ಗುರುವಾರ , ಮಾರ್ಚ್ 4, 2021
24 °C

‘ವಿಷನ್‌ ಬೆಂಗಳೂರು 2022’ ಉಸ್ತುವಾರಿಗೆ ಬಿಎಸ್‌ವೈ ಅಧ್ಯಕ್ಷತೆಯ ಅಪೆಕ್ಸ್‌ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ‘ಬೆಂಗಳೂರು ವಿಷನ್‌ 2022’ ಯೋಜನೆಯಡಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಕಾರ್ಯಕ್ರಮಗಳ ಬಗ್ಗೆ ನಿಗಾವಹಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಅಪೆಕ್ಸ್‌ ಮೇಲುಸ್ತುವಾರಿ ಸಮಿತಿ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ.

ಈ ಎರಡೂ ಸಮಿತಿಗಳೂ ತಲಾ 20 ಸದಸ್ಯರನ್ನು ಒಳಗೊಂಡಿರಲಿವೆ. ಬಿಬಿಎಂಪಿ ಆಯುಕ್ತರು ಈ ಎರಡೂ ಸಮಿತಿಗಳಿಗೂ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಮುಖ್ಯಮಂತ್ರಿ ಅಧ್ಯಕ್ಷತೆಯ ಅಪೆಕ್ಸ್‌ ಮೇಲುಸ್ತುವಾರಿ ಸಮಿತಿಯು ಪ್ರತಿ 15 ದಿನಗಳಿಗೊಮ್ಮೆ ಈ ಯೋಜನೆಯ ಕಾರ್ಯಕ್ರಮಗಳ ಪ್ರಗತಿ ಪ್ರಗತಿ ಪರಿಶೀಲನೆ ನಡೆಸಲಿದೆ. ಮುಖ್ಯ ಪ್ರಸ್ತಾವನೆಗಳ ಬಗ್ಗೆ ಏಕಗವಾಕ್ಷಿ ಮಾದರಿಯಲ್ಲಿ ನಿರ್ಣಯ ಕೈಗೊಳ್ಳಲಿದೆ. ತುರ್ತು ಸಂದರ್ಭದಲ್ಲಿ ಅಪೆಕ್ಸ್‌ ಮೇಲುಸ್ತುವಾರಿ ಸಮಿತಿಯ ಅನುಮೋದನೆ ನಿರೀಕ್ಷಿಸಿ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗಿದೆ.

ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಮೇಲುಸ್ತುವಾರಿ ಸಮಿತಿಯು ಪ್ರತಿ ಏಳು ದಿನಗಳಿಗೆ ಒಮ್ಮೆ ಈ ಯೋಜನೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆ ಹಮ್ಮಿಕೊಳ್ಳಲಿದೆ. ಕಾಮಗಾರಿಗಳಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಯ್ದುಕೊಳ್ಳುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಸಮಿತಿಗೆ ನೀಡಲಾಗಿದೆ. ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು, ಮುಖ್ಯಮಂತ್ರಿ ಅಧ್ಯಕ್ಷತೆಯ ಅಪೆಕ್ಸ್‌ ಮೇಲುಸ್ತುವಾರಿ ಸಮಿತಿಗೆ ವರದಿ ಸಲ್ಲಿಸುವುದು ಈ ಸಮಿತಿಯ ಜವಾಬ್ದಾರಿ. ಅಪೆಕ್ಸ್‌ ಸಮಿತಿಯ ಸೂಚನೆಗಳ ಅನುಷ್ಠಾನಗೊಳಿಸುವ ಹೊಣೆಯೂ ಈ ಸಮಿತಿಯದ್ದು.

‘ಬೆಂಗಳೂರು ವಿಷನ್‌ 2020’ ಯೋಜನೆಯು, ಸುಗಮ ಸಂಚಾರಕ್ಕಾಗಿ ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು, ಚತುರ ಸಾರಿಗೆ ವ್ಯವಸ್ಥೆ ಜಾರಿಗೊಳಿಸುವುದು, ‘ಸ್ವಚ್ಛ ಬೆಂಗಳೂರು’ ಕಾರ್ಯಕ್ರಮದಡಿ ಕಸ ವಿಲೇವಾರಿ ವ್ಯವಸ್ಥೆ ಸುಧಾರಣೆ, ನಮ್ಮ ಕಸ ನಮ್ಮ ಜವಾಬ್ದಾರಿ’ ಕಾರ್ಯಕ್ರಮ, ಕಸ ನಿರ್ವಹಣೆಗೆ ಸಮಗ್ರ ವ್ಯವಸ್ಥೆ ರೂಪಿಸುವುದು, ‘ಹಸಿರು ಬೆಂಗಳೂರು‘ ನಿರ್ಮಾಣಕ್ಕಾಗಿ ಹಸಿರು ನೆರೆಹೊರೆ ಕಾರ್ಯಕ್ರಮ ಅನುಷ್ಠಾನಗೊಳಿಸುವುದು, ಜಲಮೂಲಗಳ ಸಂರಕ್ಷಣೆ, ಜನ ಸಂಪರ್ಕಕ್ಕಾಗಿ ಏಕೀಕೃತ ಡಿಜಿಟಲ್‌ ಪೋರ್ಟಲ್‌ ರೂಪಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ‘ಬೆಂಗಳೂರು ವಿಷನ್‌ 2022’ ಯೋಜನೆಯಡಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಸಮಿತಿಯಲ್ಲಿ ಯಾರಿರುತ್ತಾರೆ?

ಮುಖ್ಯಮಂತ್ರಿ ಅಧ್ಯಕ್ಷತೆಯ ಅಪೆಕ್ಸ್‌ ಮೇಲುಸ್ತುವಾರಿ ಸಮಿತಿ

* ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ

* ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್

* ಕಂದಾಯ ಸಚಿವ ಆರ್‌.ಅಶೋಕ

* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌

* ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

* ವಸತಿ ಸಚಿವ ವಿ.ಸೋಮಣ್ಣ

* ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು

* ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ

* ಬೆಂಗಳೂರು ಅಭೀವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್

* ಮುಖ್ಯ ಕಾರ್ಯದರ್ಶಿ

* ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ ಅಭಿವೃದ್ಧಿ ಆಯುಕ್ತ

* ನಗರಾಭಿವೃದ್ಧಿ ಇಲಾಖೆ, ಒಳಾಡಳಿತ, ಅರಣ್ಯ, ಆರ್ಥಿಕ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು

* ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ

* ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ

* ಬೆಂಗಳೂರು ನಗರ ಪೊಲೀಸ್‌ ಆಯುಕ್ತ

* ಬಿಬಿಎಂಪಿ ಆಡಳಿತಾಧಿಕಾರಿ (ವಿಶೇಷ ಆಹ್ವಾನಿತ)

* ಬಿಬಿಎಂಪಿ ಆಯುಕ್ತ (ಸದಸ್ಯ ಕಾರ್ಯದರ್ಶಿ)

ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಮೇಲುಸ್ತುವಾರಿ ಸಮಿತಿ

* ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ ಅಭಿವೃದ್ಧಿ ಆಯುಕ್ತ

*ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು: ಇ– ಆಡಳಿತ, ನಗರಾಣಿವೃದ್ಧೀ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸಾರಿಗೆ ಇಲಾಖೆ,

* ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತರು

* ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

* ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು

* ಜಲಮಂಡಳಿ ಅಧ್ಯಕ್ಷರು

* ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌

* ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

* ಬಿಡಿಎ ಆಯುಕ್ತರು

* ಬಿಬಿಎಂಪಿ ವಿಶೇಷ ಆಯುಕ್ತರು (ಕಸ ವಿಲೇವಾರಿ)

* ಬೆಂಗಳೂರು ಸ್ಮಾರ್ಟ್‌ ಸಿಟಿ ಸಂಸ್ಥೆಯ ವ್ಯವಸ್ಥಾಪಕನಿರ್ದೇಶಕರು

* ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ

* ಲೋಕೋಪಯೋಗಿ ಇಲಾಖೆ ಕಾರ್ಯದರ್ಶೀ

* ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ

* ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರು

* ಬಿಬಿಎಂಪಿ ಆಡಳಿತಾಧಿಕಾರಿ

* ಬಿಬಿಎಂಪಿ ಆಯುಕ್ತರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು