ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ; ಹೆಚ್ಚು ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ: ಸಚಿವ ಆರ್. ಅಶೋಕ

Last Updated 9 ಸೆಪ್ಟೆಂಬರ್ 2020, 12:10 IST
ಅಕ್ಷರ ಗಾತ್ರ

ಬೆಂಗಳೂರು: ‘ಮಳೆ ಮತ್ತು ಪ್ರವಾಹದಿಂದ ರಾಜ್ಯದಲ್ಲಿ ₹ 8,071 ಕೋಟಿಯ ನಷ್ಟ ಉಂಟಾಗಿದೆ. ಎನ್​​ಡಿಆರ್​ಎಫ್​​ ನಿಯಮಗಳ ಪ್ರಕಾರ ₹ 628 ಕೋಟಿ ಹಣ ಸಿಗಲಿದೆ. ಆದರೆ, ಇಷ್ಟು ಹಣ ಸಾಕಾಗುವುದಿಲ್ಲ. ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದು ಕಂದಾಯ ಸಚಿವ ಆರ್.​ ಅಶೋಕ್​ ತಿಳಿಸಿದರು.

ಪ್ರವಾಹ ಅಧ್ಯಯನಕ್ಕೆ ರಾಜ್ಯಕ್ಕೆ ಬಂದ ಕೇಂದ್ರ ತಂಡದ ಜೊತೆಗೆ ಸಭೆಯ ಬಳಿಕ ಮಾತನಾಡಿದ ಅವರು, ’ಕೇಂದ್ರ ತಂಡ ಮೂರು ತಂಡಗಳಾಗಿ ಎಲ್ಲ ಕಡೆ ಒಂದು ಗಂಟೆಗೂ ಹೆಚ್ಚು ಸಮಯ ಅಧ್ಯಯನ ಮಾಡಿದೆ. 200 ರಿಂದ 300 ಕಿಲೋ ಮೀಟರ್ ಪ್ರವಾಸ ಮಾಡಿದೆ. ಒಂದು ಕಡೆ ಮಾತ್ರ ಗಲಾಟೆ ಆಗಿದೆ. ಕೊಡಗು, ಬೆಳಗಾವಿ ಸೇರಿದಂತೆ ಹಲವು ಕಡೆ ಭೇಟಿ ನೀಡಿದ್ದಾರೆ. ಕೇಂದ್ರ ತಂಡಕ್ಕೆ ಆಯಾ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದರು.

‘ನಮ್ಮ ಅಧಿಕಾರಿಗಳ ಜೊತೆ ಕೇಂದ್ರ ತಂಡ ಸ್ಥಳ‌ ವೀಕ್ಷಣೆ ಮಾಡಿದೆ. ಆಯಾ ಜಿಲ್ಲಾಧಿಕಾರಿಗಳು ಪ್ರವಾಹದ ಪೋಟೋ ನೀಡಿದ್ದಾರೆ. ತಂಡದ ಮುಖ್ಯಮಂತ್ರಿ ಜೊತೆ ಕೂಡ ಸಭೆ ನಡೆಸಿದೆ. 3,31,170 ಹೆಕ್ಟೇರ್ ಪ್ರದೇಶ ಕೃಷಿ ಹಾನಿ, 32,976 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ, 10,978 ಮನೆಗಳಿಗೆ ಹಾನಿಯಾಗಿದೆ. 14,182 ಕಿ. ಮೀ ರಸ್ತೆ ಹಾನಿಯಾಗಿದೆ. 1,268 ಸೇತುವೆಗಳು, 360 ಕೆರೆಗಳಿಗೆ ಹಾನಿಯಾಗಿದೆ. 3,168 ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗಿದೆ’ ಎಂದು ಅವರು ವಿವರಿಸಿದರು.

ಜಿಲ್ಲಾಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಸಂವಾದ ನಾಳೆ: ‘ಮಳೆ ಮತ್ತು ಕೊರೊನಾ ಸೋಂಕು ಕುರಿತಂತೆ ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಗುರುವಾರ (ಸೆ.10) ವಿಡಿಯೊ ಸಂವಾದ ನಡೆಸಲಿದ್ದಾರೆ’ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮಳೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ರಾತ್ರಿ ಏಕಾಏಕಿಯಾಗಿ ಮಳೆ ಬಂದಿದೆ. ಶಾಸಕರು, ಸಚಿವರು ಅವರವರ ಕ್ಷೇತ್ರಕ್ಕೆ ಹೋಗಲು ಸೂಚನೆ ನೀಡಿದ್ದೇನೆ. ನಾನು ಕೂಡಾ ಅನೇಕ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಸಚಿವ ಭೈರತಿ ಬಸವರಾಜ್ ಕೂಡ ಅನೇಕ ಕಡೆ ಹೋಗಿದ್ದಾರೆ‌’ ಎಂದರು.

’ಬೆಂಗಳೂರು ಸಚಿವರಿಗೂ ಮಳೆ ಬಿದ್ದ ಜಾಗಕ್ಕೆ ತೆರಳಲು ಸೂಚನೆ ನೀಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೂ ಚರ್ಚೆ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT