ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲಪಾಡ್‌ ಅಕಾಡೆಮಿ ಒತ್ತುವರಿ ತೆರವು

ನಗರದ 18 ಕಡೆಯಲ್ಲೂ ತೆರವು ಕಾರ್ಯಾಚರಣೆ ಚುರುಕು
Last Updated 13 ಸೆಪ್ಟೆಂಬರ್ 2022, 20:04 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ವಲಯದ ಜೊತೆಗೆ ಯಲಹಂಕ ವಲಯದಲ್ಲೂ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆಯನ್ನು ಬಿಬಿಎಂಪಿ ಮಂಗಳವಾರವೂ ಮುಂದುವರಿಸಿ, ನಲಪಾಡ್‌ ಅಕಾಡೆಮಿ ಸೇರಿ 18 ಒತ್ತುವರಿಗಳನ್ನು ತೆರವುಗೊಳಿಸಿದೆ.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಶಾಂತಿನಿಕೇತನ ಲೇಔಟ್, ಪಾಪಯ್ಯ ರೆಡ್ಡಿ ಲೇಔಟ್, ಚಲ್ಲಘಟ್ಟ ಹಾಗೂ ಯಲಹಂಕ ವಲಯ ಸ್ಯಾಟಲೈಟ್ ಟೌನ್‌ನಲ್ಲಿ ರಾಜಕಾಲುವೆ ಒತ್ತುವರಿಯನ್ನು ಬಿಬಿಎಂಪಿ ಎಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, ಮಾರ್ಷಲ್‌ಗಳು, ಪೊಲೀಸ್ ಸಿಬ್ಬಂದಿ ನೆರವಿನೊಂದಿಗೆ ತೆರವು ಕಾರ್ಯಾಚರಣೆ ನಡೆಸಿದರು.

ಚಲ್ಲಘಟ್ಟದ ಸರ್ವೆ ನಂ. 70/14ರಲ್ಲಿರುವ ನಲಪಾಡ್ ಅಕಾಡೆಮಿ ವತಿಯಿಂದ 2.5 ಮೀಟರ್ ಅಗಲ ಹಾಗೂ 150.5 ಮೀಟರ್ ಉದ್ದದ ರಾಜಕಾಲುವೆ ಒತ್ತುವರಿಯಾಗಿದೆ.ಕಾಂಕ್ರೀಟ್ ಅಳವಡಿಸಿ ಎತ್ತರವಾಗಿ ಗೋಡೆ ನಿರ್ಮಿಸಿದ ಅದರ ಮೇಲೆ ಫೆನ್ಸಿಂಗ್‌ ಅಳವಡಿಸಲಾಗಿತ್ತು. ಮಂಗಳವಾರ ಸುಮಾರು 50 ಮೀಟರ್‌ನಷ್ಟು ಒತ್ತುವರಿ ತೆರವು ಮಾಡಲಾಗಿದೆ. ಬುಧವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ತಿಳಿಸಿದರು.

ಶಾಂತಿನಿಕೇತನ ಲೇಔಟ್‌ನಲ್ಲಿ 7 ಕಟ್ಟಡ ಹಾಗೂ 4 ಗೋಡೆಗಳನ್ನು ತೆರವುಗೊಳಿಸಲಾಗಿದೆ. ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ ಅಪಾರ್ಟ್‌ಮೆಂಟ್‌ ಗೋಡೆ ಹಾಗೂ ನಾಲ್ಕು ಶೆಡ್‌, ಬಸವನಪುರದಲ್ಲಿ ಗೋಡೆ ಹಾಗೂ ಖಾಲಿ ಜಾಗದ ಒತ್ತುವರಿ ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿದೆ.

’ಯಲಹಂಕ ವಲಯದ ಸ್ಯಾಟಲೈಟ್ ಟೌನ್ ವ್ಯಾಪ್ತಿಯಲ್ಲಿ ಎನ್.ಸಿ.ಬಿ.ಎಸ್ ಇನ್‌ಸ್ಟಿಟ್ಯೂಟ್‌ ಒತ್ತುವರಿ ಮಾಡಿಕೊಂಡಿದ್ದ 120 ಮೀಟರ್ ಉದ್ದದ ರಾಜಕಾಲುವೆಯ ಮೇಲಿದ್ದ ಗೋಡೆಯನ್ನು ತೆರವುಮಾಡಲಾಗಿದೆ. ನಗರದಲ್ಲಿ ರಾಜಕಾಲುವೆಗಳನ್ನು ಭೂಮಾಪಕರ ಮೂಲಕ ಸಮೀಕ್ಷೆ ಮಾಡಿ, ಮಾರ್ಕಿಂಗ್ ಮಾಡಿಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ಆಗಿರುವ ಪ್ರದೇಶಗಳ ತೆರವು ಕಾರ್ಯಾಚರಣೆ ಮುಂದುವರಿಸಲಾಗುತ್ತದೆ‘ ಎಂದು ಬಿಬಿಎಂಪಿ ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ತಿಳಿಸಿದರು.

ಬೊಮ್ಮನಹಳ್ಳಿಯಲ್ಲಿ ತೆರವು ಏಕಿಲ್ಲ?

‘ಪ್ರತಿ ಸಣ್ಣ ಮಳೆ ಬಂದಾಗಲೂ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್‌ ಸಿಟಿವರೆಗೂ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದೆ.

ಬೊಮ್ಮನಹಳ್ಳಿ ವಲಯದಲ್ಲಿ ರಾಜಕಾಲುವೆ ಅತ್ಯಂತ ಹೆಚ್ಚು ಒತ್ತುವರಿಯಾಗಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಇಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿಲ್ಲ. ಬೃಹತ್‌ ಡೆವಲಪರ್‌ಗಳ ಒತ್ತಾಯಕ್ಕೆ ಮಣಿದು, ಕಾಲಹರಣ ಮಾಡುತ್ತಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು ಇತ್ತ ಗಮನಹರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT