ಸೋಮವಾರ, ಫೆಬ್ರವರಿ 24, 2020
19 °C
ಸಮಾಜವಾದಿ ಚಿಂತಕ ಬಾಪೂ ಹೆದ್ದೂರಶೆಟ್ಟಿ ಅಭಿಮತ

ಎನ್‌ಆರ್‌ಸಿಯಿಂದ ಭ್ರಷ್ಟಾಚಾರ: ಚಿಂತಕ ಬಾಪೂ ಹೆದ್ದೂರಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜಮೀನಿನ ಪಹಣಿ ಪಡೆಯಲೂ ರೈತರು ಲಂಚ ನೀಡಬೇಕಾದ ಪರಿಸ್ಥಿತಿ ನಮ್ಮಲ್ಲಿ ನಿರ್ಮಾಣವಾಗಿದೆ. ಹೀಗಿರುವಾಗ ನಮ್ಮ ನಾಗರಿಕತ್ವ ಪ್ರಶ್ನಿಸುವ ರಾಷ್ಟ್ರೀಯ ಪೌರತ್ವ ನೋಂದಣಿಯು (ಎನ್‌ಆರ್‌ಸಿ) ದೇಶವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಸಮಾಜವಾದಿ ಚಿಂತಕ ಬಾಪೂ ಹೆದ್ದೂರಶೆಟ್ಟಿ ಅಭಿಪ್ರಾಯಪಟ್ಟರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಪೌರತ್ವ ಕಾಯ್ದೆ, ಎನ್‌ಆರ್‌ಸಿ, ಎನ್‌ಪಿಆರ್–ಕಾರ್ಮಿಕ ವಿರೋಧಿ, ಜನಸಾಮಾನ್ಯ ವಿರೋಧಿ’ ಕುರಿತು ಮಾತನಾಡಿದರು. 

‘ಮತದಾನದ ಗುರುತಿನ ಚೀಟಿ, ಆಧಾರ್ ಕಾರ್ಡ್‌ ಸೇರಿದಂತೆ ವಿವಿಧ ದಾಖಲಾತಿಗಳಲ್ಲಿ ನಮ್ಮ ವಿಳಾಸ ವ್ಯತ್ಯಾಸವಾಗಿದ್ದಲ್ಲಿ  ಪೌರತ್ವ ನಿರಾಕರಿಸುವ ಸಾಧ್ಯತೆಗಳಿವೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಅಧಿಕಾರಿಗಳು ದಾಖಲಾತಿಗಳ ಲೋಪದ ನೆಪದಲ್ಲಿ ಲಂಚಕ್ಕೆ ಬೇಡಿಕೆಯಿಟ್ಟರೂ ಅಚ್ಚರಿ ಪಡಬೇಕಾಗಿಲ್ಲ. ವಿಶ್ವದಲ್ಲಿ ಈಗಾಗಲೇ ಧರ್ಮ ಮತ್ತು ರಾಷ್ಟ್ರದ ಹೆಸರಿನಲ್ಲಿ ಲಕ್ಷಾಂತರ ಮಂದಿ ಸತ್ತಿದ್ದಾರೆ. ಇದೀಗ ಎನ್‌ಆರ್‌ಸಿ ಜಾರಿಯಿಂದ ಹಿಂದೂ ಮತ್ತು ಮುಸ್ಲಿಂ ಧರ್ಮದ ನಡುವೆ ಸಂಘರ್ಷಕ್ಕೆ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಗಲಿದೆ’ ಎಂದರು. 

‘ವಸುದೈವ ಕುಟುಂಬಕಂ ಪರಿಕಲ್ಪನೆ ನಮ್ಮದು. ಹಾಗಾಗಿ ನಮ್ಮ ದೇಶಕ್ಕೆ ಬರುವ ವಿದೇಶಿಗರಿಗೆ ನಿರ್ಬಂಧ ಹಾಕುವ ಕ್ರಮ ಸರಿಯಲ್ಲ. ಉದ್ಯೋಗ ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ನಾವು ಕೂಡ ಒಂದೆಡೆಯಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದೇವೆ. ವಿಶಾಲ ಮನಸ್ಥಿತಿಯಿಂದ ದೇಶಕ್ಕೆ ಬರುವವರನ್ನು ಬರಮಾಡಿಕೊಳ್ಳಬೇಕು. ವಲಸಿಗರನ್ನು ಬಂಧನ ಕೇಂದ್ರದಲ್ಲಿ ಇರಿಸುವುದರಿಂದ ನಮಗೇ ನಷ್ಟವಾಗುತ್ತದೆ. ಈಗ ಅವರು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧೆಡೆ ದುಡಿದು, ಜೀವನ ನಡೆಸುತ್ತಿದ್ದಾರೆ. ಬಂಧನದಲ್ಲಿ ಇರಿಸಿದಲ್ಲಿ ಅವರಿಗೆ ಅಗತ್ಯವಿರುವ ಆಹಾರ ಹಾಗೂ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು. ಇದಕ್ಕೆ ಸರ್ಕಾರ ಯಾವ ಹಣ ಬಳಕೆ ಮಾಡಿಕೊಳ್ಳುತ್ತದೆ’ ಎಂದು ಪ್ರಶ್ನಿಸಿದರು. 

ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್, ‘ಸಂವಿಧಾನದ ಪ್ರಕಾರ ಭಾರತ ಧರ್ಮನಿರಪೇಕ್ಷ ರಾಷ್ಟ್ರ. ಆದ್ದರಿಂದ ಧರ್ಮದ ಆಧಾರದ ಮೇಲೆ ಕಾಯ್ದೆ ರೂಪಿಸುವ ಕ್ರಮ ಸರಿಯಲ್ಲ. ಸರ್ಕಾರ ವಿರೋಧಿಸುವವರನ್ನು ಹತ್ತಿಕ್ಕಲಾಗುತ್ತಿದ್ದು, ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು