ಬೆಂಗಳೂರು: ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಅರುಣ್ ಶಹಾಪೂರ ಒತ್ತಾಯಿಸಿದರು.
ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ತರಲು ಕೇಂದ್ರ ಸಂಪುಟ ಸಭೆ ಸಮ್ಮತಿಸಿರುವುದು ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ. ಈ ಯೋಜನೆ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ನಿವೃತ್ತರಿಗೆ ಸರ್ಕಾರದ ಬೊಕ್ಕಸದಿಂದ ಪಿಂಚಣಿ ನೀಡುವುದು ಹೊರೆ ಎಂದು ಭಾವಿಸಿದ್ದ ಅಂದಿನ ಕೇಂದ್ರ ಸರ್ಕಾರ 2004ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿಗೆ ತಂದಿತು. ಎನ್‌ಪಿಎಸ್‌ನಿಂದ ನಿವೃತ್ತ ನೌಕರರಿಗೆ ಜೀವನ ಭದ್ರತೆ ಇಲ್ಲದಿರುವುದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಎಸ್ ಜಾರಿಗೊಳಿಸಿದ್ದಾರೆ ಎಂದರು.
ಪಿಂಚಣಿ ಯೋಜನೆಗಳು ಇಂದು ರಾಜಕೀಯ ವಿಷಯಗಳಾಗಿ ಬದಲಾಗಿವೆ. ನಿವೃತ್ತರಿಗಾಗುವ ಲಾಭ–ನಷ್ಟಕ್ಕಿಂತ ರಾಜಕೀಯ ಲಾಭ–ನಷ್ಟಗಳು ಪ್ರಮುಖ ಸ್ಥಾನ ಪಡೆಯುತ್ತಿವೆ. ಕಾಂಗ್ರೆಸ್ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಕ್ರಮ ಕೈಗೊಳ್ಳಬೇಕು. ಸಭೆಗಳನ್ನು ನಡೆಸುತ್ತಾ, ಸಮಿತಿ ರಚಿಸಿ ಕಾಲಹರಣ ಮಾಡುವ ಬದಲು ತಕ್ಷಣ ಒಪಿಎಸ್ ಜಾರಿಗೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚಿಸುತ್ತಿದೆ. ಆಯೋಗದ ಶಿಫಾರಸು ಜಾರಿಯಾದರೆ ಕೇಂದ್ರ ಹಾಗೂ ರಾಜ್ಯ ನೌಕರರ ವೇತನ, ಭತ್ಯೆಗಳ ಅಂತರ ಹೆಚ್ಚಾಗಲಿದೆ. ಇಂತಹ ತಾರತಮ್ಯ ಹೋಗಲಾಡಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂದನಕೇರ ಮಾತನಾಡಿ, ಕನಿಷ್ಠ 25 ವರ್ಷ ಸೇವೆ ಸಲ್ಲಿಸಿದ ನೌಕರರು ನಿವೃತ್ತಿಯ ನಂತರ ತಮ್ಮ ಮೂಲ ವೇತನದ ಶೇ 50ರಷ್ಟು ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಾರೆ. ಮೃತರಾದರೆ ಅವರ ಕುಟುಂಬಕ್ಕೆ ಅವರ ಪಿಂಚಣಿಯಲ್ಲಿ ಶೇ 60ರಷ್ಟು ಸಿಗುತ್ತದೆ. ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರಿಗೆ ತಿಂಗಳಿಗೆ ₹10 ಸಾವಿರ ಸಿಗುತ್ತದೆ ಎಂದರು.
ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಶಿಕ್ಷಕರನ್ನು ಪಿಯು ಕಾಲೇಜು ಉಪನ್ಯಾಸರನ್ನಾಗಿ ನೇಮಿಸಬೇಕು. 2011ರಿಂದ ಸ್ಥಗಿತಗೊಂಡಿರುವ ಬಡ್ತಿ ಪ್ರಕ್ರಿಯೆ ಪುನರಾರಂಭಿಸಬೇಕುಶಶೀಲ್ ನಮೋಶಿ. ವಿಧಾನ ಪರಿಷತ್ ಸದಸ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.