ಸೋಮವಾರ, ಸೆಪ್ಟೆಂಬರ್ 27, 2021
23 °C
ಮೂಲಸೌಕರ್ಯ ಕಾಮಗಾರಿ ತ್ವರಿತಗೊಳಿಸಲು ಕ್ರಮ * ಆಸಕ್ತರಿಗೆ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ

ಅರ್ಕಾವತಿ ಬಡಾವಣೆ| ಶೀಘ್ರವೇ 400 ಮಂದಿಗೆ ನಿವೇಶನ: ಬಿಡಿಎ ಅಧ್ಯಕ್ಷ ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ರೀಡು ಹಾಗೂ ಡಿನೋಟಿಫಿಕೇಷನ್‌ ಕಾರಣಗಳಿಂದಾಗಿ ನಿವೇಶನ ಹಂಚಿಕೆ ರದ್ದಾಗಿರುವ 400 ನಿವೇಶನದಾರರಿಗೆ ಶೀಘ್ರವೇ ಇದೇ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್ ಭರವಸೆ ನೀಡಿದರು.

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸೋಮವಾರ ಅವರು ಪ್ರಾಧಿಕಾರಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆಯಾಗಿರುವ ನಿವೇಶನ ಕಳೆದುಕೊಂಡ ಅನೇಕರು ಕರೆ ಮಾಡಿ ಅಳಲು ತೋಡಿಕೊಂಡರು. ಇನ್ನೂ ಮೂಲಸೌಕರ್ಯ ಕಲ್ಪಿಸದ ಕಾರಣ ನಿವೇಶನ ಲಭ್ಯವಿದ್ದರೂ ಮನೆ ನಿರ್ಮಿಸಲು ಸಾಧ್ಯವಾಗದೇ ಇರುವ ಬಗ್ಗೆಯೂ ಕೆಲವರು ಗಮನ ಸೆಳೆದರು.

‘ಈ ಬಡಾವಣೆಯಲ್ಲಿ ಹಂಚಿಕೆಗೆ ಲಭ್ಯವಿರುವ 400 ನಿವೇಶನಗಳನ್ನು ಗುರುತಿಸಿದ್ದೇವೆ. ನಿವೇಶನ ಕಳೆದುಕೊಂಡವರ ಪಟ್ಟಿ ತಯಾರಿಸಲಾಗಿದೆ. ಜ್ಯೇಷ್ಠತೆ ಆಧಾರದಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದ ಶೀಘ್ರವೇ ಬದಲಿ ನಿವೇಶನದ ಹಂಚಿಕೆ ಪತ್ರವನ್ನು ಕೊಡಿಸಲಿದ್ದೇವೆ’ ಎಂದರು. ‘ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಕಳೆದುಕೊಂಡವರು ಒಪ್ಪಿದರೆ ಅವರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಿದ್ದೇವೆ. ಆಸಕ್ತರು ಅರ್ಜಿ ಹಾಕಬಹುದು’ ಎಂದು ತಿಳಿಸಿದರು.

‘ಶಿವರಾಮ ಕಾರಂತ ಬಡಾವಣೆಗೆ ಸ್ವಾಧೀನಪಡಿಸಿಕೊಳ್ಳಬೇಕಾದ ಪ್ರದೇಶಗಳಲ್ಲಿ ಬಿಡಿಎಯಿಂದ ಮಂಜೂರಾತಿ ಪಡೆದು ಕೆಲವರು ಬಡಾವಣೆ ನಿರ್ಮಿಸಿದ್ದಾರೆ. ಇಂತಹ ಕಡೆ ಕಂದಾಯ ನಿವೇಶನ ಹೊಂದಿದ್ದವರಿಗೆ ಪ್ರಾಧಿಕಾರದ ವತಿಯಿಂದಲೇ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಸುಪ್ರೀಂ ಕೋರ್ಟ್‌ ಕೂಡಾ ಈ ಬಗ್ಗೆ ನಿರ್ದೇಶನ ನೀಡಿದೆ’ ಎಂದು ಬಿಡಿಎ ಅಧ್ಯಕ್ಷರು ಮೋಹನ ಬಾಬು ಅವರ ಪ್ರಶ್ನೆಗೆ ಉತ್ತರಿಸಿದರು.

‘ಪಿಆರ್‌ಆರ್‌: ಶೀಘ್ರವೇ ಜಾಗತಿಕ ಟೆಂಡರ್‌’

‘15 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಕಾಮಗಾರಿಗೆ ಜಾಗತಿಕ ಟೆಂಡರ್‌ ಕರೆಯುವ ಪ್ರಸ್ತಾವನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ. ಈ ಕಾಮಗಾರಿಗೆ ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ. ಇಸ್ರೇಲ್‌, ಟರ್ಕಿ ಹಾಗೂ ಸ್ವಿಟ್ಜರ್‌ಲೆಂಡ್‌ನ ಕಂಪನಿಗಳು ಈ ಯೋಜನೆಗೆ ಬಂಡವಾಳ ಹೂಡಲು ಮುಂದೆ ಬಂದಿವೆ’ ಎಂದು ಬಿಡಿಎ ಅಧ್ಯಕ್ಷರು ತಿಳಿಸಿದರು.

ಪಿಆರ್‌ಆರ್‌ ಯೋಜನೆಗಾಗಿ ಜಾಗ ಕಳೆದುಕೊಳ್ಳಲಿರುವ ಅನೇಕರು ಕರೆ ಮಾಡಿ ಅಳಲು ತೋಡಿಕೊಂಡರು. ‘15 ವರ್ಷಗಳಿಂದ ನಮ್ಮ ಜಾಗವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಈ ಜಾಗವನ್ನು ಮಾರಾಟ ಮಾಡಲು ಅಥವಾ ಅಡ ಇಟ್ಟು ಸಾಲ ಪಡೆಯುವುದಕ್ಕೂ ಆಗುತ್ತಿಲ್ಲ. ಈ ಯೋಜನೆ ಬಗ್ಗೆ ಬಿಡಿಎ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಈ ಬಡಾವಣೆಗಾಗಿ ಬಿಟ್ಟುಕೊಡುವ ಜಾಗಕ್ಕೆ ಪ್ರಾಧಿಕಾರವು ಮಾರ್ಗಸೂಚಿ ಮೌಲ್ಯದ ದುಪ್ಪಟ್ಟು ಪರಿಹಾರ ಧನ ಹಾಗೂ ಸೊಲೇಷಿಯಂ ನೀಡಲಿದೆ. ಈ ಜಾಗಕ್ಕೆ ಉತ್ತಮ ದರ ಸಿಗುವ ಬಗ್ಗೆ ಆತಂಕ ಬೇಡ. ಭೂಮಿಗೆ ಪರಿಹಾರ ನೀಡಿದ ಬಳಿಕವೇ ಕಾಮಗಾರಿ ಆರಂಭಿಸಲಿದ್ದೇವೆ’ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು. 

‘ಕೆಂಪೇಗೌಡ ಬಡಾವಣೆ: 2022 ಅಂತ್ಯದೊಳಗೆ ಮೂಲಸೌಕರ್ಯ’

‘ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು 2022ರ ಡಿಸೆಂಬರ್‌ಗೆ ಮುನ್ನ ಪೂರ್ಣಗೊಳಿಸಲಾಗುವುದು’ ಎಂದು ಎಸ್‌.ಆರ್‌.ವಿಶ್ವನಾಥ್‌ ಭರವಸೆ ನೀಡಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯ ಭೂಸ್ವಾಧೀನ ಪೂರ್ಣಗೊಳ್ಳದ ಕಾರಣ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಸೂರ್ಯಕಿರಣ್‌ ಗಮನ ಸೆಳೆದರು.

‘ಈ ಬಡಾವಣೆಯಲ್ಲಿ ತ್ಯಾಜ್ಯ ನೀರನ್ನು ತೃತೀಯ ಹಂತದಲ್ಲಿ ಶುದ್ಧೀಕರಿಸಿ ಮರುಬಳಕೆ ಮಾಡುವ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಹಾಗೂ ಶುದ್ಧೀಕರಿಸಿದ ತ್ಯಾಜ್ಯ ನೀರು ಪೂರೈಕೆಗೆ ಜೋಡಿಕೊಳವೆ ಮಾರ್ಗ ಅಳವಡಿಕೆ ಮಾಡಲಾಗುತ್ತದೆ. ಈ ಬಡಾವಣೆಯು ವಿಶಾಲ ರಸ್ತೆಗಳನ್ನು ಹೊಂದಿರಲಿದೆ’ ಎಂದರು.

ಮಾಚೋಹಳ್ಳಿ ಬಳಿ ಭೂಸ್ವಾಧೀನ ಸಮಸ್ಯೆಯಿಂದಾಗಿ ಬಡಾವಣೆಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ವಿಳಂಬವಾಗಿದೆ. ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಿದ್ದೇವೆ. ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿ ಚುರುಕುಗೊಳಿಸಲಿದ್ದೇವೆ. ಈ ಕಾರ್ಯಗಳಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ರಸ್ತೆಗಳ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆ ಮಾಡಲು ಬಿಡಿಎ ಆಡಳಿತ ಮಂಡಳಿಯ ಮುಂದಿನ ಸಭೆಯಲ್ಲಿ ಮಂಜೂರಾತಿ ನೀಡಲಿದ್ದೇವೆ’ ಎಂದು ಅಧ್ಯಕ್ಷರು ತಿಳಿಸಿದರು.

‘ಹತ್ತಾರು ಸಮಸ್ಯೆ – ತ್ವರಿತ ಪರಿಹಾರ’

ಕರೆ ಮಾಡಿದ ನಿವೇಶನದಾರರು ಬಿಡಿಎ ಬಡಾವಣೆಗಳಲ್ಲಿನ ಹತ್ತಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಇವುಗಳನ್ನು ತ್ವರಿತವಾಗಿ ಬಗೆಹರಿಸಲು ಕ್ರಮಕೈಗೊಳ್ಳುವುದಾಗಿ ಎಸ್‌.ಆರ್‌.ವಿಶ್ವನಾಥ್‌ ಭರವಸೆ ನೀಡಿದರು.

ಮರಿಗೌಡ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಕನ್ನಳ್ಳಿ ಕೆರೆ ಆಸುಪಾಸಿನ ‌ನಿವೇಶನಗಳಲ್ಲಿ ನೀರು ನಿಲ್ಲುವುದರಿಂದ ಕಟ್ಟಡ ನಿರ್ಮಿಸಲು ಸಾಧ್ಯವಾಗದು.

ಎಸ್‌.ಆರ್‌.ವಿಶ್ವನಾಥ್‌: ಈ ಪರಿಸರದಲ್ಲಿ ನೀರು ನಿಲ್ಲದಂತೆ ತಡೆಯಲು ಕಾಲುವೆ ನಿರ್ಮಿಸಲಾಗುತ್ತದೆ. ಅದರಿಂದಲೂ ಸಮಸ್ಯೆ ಬಗೆಹರಿಯದಿದ್ದರೆ, ಇಲ್ಲಿ ನಿವೇಶನ ಹಂಚಿಕೆಯಾದವರಿಗೆ ಬದಲಿ ನಿವೇಶನ ನೀಡಲಾಗುವುದು.

ನವೀನ, ಪ್ರಭುಲಿಂಗ ಪಾಟೀಲ: ಹಲಗೆವಡೇರಹಳ್ಳಿಯಲ್ಲಿ ಬಿಡಿಎ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿರ್ವಹಣೆಯನ್ನು ಗುತ್ತಿಗೆದಾರರು ಸರಿಯಾಗಿ ನಡೆಸುತ್ತಿಲ್ಲ.

ವಿಶ್ವನಾಥ್‌: ಗುತ್ತಿಗೆದಾರರನ್ನು ಹಾಗೂ ಎಂಜಿನಿಯರ್‌ ಅವರನ್ನು ಕರೆಸಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ.

ಸಂಜೀವ ಶೆಟ್ಟಿ: ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ 2 ಲಕ್ಷಕ್ಕೂ ಅಧಿಕ ಮರ, ಗಿಡಗಳನ್ನು ಕಡಿಯಲಾಗಿದೆ. ಇಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು.

ವಿಶ್ವನಾಥ್‌: ಬಡಾವಣೆಯಲ್ಲಿ ಉದ್ಯಾನಗಳಿಗೆ ಮೀಸಲಿಟ್ಟ ಪ್ರದೇಶಗಳಲ್ಲಿ ಮರಗಳ ಉದ್ಯಾನ ನಿರ್ಮಿಸುತ್ತೇವೆ. ಇಲ್ಲಿ ಕೆರೆ ಮತ್ತು ರಾಜಕಾಲುವೆಗಳ ಮೀಸಲು ಪ್ರದೇಶದಲ್ಲಿ ಸಸಿಗಳನ್ನು ನೆಡುವಂತೆ ಸೂಚನೆ ನೀಡುತ್ತೇನೆ.

ತಿಮ್ಮಪ್ಪ: ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಉದ್ಯಾನಗಳಿಗೆ ಮೀಸಲಿಟ್ಟ ಜಾಗದಲ್ಲಿ ಸ್ಮಶಾನ ನಿರ್ಮಿಸಲಾಗಿದೆ. ಅಕ್ಕ ಪಕ್ಕದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಸಮಸ್ಯೆ ಆಗುತ್ತಿದೆ.

ವಿಶ್ವನಾಥ್‌: ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ.

ಸಿದ್ಧರಾಜು: ಬಿಡಿಎ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವವರಿಗೆ ನಿವೇಶನದ ಪೂರ್ಣ ಮೌಲ್ಯವನ್ನೂ ಕಟ್ಟಿಸಿಕೊಳ್ಳದೇ ಜಾಗದ ಹಕ್ಕು ಬಿಟ್ಟುಕೊಡುವುದು ಅನ್ಯಾಯವಲ್ಲವೇ?

ವಿಶ್ವನಾಥ್‌: 12 ವರ್ಷಗಳ ಹಿಂದೆ ಮನೆ ನಿರ್ಮಿಸಿದವರಿಗೆ ಮಾತ್ರ ನಿರ್ದಿಷ್ಟ ಮೊತ್ತದ ದಂಡವನ್ನು ಕಟ್ಟಿಸಿಕೊಂಡು ಹಂಚಿಕೆ ಪತ್ರ ನೀಡಲಾಗುತ್ತದೆ. ಒಂದು ಬಾರಿಗೆ ಸೀಮಿತವಾಗಿ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. 

ವೇದಮೂರ್ತಿ: ಅಂಜನಾಪುರ ಬಡಾವಣೆಯಲ್ಲಿ ನಮಗೆ 2003ರಲ್ಲಿ ನಿವೇಶನ ಹಂಚಿಕೆಯಾಗಿದೆ. ಇನ್ನೂ ಇಲ್ಲಿಗೆ ಒಳಚರಂಡಿ, ಕುಡಿಯುವ ನೀರು ಹಾಗೂ ವಿದ್ಯುತ್‌ ದೀಪಗಳ ವ್ಯವಸ್ಥೆ ಕಲ್ಪಿಸಿಲ್ಲ.

ವಿಶ್ವನಾಥ್‌: ಈ ಬಗ್ಗೆ ಪರಿಶೀಲಿಸಿ, ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು