ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಯುವಕರಿಗೆ ವಂಚಿಸಿದ್ದ ಆರ್ಮಿ ಸೋಫಿಯಾ ಸೆರೆ

7

ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಯುವಕರಿಗೆ ವಂಚಿಸಿದ್ದ ಆರ್ಮಿ ಸೋಫಿಯಾ ಸೆರೆ

Published:
Updated:
Deccan Herald

ಬೆಂಗಳೂರು: ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 20ಕ್ಕೂ ಹೆಚ್ಚು ಯುವಕರಿಂದ ₹ 7.5 ಲಕ್ಷ ಪಡೆದು ವಂಚಿಸಿದ್ದ ಸುಜಾತಾ ಅಲಿಯಾಸ್ ‘ಆರ್ಮಿ ಸೋಫಿಯಾ’ ಹಾಗೂ ಕೃಷ್ಣರಾಜನ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆಜಿಎಫ್‌ನ ಸುಜಾತಾ, ‘ನನಗೆ ಸೇನೆ ಹಿರಿಯ ಅಧಿಕಾರಿಗಳ ಪರಿಚಯವಿದೆ. ಅವರಿಗೆ ಹೇಳಿ ಸೈನಿಕ, ಗುಮಾಸ್ತ, ಬಾಣಸಿಗ ಹಾಗೂ ಚಾಲಕನ ಕೆಲಸ ಕೊಡಿಸುತ್ತೇನೆ’ ಎಂದು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದಳು. ಉದ್ಯೋಗದ ಹುಡುಕಾಟದಲ್ಲಿರುವ ಯುವಕರನ್ನು ಹುಡುಕಿ, ಸುಜಾತಾಳ ಬಳಿ ಕರೆತರುವುದು ಕೃಷ್ಣರಾಜನ್‌ನ ಕೆಲಸವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

2013ರಲ್ಲೂ ಬಂಧನ:‌ ದೂರಶಿಕ್ಷಣದ ಮೂಲಕ ಸ್ನಾತಕೋತ್ತರ ಪದವಿ ಪಡೆದಿರುವ ಸುಜಾತಾ, ಸೇನಾ ಸಮವಸ್ತ್ರ ಧರಿಸಿಕೊಂಡು ಓಡಾಡುತ್ತಿದ್ದಳು. ತಾನು ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿರುವುದಾಗಿ ನಂಬಿಸಿ, 2013ರಲ್ಲೂ ಉದ್ಯೋಗ ಕೊಡಿಸುವ ನೆಪದಲ್ಲಿ ಹಲವರಿಗೆ ವಂಚಿಸಿದ್ದಳು. ಆಗ ಹಲಸೂರು ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಪುನಃ ಚಾಳಿ ಮುಂದುವರಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವರ್ಷದ ಹಿಂದೆ ಹಲಸೂರಿಗೆ ಜಾತ್ರೆಗೆ ಬಂದಿದ್ದ ಆಕೆಗೆ ಕೃಷ್ಣರಾಜನ್‌ನ ಪರಿಚಯವಾಗಿತ್ತು. ಸೇನೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರನ್ನು ತನ್ನ ಬಳಿ ಕರೆದುಕೊಂಡು ಬಂದರೆ ಕಮಿಷನ್ ನೀಡುವುದಾಗಿ ಹೇಳಿದ್ದಳು. ಅದಕ್ಕೆ ಒ‍ಪ್ಪಿಕೊಂಡ ಆತ, ಒಬ್ಬ ಅಭ್ಯರ್ಥಿಗೆ ₹ 5 ಸಾವಿರ ಕಮಿಷನ್ ನಿಗದಿ ಮಾಡಿದ್ದ.

ದೂರು ಕೊಟ್ಟ ಪದವೀಧರ: ‘ಕೃಷ್ಣರಾಜನ್‌ ಮೂಲಕ ನನಗೆ ಪರಿಚಿತರಾದ ಸುಜಾತಾ ಅವರು ಸೇನೆಯಲ್ಲಿ ಗುಮಾಸ್ತನ ಕೆಲಸ ಕೊಡಿಸುವುದಾಗಿ ನಂಬಿಸಿ ₹ 40 ಸಾವಿರ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಬಿ.ಕಾಂ ಪದವೀಧರ ದೀಪುಶಂಕರ್ ಜುಲೈ 31ರಂದು ಹೆಬ್ಬಾಳ ಠಾಣೆಗೆ ದೂರು ಕೊಟ್ಟಿದ್ದರು.

‘ನಾನು ಹಣ ಕೊಟ್ಟ ಕೆಲವೇ ದಿನಗಳಲ್ಲಿ ಸೇನೆಯ ಅಧಿಕಾರಿಯೊಬ್ಬರ ಹೆಸರಿನಲ್ಲಿ ಆದೇಶದ ಪ್ರತಿಯೊಂದು ಮನೆ ವಿಳಾಸಕ್ಕೆ ಬಂತು. ‘ಗುಮಾಸ್ತನ ಹುದ್ದೆಗೆ ಆಯ್ಕೆಯಾದವರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ. ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು, ಪ್ರಮಾಣ ಪತ್ರದೊಂದಿಗೆ ಕಚೇರಿಗೆ ಬನ್ನಿ’ ಎಂದು ಅದರಲ್ಲಿ ಬರೆದಿತ್ತು. ನಂತರ ಸುಜಾತಾ ಅವರೇ ವೈದ್ಯಕೀಯ ಪರೀಕ್ಷೆ ಮಾಡಿಸುವುದಾಗಿ ನನ್ನನ್ನು ಊಟಿಗೆ ಕರೆದುಕೊಂಡು ಹೋದರು.’

‘ಸುಜಾತಾ ಸಹಚರ ಮೆಹಬೂಬ್ ಪಾಷಾ ಎಂಬುವರು ಇನ್ನೂ 20ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಊಟಿಗೆ ಕರೆದುಕೊಂಡು ಬಂದಿದ್ದರು. ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಯಿತು. ವೈದ್ಯರು ಕೊಟ್ಟ ಪ್ರಮಾಣ ಪತ್ರಗಳನ್ನು ತಾವೇ ಅಂಚೆ ಮೂಲಕ ಸೇನಾ ಕಚೇರಿಗೆ ಕಳುಹಿಸುವುದಾಗಿ ಸುಜಾತಾ ಹಾಗೂ ಮೆಹಬೂಬ್ ನಂಬಿಸಿದರು. ಇನ್ನೇನು ಕೆಲಸ ಆಯಿತು ಎಂಬ ಖುಷಿಯಲ್ಲಿ ಎಲ್ಲರೂ ಇದ್ದೆವು.’

‘ಆದರೆ, ಪ್ರಕ್ರಿಯೆ ಪೂರ್ಣಗೊಂಡು ತಿಂಗಳು ಕಳೆದರೂ ಸೇನಾ ಸಿಬ್ಬಂದಿಯಿಂದ ಕರೆ ಬರಲಿಲ್ಲ. ಅನುಮಾನಗೊಂಡ ನಾನು, ವಿಚಾರಿಸಲು ಕೃಷ್ಣರಾಜನ್ ಮನೆಗೆ ಹೋದೆ. ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಸುಜಾತಾ ಅವರನ್ನು ಹುಡುಕಿಕೊಂಡು ಕೆಜಿಎಫ್‌ಗೆ ಹೋದಾಗ, ‘ಆಕೆಯಿಂದ ನೀವೂ ಮೋಸ ಹೋದಿರಾ’ ಎಂದು ಸ್ಥಳೀಯರು ಕೇಳಿದರು. ಆಕೆ ಮಹಾನ್ ವಂಚಕಿ ಎಂಬುದು ಆಗ ಗೊತ್ತಾಯಿತು. ನಮಗೆ ಮೋಸ ಮಾಡಿರುವ ಸುಜಾತಾ, ಕೃಷ್ಣರಾಜನ್, ಮೆಹಬೂಬ್ ಪಾಷಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ದೀಪುಶಂಕರ್ ದೂರಿನಲ್ಲಿ ಮನವಿ ಮಾಡಿದ್ದರು.

ಸಿಸಿಬಿಗೆ ವರ್ಗ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿದ್ದರು. ವಿಶೇಷ ವಿಚಾರಣಾ ದಳದ ಎಸಿಪಿ ಪಿ.ಪಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಕೆಜಿಎಫ್‌ನಲ್ಲಿ ಸುಜಾತಾಳನ್ನು ವಶಕ್ಕೆ ಪಡೆದ ತಂಡ, ಆಕೆ ನೀಡಿದ ಮಾಹಿತಿ ಆಧರಿಸಿ ಹೆಬ್ಬಾಳದ ವಿ.ನಾಗೇನಹಳ್ಳಿಯಲ್ಲಿ ಕೃಷ್ಣರಾಜನ್‌ನನ್ನೂ ಬಂಧಿಸಿದ್ದಾರೆ.
***

ಆರು ಭಾಷೆ ಬಲ್ಲ ಸೋಫಿಯಾ!
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಬಲ್ಲ ಸುಜಾತಾ, ಕೆಲ ಅಭ್ಯರ್ಥಿಗಳ ಬಳಿ ತನ್ನ ಹೆಸರನ್ನು ಸೋಫಿಯಾ ಎಂದು ಹೇಳಿಕೊಂಡಿದ್ದಳು. ಉದ್ಯೋಗಾಕಾಂಕ್ಷಿಗಳು ಅವರನ್ನು ‘ಆರ್ಮಿ ಸೋಫಿಯಾ’ ಎಂದೇ ಕರೆಯುತ್ತಿದ್ದರು.

‘ಇಂಡಿಯನ್ ಆರ್ಮಿ’ ಲೆಟರ್ ಹೆಡ್‌ನಲ್ಲಿದ್ದ ನಕಲಿ ನೇಮಕಾತಿ ಆದೇಶ ಪ್ರತಿಗಳು, ನಕಲಿ ವೈದ್ಯಕೀಯ ಪ್ರಮಾಣ ಪತ್ರಗಳು ಹಾಗೂ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಮೆಹಬೂಬ್ ಪಾಷಾ ಮೊಬೈಲ್ ಸ್ವಿಚ್ಡ್ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !