸಗಳನ್ನು ಜನ ಗೌರವಿಸಿದ್ದಾರೆ.

ನನ್ನ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆಯಾಗಿತ್ತು. ಇದನ್ನು ಬೇಧಿಸುವುದು ಸುಲಭವಾಗಿರಲಿಲ್ಲ. ರಾಜಕೀಯದ ಜತೆಗೆ ಆರ್‌ಎಸ್‌ಎಸ್‌, ಹಿಂದೂ ಜಾಗರಣಾ ವೇದಿಕೆಗಳಲ್ಲಿ ಸಕ್ರಿಯನಾಗಿದ್ದೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ಮುಂದೆ ಬಂದಿದ್ದೇನೆ.

*ಕ್ಷೇತ್ರವನ್ನು ಅಪರಾಧಮುಕ್ತವನ್ನಾಗಿಸುವಲ್ಲಿ ನಿಮ್ಮ ನಡೆ ಏನು?

ಈಗ ಅಪರಾಧ ಪ್ರಕರಣಗಳು ಬಹುತೇಕ ನಿಯಂತ್ರಣದಲ್ಲಿವೆ. ಕ್ಷೇತ್ರ ವ್ಯಾಪ್ತಿಯಲ್ಲಿ 160 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಹಾಕಿಸಿದ್ದೇನೆ. ಅವುಗಳ ಪೈಕಿ 60 ಈಗಾಗಲೇ ಚಾಲನೆಯಲ್ಲಿವೆ. ಹೀಗಾಗಿ ಅಪರಾಧ ಎಸಗುವವರೂ ಎಚ್ಚರದಿಂದ ಇದ್ದಾರೆ. ರೌಡಿಗಳ ಕಾಟ ನಿಯಂತ್ರಿಸಲು ದಾಸನಪುರದಲ್ಲಿ ಒಂದು ಠಾಣೆ ತೆರೆಯಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇನೆ. ಅಗತ್ಯಬಿದ್ದರೆ ಇನ್ನೂ ಹೊಸ ಠಾಣೆ, ಗಸ್ತು ವ್ಯವಸ್ಥೆ ಕೈಗೊಳ್ಳಬಹುದು. ಹೊರಗಿನಿಂದ ಬಂದವರೇ ದುಷ್ಕೃತ್ಯ ಎಸಗುತ್ತಿದ್ದಾರೆ. ಅವರನ್ನು ಹದ್ದುಬಸ್ತಿನಲ್ಲಿಡಲಾಗಿದೆ. ಕ್ಷೇತ್ರದಲ್ಲಿ ನಿಂತು ಹೋಗಿದ್ದ ಎಷ್ಟೋ ಹಬ್ಬಹರಿದಿನ ಜಾತ್ರೆಗಳು ಮತ್ತೆ ಆರಂಭಗೊಂಡಿವೆ. ಎಲ್ಲ ಸಮುದಾಯದವರು ಸೌಹಾರ್ದದಿಂದಲೇ ಕಾರ್ಯಕ್ರಮಗಳನ್ನು ಮಾಡುತ್ತಾರೆ.

*ಚುನಾವಣೆಯಲ್ಲಿ ಎಷ್ಟು ‘ಹೂಡಿಕೆ’ ಮಾಡಿದಿರಿ?

ಹ್ಹ... ಹ್ಹ (ನಗು). ಅದೆಲ್ಲವನ್ನೂ ಇಲ್ಲಿ ಹೇಳಲಾಗದು. ಚುನಾವಣಾ ವೆಚ್ಚದ ಇತಿಮಿತಿಯೊಳಗೆ ಎಷ್ಟು ಖರ್ಚು ಮಾಡಬೇಕೋ ಅಷ್ಟು ಮಾಡಿದ್ದೇನೆ. ಉಳಿದಂತೆ ನಮ್ಮ ಸ್ನೇಹಿತರು ಖರ್ಚು ಮಾಡಿದ್ದಾರೆ. ಎಲ್ಲೆಲ್ಲಿ ಏನೇನು ಮಾಡಬೇಕೋ ಆ ವ್ಯವಸ್ಥೆ ಮಾಡಿದ್ದಾರೆ!. ಕ್ಷೇತ್ರದ ಸುಶಿಕ್ಷಿತ ಮತದಾರರನ್ನು ಹಣದಿಂದ ಖರೀದಿಸಲಾಗದು. ಅವರಿಗೆ ನಾವು ಮಾಡಿದ ಕೆಲಸಗಳು ಬೇಕು. ಅದನ್ನು ನೋಡಿ ಮತ ಹಾಕಿದ್ದಾರೆ.

*ನಿಮ್ಮ ಮುಂದಿರುವ ಸವಾಲುಗಳೇನು?

ಇಷ್ಟು ಕಾಲ ಒಂದು ಆಡಳಿತ ಪಕ್ಷದ ವಿರುದ್ಧ ನಾವು (ಬಿಜೆಪಿ ಮತ್ತು ಜೆಡಿಎಸ್‌) ಜಗಳವಾಡುತ್ತಿದ್ದೆವು. ಈಗ ಅವರವರೇ ( ಕಾಂಗ್ರೆಸ್– ಜೆಡಿಎಸ್‌) ಜಗಳವಾಡುತ್ತಿದ್ದಾರೆ. ನಾವು ನೋಡಿಕೊಂಡು ಇರಬೇಕು ಅಷ್ಟೇ. ಈ ಜಗಳದ ನಡುವೆ ನಾವೂ ಒಂದಿಷ್ಟು ಜಗಳವಾಡಿಯಾದರೂ ಕ್ಷೇತ್ರಕ್ಕೆ ಅನುದಾನ ತರಬೇಕು. ಇದೊಂದೇ ಸವಾಲು ಇದೆ.

*ಅಧಿವೇಶನದ ನಡವಳಿಕೆಗಳ ಬಗ್ಗೆ ಏನೆನ್ನುತ್ತೀರಿ?

ನೋಡಿ, ಕಳೆದ ಸರ್ಕಾರದ ಅವಧಿಯಲ್ಲಿ ಚರ್ಚೆಗೆ ಆಸಕ್ತಿದಾಯಕವಾದ ವಿಷಯಗಳೇ ಇರುತ್ತಿರಲಿಲ್ಲ. ನೈಸ್‌ ರಸ್ತೆ ಹಗರಣ, ಬಿಡಿಎ ಅವ್ಯವಹಾರ ಇತ್ಯಾದಿಯನ್ನು ನಾವು ಬಯಲಿಗೆಳೆದು ವಿಧಾನಸಭೆಯಲ್ಲಿಟ್ಟೆವು. ಸರ್ಕಾರವೂ ಅದನ್ನು ಒಪ್ಪಿಕೊಂಡಿತು. ಆದರೆ, ಕ್ರಮ ಏನಾಯಿತು ಹೇಳಿ? ಸುಮ್ಮನೆ ನಾವೆಲ್ಲಾ ಕಷ್ಟಪಟ್ಟದ್ದೇ ಬಂತು. ಈ ಬಾರಿ ನಮ್ಮ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರೇ ಮುಂದಿದ್ದಾರೆ. ಸುಮ್ಮನೆ ಬಿಡುವುದಿಲ್ಲ.

*ಸರ್ಕಾರ ಅಲುಗಾಡಿಸಲು ತಂತ್ರ ರೂಪಿಸಿದ್ದೀರಾ?

ಉರುಳುವ ಮರವನ್ನು ಕೆಡವಬೇಕೇ?. ಅದು ತಾನಾಗಿಯೇ ಬಿದ್ದು ಹೋಗುತ್ತದೆ.

*ಮುಂದಿನ ಐದು ವರ್ಷಗಳವರೆಗೆ ಯೋಜನೆಗಳೇನು?

ಈ ಬಾರಿಯಾದರೂ ವಸತಿರಹಿತರಿಗೆ ಮನೆ, ಕಾಲೊನಿಗಳಿಗೆ ಮೂಲಸೌಲಭ್ಯ ಒದಗಿಸಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಕೆರೆ ಅಭಿವೃದ್ಧಿ ಮಾಡಬೇಕು. ಸರ್ಕಾರಿ ಶಾಲೆ, ಕಾಲೇಜುಗಳನ್ನು ಸಬಲಗೊಳಿಸಬೇಕು.

*ರಾಜಕೀಯ ಭವಿಷ್ಯದ ಯೋಜನೆ?

ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಗೆಲುವಿಗೆ ಪೂರಕವಾದ ಕೆಲಸ ಮಾಡಬೇಕು. ಅತ್ತ ಗಮನ ಹರಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT