ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿ ಬೆಂಗಳೂರಿನಲ್ಲೂ ‘ಪ್ರಾದೇಶಿಕ ಅಸಮಾನತೆ’

ಅಭಿವೃದ್ಧಿ ಹೊಂದಿರುವ ಪ್ರದೇಶಗಳಿಗೆ ಮತ್ತೆ ಮತ್ತೆ ಅನುದಾನ– ಕೆಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ನಿಧಾನ
Last Updated 31 ಆಗಸ್ಟ್ 2020, 3:54 IST
ಅಕ್ಷರ ಗಾತ್ರ
ADVERTISEMENT
""
""
""
""

ಬೆಂಗಳೂರು: ‘ಪ್ರಾದೇಶಿಕ ಅಸಮಾನತೆ...‘ ರಾಜ್ಯದಲ್ಲಿ ದಶಕಗಳಿಂದ ಕೇಳಿ ಬರುತ್ತಿರುವ ಕೂಗು ಇದು. ರಾಜ್ಯದಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿರುವ ಪ್ರದೇಶವೆಂದು ಗುರುತಿಸಿಕೊಂಡಿರುವ ‘ರಾಜಧಾನಿ ಬೆಂಗಳೂರು’ ಕೂಡಾ ಇದರಿಂದ ಹೊರತಾಗಿಲ್ಲ.

ರಾಜ್ಯದ ಅಭಿವೃದ್ಧಿಯ ಎಂಜಿನ್‌ನಂತಿರುವ ಬಿಬಿಎಂಪಿಗೆ ಸರ್ಕಾರ ಪ್ರತಿವರ್ಷವೂ ಸಾವಿರಾರು ಕೋಟಿ ಅನುದಾನಗಳನ್ನು ವಿವಿಧ ಯೋಜನೆಗಳಡಿ ನೀಡುತ್ತಿದೆ. ಪಾಲಿಕೆಯ ವ್ಯಾಪ್ತಿಯ ಕೆಲವು ವಿಧಾನಸಭಾ ಕ್ಷೇತ್ರಗಳು ಒಂದೇ ವರ್ಷದಲ್ಲಿ ₹1 ಸಾವಿರ ಕೋಟಗೂ ಅಧಿಕ ಅನುದಾನ ಗಿಟ್ಟಿಸಿಕೊಂಡರೆ, ಇನ್ನು ಕೆಲವು ಕ್ಷೇತ್ರಗಳಿಗೆ ₹ 50 ಕೋಟಿ ಅನುದಾನವೂ ಸಿಗುತ್ತಿಲ್ಲ. ಜತೆಗೆ ಬಿಬಿಎಂಪಿಯೂ ಹೆಚ್ಚೂ ಕಡಿಮೆ ₹ 10 ಸಾವಿರ ಕೋಟಿ ಗಾತ್ರದ ಬಜೆಟ್‌ ರೂಪಿಸುತ್ತದೆ. ಈ ಅನುದಾನಗಳು ನಿಜಕ್ಕೂ ಎಲ್ಲಿ ಅಗತ್ಯ ಇದೆಯೋ ಅಲ್ಲಿ ಬಳಕೆ ಆಗುವ ಬದಲು ಪ್ರಭಾವಿ ಜನಪ್ರತಿನಿಧಿಗಳ ಕ್ಷೇತ್ರಗಳಿಗಷ್ಟೇ ಹಂಚಿಕೆಯಾಗಿವೆ.

ನಗರದಲ್ಲಿ ಈಗಾಗಲೇ ಅಭಿವೃದ್ಧಿಯಾಗಿರುವ ಪ್ರದೇಶಗಳ ರಸ್ತೆಗಳು ಪದೇ ಪದೇ ಡಾಂಬರೀಕರಣಗೊಳ್ಳುತ್ತಿದ್ದರೆ, ಇನ್ನೂ ಕ್ಷೇತ್ರಗಳಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೂ ಗತಿ ಇಲ್ಲ. ಕೆಲವೆಡೆ ಪಾದಚಾರಿ ಮಾರ್ಗಗಳು 2–3 ವರ್ಷಗಳಿಗೊಮ್ಮೆ ನವೀಕರಣಗೊಳ್ಳುತ್ತಿದ್ದರೆ, ಕೆಲವು ಕಡೆ ಪಾದಚಾರಿ ಮಾರ್ಗದಲ್ಲಿ ಕಿತ್ತು ಹೋದ ಕಲ್ಲುಹಾಸು ದುರಸ್ತಿಗೂ ಅನುದಾನ ಸಿಗುತ್ತಿಲ್ಲ.

ಪಾಲಿಕೆಯಲ್ಲೂ ಪಂಚವಾರ್ಷಿಕ ಯೋಜನೆ ಹಾಗೂ ವಾರ್ಷಿಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ವಾರ್ಡ್ ಸಮಿತಿಗಳು ವಾರ್ಡ್‌ ಮಟ್ಟದಲ್ಲೂ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಬೇಕು. ಈ ಯೋಜನೆಗಳು ಮಹಾನಗರ ಯೋಜನಾ ಸಮಿತಿ (ಎಂಪಿಸಿ) ರೂಪಿಸುವ ದೂರಗಾಮಿ ಯೋಜನೆಗಳ ಜೊತೆ ಹೊಂದಿಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಬಿ.ಎಸ್‌.ಪಾಟೀಲ ನೇತೃತ್ವದ ಸಮಿತಿಯು ಬೆಂಗಳೂರಿನ ಆಡಳಿತ ಸುಧಾರಣೆ ಸಲುವಾಗಿ ನೀಡಿದ್ದ ವರದಿಯಲ್ಲಿ ಹೇಳಿತ್ತು. ಅನುದಾನ ಹಂಚಿಕೆಯಲ್ಲಿ ತಾರತಮ್ಯದಿಂದ ಮುಂದೆ ಬಂದೊದಗಬಹುದಾದ ಸಮಸ್ಯೆಗಳ ಬಗ್ಗೆಯೂ ಸಮಿತಿ ಬೆಳಕು ಚೆಲ್ಲಿತ್ತು.ಅನುದಾನ ಹಂಚಿಕೆ ವಿಧಾನದ ವಿಕೇಂದ್ರೀಕರಣದ ಜೊತೆ ಅಧಿಕಾರದ ವಿಕೇಂದ್ರೀಕರಣವನ್ನು ಪ್ರತಿಪಾದಿಸಿತ್ತು. ಈ ಸಮಿತಿಯ ವರದಿಯ ಅಂಶಗಳನ್ನು ಜಾರಿಗೊಳಿಸುವುದಕ್ಕೇ ಯಾವುದೇ ಸರ್ಕಾರಗಳೂ ಮುಂದಾಗಲಿಲ್ಲ.

ಈಗಿರುವ ವ್ಯವಸ್ಥೆಯಲ್ಲೇ ನಗರದ ದೀರ್ಘಕಾಲೀನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರ ಮಹಾಯೋಜನೆಯನ್ನು ರೂಪಿಸಲಾಗುತ್ತದೆ. ಮುಂದಿನ 15 ವರ್ಷಗಳಲ್ಲಿ ನಗರದಲ್ಲಿ ಎಲ್ಲಿ ಯಾವ ಮೂಲಸೌಕರ್ಯಗಳನ್ನು ರೂಪಿಸಬೇಕಾಗುತ್ತದೆ ಎಂಬ ಬಗ್ಗೆ ಅದರಲ್ಲಿ ಸ್ಥೂಲವಾಗಿ ಚರ್ಚಿಸಲಾಗುತ್ತದೆ. ನಗರ ಮಹಾ ಯೋಜನೆಯಲ್ಲಿ ಪಟ್ಟಿ ಮಾಡುವ ಮೂಲಸೌಕರ್ಯ ಯೋಜನೆಗಳು ಅನುಷ್ಠಾನಗೊಳ್ಳುವುದೇ ಇಲ್ಲ. ಸರ್ಕಾರ ಅನುದಾನ ಹಂಚಿಕೆ ಮಾಡುವಾಗ ನಗರ ಮಹಾ ಯೋಜನೆಯಲ್ಲಿರುವ ಅಂಶಗಳನ್ನು ಪರಿಗಣಿಸುತ್ತಲೇ ಇಲ್ಲ.

ಉದಾಹರಣೆಗೆ, 2015ರ ಪರಿಷ್ಕೃತ ನಗರ ಮಹಾ ಯೋಜನೆ (ಆರ್‌ಎಂಪಿ) ಪ್ರಕಾರ, ಪಾಲಿಕೆಯ ಮಹದೇವಪುರ ವಲಯದಲ್ಲಿ ಭಾರಿ ಪ್ರಮಾಣದ ವಸತಿ ಯೋಜನೆಗಳು, ಕಚೇರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಜನವಸತಿ ಹಾಗೂ ಕಚೇರಿಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಅದಕ್ಕೆ ಅನುಗುಣವಾಗಿ ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್‌ ಒಂದರಲ್ಲೇ ಆರ್‌ಎಂಪಿ ಪ್ರಕಾರ 35 ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆಗಳ ನಿರ್ಮಾಣ ಆಗಬೇಕಿತ್ತು. ಈ ಆರ್‌ಎಂಪಿಯ ಅವಧಿ ಮುಗಿದು ಐದು ವರ್ಷಗಳೇ ಕಳೆದರೂ ಇವುಗಳನ್ನು ನಿರ್ಮಿಸಿಲ್ಲ.

‘ಬಿಬಿಎಂಪಿಯಲ್ಲಿ ವಲಯವಾರು ತೆರಿಗೆ ಸಂಗ್ರಹದಲ್ಲಿ ಪ್ರತಿ ವರ್ಷವೂ ಮಹದೇವಪುರ ವಲಯ ಮುಂಚೂಣಿಯಲ್ಲಿದ್ದರೂ ಇಲ್ಲಿನ ವಾರ್ಡ್‌ಗಳ ರಸ್ತೆಗಳ ದುಸ್ಥಿತಿ ಕುಗ್ರಾಮಗಳಿಗಿಂತಲೂ ಕೀಳಾಗಿದೆ. ನಮ್ಮಿಂದ ತೆರಿಗೆಯನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಆದರೆ, ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಮಹದೇವಪುರ ವಲಯದಲ್ಲಿ ಐದು ವರ್ಷಗಳಲ್ಲಿ ₹ 2,670 ಕೋಟಿಯನ್ನು ಬಿಬಿಎಂಪಿ ಆಸ್ತಿ ತೆರಿಗೆ ರೂಪದಲ್ಲಿ ಸಂಗ್ರಹಿಸಿದೆ. ಇದರಲ್ಲಿ ಈ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಬಿಡಿಗಾಸೂ ಮರಳಿ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬೆಳ್ಳಂದೂರು ನಿವಾಸಿಗಳು.

ಸರ್ಕಾರದ ವಿಶೇಷ ಅನುದಾನ ಹಂಚಿಕೆ ಮಾಡುವಾಗಲೂ ತಾರತಮ್ಯ ಕಣ್ಣಿಗೆ ರಾಚುವಂತಿದೆ. ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದಿವೆ. ರಸ್ತೆ ಮತ್ತು ಇತರ ಮೂಲಸೌಕರ್ಯಗಳೂ ತಕ್ಕಮಟ್ಟಿಗೆ ಚೆನ್ನಾಗಿವೆ. ಆದರೆ, ಈ ಪ್ರದೇಶಕ್ಕೇ ಮತ್ತೆ ಮತ್ತೆ ನೂರಾರು ಕೋಟಿ ಅನುದಾನವನ್ನು ವೆಚ್ಚ ಮಾಡಲಾಗುತ್ತಿದೆ. ಪೀಣ್ಯದಂತಹ ಪ್ರಮುಖ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳನ್ನು ಹೊಂದಿರುವ, ಲಕ್ಷಗಟ್ಟಲೆ ಕಾರ್ಮಿಕರಿಗೆ ನೆಲೆ ಕಲ್ಪಿಸಿರುವ ದಾಸರಹಳ್ಳಿ ಕ್ಷೇತ್ರಕ್ಕೆ ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಬಿಡಿಗಾಸಿನ ಅನುದಾನ ನೀಡಲಾಗುತ್ತದೆ. ಶಿವಾಜಿನಗರಕ್ಕೆ ಸಿಕ್ಕಷ್ಟೇ ಅನುದಾನ ಪಕ್ಕದ ಪುಲಕೇಶಿನಗರಕ್ಕೆ ಸಿಕ್ಕಿಲ್ಲ.

‘ತಾರತಮ್ಯ ನಿವಾರಣೆಗೆ ವಿಕೇಂದ್ರೀಕರಣ ಸೂತ್ರ’

ಪ್ರಭಾವಿ ರಾಜಕಾರಣಿಗಳು ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಅಗತ್ಯ ಇಲ್ಲದಿದ್ದರೂ ಸಾವಿರಾರು ಕೋಟಿ ಅನುದಾನ ಹಂಚಿಕೆ ಮಾಡಿಸಿಕೊಳ್ಳುವುದು ರಹಸ್ಯ ವಿಷಯವೇನಲ್ಲ. ಆಡಳಿತ ವ್ಯವಸ್ಥೆಯನ್ನು ಹಾಗೂ ಅನುದಾನ ಹಂಚಿಕೆ ವಿಧಾನವನ್ನು ಪುನರ್‌ ರೂಪಿಸಬೇಕು. ವಿಕೇಂದ್ರೀಕರಣವು ವ್ಯವಸ್ಥೆಯನ್ನು ಸರಳ ಹಾಗೂ ಸದೃಢಗೊಳಿಸುವ ಮೂಲಮಂತ್ರ.

ವಿಧಾನಸಭಾ ಕ್ಷೇತ್ರಗಳು ಹಾಗೂ ವಾರ್ಡ್‌ಗಳ ವಿನ್ಯಾಸದಲ್ಲೇ ಲೋಪಗಳಿವೆ. ವಾರ್ಡ್‌ಗಳ ಜನಸಂಖ್ಯೆಯಲ್ಲಾಗಲೀ, ವಿಸ್ತೀರ್ಣದಲ್ಲಾಗಲೀ ಏಕರೂಪತೆ ಇಲ್ಲ. ಇದನ್ನು ಮೊದಲು ತೊಡೆದು ಹಾಕಲೆಂದೇ ನನ್ನ ಅಧ್ಯಕ್ಷತೆಯ ಸಮಿತಿ ಬಿಬಿಎಂಪಿ ವಿಭಜನೆಗೆ ಹಾಗೂ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಶಿಫಾರಸು ಮಾಡಿತ್ತು. ಸಣ್ಣ ಸಣ್ಣ ಘಟಕಗಳನ್ನು ಮಾಡಿದಷ್ಟೂ ಅಭಿವೃದ್ಧಿಯಲ್ಲಿ ಸಮಾನತೆ ಸಾಧಿಸುವುದು ಸುಲಭವಾಗುತ್ತದೆ. ಅರ್ಹತೆ ಹಾಗೂ ಅಗತ್ಯತೆ ಆಧಾರದಲ್ಲಿ ಅನುದಾನ ಹಂಚಿಕೆಗೂ ಇದರಿಂದ ಸಾಧ್ಯವಾಗುತ್ತದೆ.

- ಬಿ.ಎಸ್‌.ಪಾಟೀಲ, ನಿವೃತ್ತ ಐಎಎಸ್‌ ಅಧಿಕಾರಿ

‘ನಗರ ಹಣಕಾಸು ಆಯೋಗದ ನಿಧಿ ರೂಪಿಸಿ’

ಅನುದಾನ ಹಂಚಿಕೆಯಲ್ಲಿ ಆಗುವ ತಾರತಮ್ಯಕ್ಕೆ ಒಂದಲ್ಲ ಒಂದು ದಿನ ಬೆಲೆ ತೆರಬೇಕಾಗುತ್ತದೆ. ಲಭ್ಯ ಸಂಪನ್ಮೂಲವನ್ನು ಜಾಣತನದಿಂದ ಬಳಸಬೇಕು. ಅದರಿಂದ ದೀರ್ಘಕಾಲದಲ್ಲಿ ಹೆಚ್ಚು ಅನುಕೂಲವಾಗುವಂತಹ ಸೌಕರ್ಯ ಕಲ್ಪಿಸಬೇಕು. ಆದರೆ, ವಾಸ್ತವದಲ್ಲಿ ಹಾಗಾಗುತ್ತಿಲ್ಲ. ಪ್ರಭಾವಿಗಳು ಎಲ್ಲ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ಹಂಚಿಕೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನಮ್ಮದೇ ನಗರದ ಇನ್ನೊಂದು ಪ್ರದೇಶ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಈ ಪ್ರವೃತ್ತಿಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು.

ಅನುದಾನ ಹಂಚಿಕೆ ವ್ಯವಸ್ಥೆ ಕೇಂದ್ರೀಕೃತವಾಗಿರುವುದೇ ಪ್ರಾದೇಶಿಕ ಅಸಮಾನತೆ ಹೆಚ್ಚಲು ಮುಖ್ಯ ಕಾರಣ. ತಮ್ಮ ವಾರ್ಡ್‌ಗೆ ಯಾವ ಸೌಕರ್ಯ ಕೊರತೆ ಇದೆ. ಏನೆಲ್ಲ ಸೌಕರ್ಯ ಬೇಕು ಎಂಬುದನ್ನು ಆಯಾ ವಾರ್ಡ್‌ನ ನಿವಾಸಿಗಳೇ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕು. ಇದಕ್ಕಾಗಿ ವಾರ್ಡ್‌ ಸಮಿತಿಗಳನ್ನು ಆರ್ಥಿಕವಾಗಿಯೂ ಬಲಪಡಿಸಬೇಕು.

ರಾಜ್ಯ ಹಣಕಾಸು ಆಯೋಗದ ಅನುದಾನ ಹಂಚಿಕೆಗೆ ಮಾನದಂಡ ರೂಪಿಸಿದಂತೆ ನಗರದ ಅಭಿವೃದ್ಧಿಗೆ ಸರ್ಕಾರ ಅನುದಾನ ಹಂಚಿಕೆ ಮಾಡುವುದಕ್ಕೂ ಮಾನದಂಡ ರೂಪಿಸಬೇಕು. ಪ್ರತಿ ವಾರ್ಡ್‌ನಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಒಂದು ಪಾಲು ಅದೇ ವಾರ್ಡ್‌ಗೆ ಮರಳಿ ಸಿಗುವ ವ್ಯವಸ್ಥೆ ರೂಪಿಸಬೇಕು. ಅನುದಾನ ಹಂಚಿಕೆ ತಾರತಮ್ಯ ನಿವಾರಣೆಗೆ ಬಿ.ಎಸ್‌.ಪಾಟೀಲ ನೇತೃತ್ವದ ಸಮಿತಿಯೂ ನಗರಕ್ಕೆ ಪ್ರತ್ಯೇಕವಾಗಿ ನಗರ ಹಣಕಾಸು ಆಯೋಗವನ್ನು ಸ್ಥಾಪಿಸುವ ಬಗ್ಗೆ ಸಲಹೆ ನೀಡಿತ್ತು. ಅದನ್ನು ಜಾರಿಗೆ ತರುವುದು ಸೂಕ್ತ.

- ಆರ್‌.ರವಿಚಂದರ್‌, ನಗರ ಯೋಜನಾ ತಜ್ಞ, (ಬಿ.ಎಸ್‌.ಪಾಟೀಲ ಸಮಿತಿಯ ಸದಸ್ಯರಾಗಿದ್ದರು)

ಆಗಬೇಕಾದುದು ಏನು?

* ಆಯಾ ವಾರ್ಡ್‌ದ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳನ್ನು ವಾರ್ಡ್‌ ಸಮಿತಿಗಳ ಮೂಲಕವೇ ರೂಪಿಸಬೇಕು

* ಆದ್ಯತೆ ಮೇರೆಗೆ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಈ ಪ್ರಕ್ರಿಯೆ ರಾಜಕೀಯ ಹಸ್ತಕ್ಷೇಪವಿಲ್ಲದೇ ಪಾರದರ್ಶಕವಾಗಿ ನಡೆಯಬೇಕು.

* ರಾಜ್ಯ ಸರ್ಕಾರದ ವಿಶೇಷ ಅನುದಾನ ಹಾಗೂ ಬಿಬಿಎಂಪಿ ಅನುದಾನ, ಎಸ್‌ಎಫ್‌ಸಿ ಅನುದಾನ, ಕೇಂದ್ರ ಸರ್ಕಾರದ ವಿಶೇಷ ಅನುದಾನಗಳನ್ನು ಹಂಚಿಕೆ ಮಾಡುವಾಗ ಈ ಪಟ್ಟಿಯಲ್ಲಿರುವ ಕಾಮಗಾರಿಗಳಿಗೆ ಹಾಗೂ ನಗರ ಮಹಾ ಯೋಜನೆಯಲ್ಲಿ ಗುರುತಿಸಿದ ಕಾಮಗಾರಿಗಳಿಗೆ ಆದ್ಯತೆ ಸಿಗಬೇಕು.

* ಪ್ರತಿ ವಾರ್ಡ್‌ ಮಟ್ಟದಲ್ಲಿ ಐದು ವರ್ಷಗಳಿಂದ ಈಚೆಗೆ ನಡೆದ ಎಲ್ಲ ಕಾಮಗಾರಿಗಳ ವಿವರ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯ ಇರಬೇಕು. ಇದರಿಂದ ಅನಗತ್ಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಮುಂದಾದರೆ ಸ್ಥಳೀಯರೇ ಪ್ರಶ್ನೆ ಮಾಡಲು ಸುಲಭವಾಗುತ್ತದೆ.

* ಪ್ರತಿ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಅದು ನಿಜಕ್ಕೂ ಅಗತ್ಯವೇ ಎಂಬ ಬಗ್ಗ ಸ್ಥಳೀಯರ ಅಭಿಪ್ರಾಯ ಪಡೆಯಬೇಕು.

* ಕೈಗೆತ್ತಿಕೊಂಡ ಕಾಮಗಾರಿಗಳ ಲೆಕ್ಕ ಪರಿಶೋಧನೆ ನಡೆಯಬೇಕು. ಅನಗತ್ಯ ಕಾಮಗಾರಿ ಹಮ್ಮಿಕೊಂಡಿದ್ದರೆ ಅದಕ್ಕೆ ಕಾರಣರಾದವರಿಗೆ ದಂಡ ವಿಧಿಸಬೇಕು.

ನೀವೂ ಪ್ರತಿಕ್ರಿಯಿಸಿ

ರಾಜಧಾನಿಯಲ್ಲಿ ಅಭಿವೃದ್ಧಿ ಅಸಮಾನತೆ ಬಗ್ಗೆ ಹಾಗೂ ನಗರದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ನೀವೂ ಪ್ರತಿಕ್ರಿಯಿಸಿ. ನಿಮ್ಮ ಅನಿಸಿಕೆಗಳನ್ನು 50 ಪದಗಳ ಮಿತಿಯಲ್ಲಿ ವಾಟ್ಸ್‌ ಆ್ಯಪ್‌ ಮಾಡಿ. ವಾಟ್ಸ್‌ ಆ್ಯಪ್‌ ಸಂಖ್ಯೆ: 9606038256.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT