ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿ ಒಡಲ ದನಿ: ಕೋವಿಡ್‌ ಕಾರಣಕ್ಕೆ ಶಾಲೆಗಳನ್ನು ಮುಚ್ಚಬೇಕೆ?

Last Updated 4 ಜನವರಿ 2022, 20:29 IST
ಅಕ್ಷರ ಗಾತ್ರ

ಬೆಂಗಳೂರು: ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಬಂದ್‌ ಆಗಿದ್ದ ಶಾಲೆ, ಕಾಲೇಜುಗಳಲ್ಲಿ ಭೌತಿಕ ತರಗತಿ ಆರಂಭವಾಗಿ ತಿಂಗಳುಗಳಷ್ಟೇ ಕಳೆದಿವೆ. ಈಗ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದೀರ್ಘ ಕಾಲ ಶಾಲೆಯಿಂದ ದೂರ ಉಳಿದಿದ್ದ ಮಕ್ಕಳು ಈಗಷ್ಟೇ ತರಗತಿಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಮಕ್ಕಳ ಸಮಗ್ರ ವಿಕಾಸದ ತಾಣವಾಗಿರುವ ಶಾಲೆಗಳಿಂದ ಮತ್ತೆ ಅವರನ್ನು ದೂರ ಇರಿಸಬೇಕೇ? ಎಂಬುದರ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಕುರಿತು ಶಿಕ್ಷಣ ತಜ್ಞರು, ಮಕ್ಕಳ ಹಕ್ಕುಗಳ ಪರ ಹೋರಾಟಗಾರರು ಮತ್ತು ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳ ಪ್ರತಿಕ್ರಿಯೆಗಳು ಈ ವಾರದ ‘ಒಡಲ ದನಿ’ಯಲ್ಲಿ.

‘ಶಾಲೆ ಬಂದ್‌ ಕೊನೆಯ ಆಯ್ಕೆಯಾಗಬೇಕಿತ್ತು’

ಕೋವಿಡ್‌ನಿಂದ ಮಕ್ಕಳ ಆರೋಗ್ಯದ ಮೇಲೆ ಅತ್ಯಂತ ಕಡಿಮೆ ಪ್ರಮಾಣದ ಪರಿಣಾಮಗಳು ಆಗಲಿವೆ ಎಂಬುದು ಹಲವು ಅಧ್ಯಯನಗಳಲ್ಲಿ ದೃಢಪಟ್ಟಿದೆ. ಎರಡು ವರ್ಷಗಳ ಲಾಕ್‌ಡೌನ್‌ ಅವಧಿಯಲ್ಲಿ ಶಾಲೆಯಿಂದ ದೂರ ಉಳಿದಿದ್ದ ಸಾವಿರಾರು ಮಕ್ಕಳ ಭವಿಷ್ಯ ಹಾಳಾಗಿದೆ. ಸಹಸ್ರಾರು ಮಕ್ಕಳು ಬಾಲ ಕಾರ್ಮಿಕರಾಗಿದ್ದಾರೆ. ನೂರಾರು ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗಿದ್ದಾರೆ. ಈ ಎಲ್ಲವನ್ನೂ ಸರ್ಕಾರ ಗಮನಿಸಬೇಕಿತ್ತು.

ಶಾಲೆಯಲ್ಲಿ ನೀಡುತ್ತಿದ್ದ ಬಿಸಿಯೂಟ ತಪ್ಪಿದ್ದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ದುಪ್ಪಟ್ಟಾಗಿದೆ. ಮಕ್ಕಳನ್ನು ಶಾಲೆಯಿಂದ ದೂರ ಇಡುವುದರಿಂದ ಅನಾಹುತವೇ ಜಾಸ್ತಿ. ಶಾಲೆ, ಕಾಲೇಜುಗಳನ್ನು ಬಂದ್‌ ಮಾಡುವುದು ಸರ್ಕಾರದ ಕೊನೆಯ ಆಯ್ಕೆಯಾಗಬೇಕಿತ್ತು. ಚುನಾವಣಾ ಪ್ರಚಾರ ಸಭೆ, ಜಾತ್ರೆಗಳಿಗೆ ಇಲ್ಲದ ನಿರ್ಬಂಧವನ್ನು ಶಾಲೆಗಳ ಮೇಲೆ ಏಕೆ ಹೇರಬೇಕು.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಂತಹ ಉನ್ನತ ಸಂಸ್ಥೆಗಳ ಸಲಹೆ ಆಧಾರದಲ್ಲಿ ನಿರ್ಧಾರ ಕೈಗೊಳ್ಳಬೇಕಿತ್ತು. ಅನಿವಾರ್ಯ ಆದಲ್ಲಿ ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳುವ ಅವಕಾಶ ಕಲ್ಪಿಸಬೇಕಿತ್ತು. ಕೇಂದ್ರೀಕೃತವಾಗಿ ಎಲ್ಲ ಶಾಲೆಗಳನ್ನು ಬಂದ್‌ ಮಾಡುವುದು ಸರಿಯಾದ ನಿರ್ಧಾರ ಅಲ್ಲ.

– ವಿ.ಪಿ.ನಿರಂಜನಾರಾಧ್ಯ,ಶಿಕ್ಷಣ ತಜ್ಞ

‘ಶಿಕ್ಷಣದ ಹಕ್ಕು ಮೊಟಕಾಗದಿರಲಿ’

ಎರಡು ವರ್ಷ ಶಾಲೆಗಳಿಂದ ದೂರ ಇದ್ದ ಮಕ್ಕಳು ಈಗಷ್ಟೇ ತರಗತಿ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಬಹುಪಾಲು ಮಕ್ಕಳಿಗೆ ಶಾಲೆಗೆ ಹೋಗಬೇಕೆಂಬ ಆಸೆ ಇದೆ. ಆನ್‌ಲೈನ್‌ ತರಗತಿಗಳ ಕುರಿತು ಮಕ್ಕಳು ಆಸಕ್ತಿ ಕಳೆದುಕೊಂಡಿದ್ದಾರೆ. ಈಗ ಮತ್ತೆ ಶಾಲೆಗಳನ್ನು ಮುಚ್ಚುವುದು ನೆಟ್ಟ ಗಿಡವನ್ನು ಕೆಲವೇ ದಿನಗಳಲ್ಲಿ ಕಿತ್ತು ಹಾಕಿದಂತೆ. ಈ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಬೇಕೆಂಬ ನಿರ್ಧಾರ ಸರಿ ಅಲ್ಲ.

ಮಕ್ಕಳ ಆರೋಗ್ಯದ ಹಕ್ಕು ಪ್ರಮುಖವಾದುದು ನಿಜ. ಆದರೆ, ಅದರ ಹೆಸರಿನಲ್ಲಿ ಶಿಕ್ಷಣದ ಹಕ್ಕು ಮೊಟಕಾಗಬಾರದು. ಶಾಲಾ ವಾತಾವರಣವನ್ನು ಪ್ರಯೋಗಕ್ಕೆ ಒಡ್ಡುವುದು ಸರಿಯಲ್ಲ. ಸುರಕ್ಷತಾ ಕ್ರಮಗಳೊಂದಿಗೆ ತರಗತಿ ಮುಂದುವರಿಸುವುದಕ್ಕೆ ಸರ್ಕಾರ ಬೆಂಬಲಿಸಬೇಕಿತ್ತು.

ಮಕ್ಕಳ ಜತೆ ಸಮಾಲೋಚನೆ ನಡೆಸಬೇಕು. ಅವರಲ್ಲಿ ಧೈರ್ಯ ತುಂಬಬೇಕು. ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳೂ ಶಾಲೆಗಳಿಗೆ ತೆರಳಿ ಮಕ್ಕಳ ಜತೆ ಮಾತನಾಡಬೇಕು. ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂಬಂತಹ ವಾತಾವರಣ ಇದ್ದರೆ ಮಾತ್ರ ಶಾಲೆಗಳನ್ನು ಬಂದ್‌ ಮಾಡುವ ಬಗ್ಗೆ ಯೋಚಿಸಬೇಕಿತ್ತು.

– ನಾಗಸಿಂಹ ಜಿ. ರಾವ್‌,ನಿರ್ದೇಶಕ, ಚೈಲ್ಡ್‌ರೈಟ್ಸ್‌ ಟ್ರಸ್ಟ್‌

‘ಎಲ್ಲರ ಅಭಿಪ್ರಾಯಕ್ಕೂ ಮನ್ನಣೆ ಇರಬೇಕಿತ್ತು’

ಗ್ರಾಮೀಣ ಪ್ರದೇಶದ ಮಕ್ಕಳು ಲಾಕ್‌ಡೌನ್‌ನಿಂದ ಹೆಚ್ಚು ಸಂಕಷ್ಟ ಅನುಭವಿಸಿದ್ದಾರೆ. ಈಗ ಮತ್ತೆ ಸಂಕಷ್ಟ ಎದುರಿಸುವುದು ಅವರ ಆಯ್ಕೆಯಾಗಿರುವುದಿಲ್ಲ. ಶಾಲೆಗಳಲ್ಲಿ ತರಗತಿಗಳನ್ನು ನಡೆಸಬೇಕೆಂಬ ಅಭಿಪ್ರಾಯವುಳ್ಳ ಪೋಷಕರ ಸಂಖ್ಯೆಯೂ ಹೆಚ್ಚಾಗಿದೆ. ತಜ್ಞರ ಸಮಿತಿಯ ಶಿಫಾರಸು ಬಂದಿದೆ ಮತ್ತು ಕೆಲವು ಪೋಷಕರು ಬೇಡಿಕೆ ಇಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಸರ್ಕಾರ ತರಾತುರಿಯಲ್ಲಿ ಶಾಲೆಗಳನ್ನು ಬಂದ್‌ ಮಾಡುವ ನಿರ್ಧಾರ ಕೈಗೊಂಡಿರುವುದು ನ್ಯಾಯಸಮ್ಮತವಲ್ಲ.

ಹೆಚ್ಚು ಮಕ್ಕಳು ಈಗ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.ಶಾಲೆಗಳನ್ನು ಮುಚ್ಚಿದ ಮಾತ್ರಕ್ಕೆ ಮಕ್ಕಳು ಮನೆಗಳಲ್ಲೇ ಇರುವುದಿಲ್ಲ. ಎಲ್ಲರ ಅಭಿಪ್ರಾಯವನ್ನು ಆಲಿಸಿದ ಬಳಿಕವೇ ಸರ್ಕಾರ ನಿರ್ಧಾರಕ್ಕೆ ಬರಬೇಕಿತ್ತು. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಆದ್ಯತೆ ನೀಡಿದ್ದರೆ ಉತ್ತಮವಾಗಿರುತ್ತಿತ್ತು.

– ಸುಜಾತಾ, ಆರ್‌ಟಿಇ ಪರ ಹೋರಾಟಗಾರ್ತಿ

‘ನಿರಂತರ ಕಲಿಕೆಗೆ ಅಡ್ಡಿಯಾಗಲಿದೆ’

ವಿದೇಶಗಳಲ್ಲಿ ಮಾಲ್‌, ಮಾರುಕಟ್ಟೆ, ಪಬ್‌, ಬಾರ್‌ಗಳನ್ನು ಮೊದಲು ಮುಚ್ಚಲಾಗುತ್ತಿದೆ. ಕೊನೆಯ ಹಂತದಲ್ಲಿ ಶಾಲಾ, ಕಾಲೇಜು ಬಂದ್‌ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ತದ್ವಿರುದ್ಧವಾಗಿ ಯೋಚಿಸುತ್ತಿರುವುದು ಸರಿಯಲ್ಲ. ಶಾಲೆ, ಕಾಲೇಜುಗಳನ್ನು ಕೊನೆಯ ಹಂತದವರೆಗೂ ತೆರೆದಿಡಲು ಸರ್ಕಾರ ಅವಕಾಶ ನೀಡಬೇಕಿತ್ತು.

ಹಿಂದೆಯೂ ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ಎರಡು ಲಕ್ಷ ಮಕ್ಕಳಿಗೆ ಕೋವಿಡ್‌ ತಗುಲಿತ್ತು. ಈಗ ಕೋವಿಡ್‌ನ ಹೊಸ ತಳಿಯ ವೈರಾಣುಗಳು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂಬ ವೈಜ್ಞಾನಿಕ ವರದಿಗಳಿವೆ. ಕೋವಿಡ್‌ ಹರಡಲು ಕಾರಣವಾಗುವ ಸಭೆ, ಸಮಾರಂಭಗಳಿಗೆ ಅನುಮತಿ ನೀಡಿ ಶಾಲೆಗಳನ್ನು ಮುಚ್ಚಿಸುವ ನಿರ್ಧಾರ ಮಾಡಲಾಗಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಅಪಾಯ.

– ಶಶಿಕುಮಾರ್‌ ಡಿ., ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT