ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳ ಗೌರವಧನ ಬಿಡುಗಡೆಗೊಳಿಸಲು ಒತ್ತಾಯ

Last Updated 30 ನವೆಂಬರ್ 2022, 15:37 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ 3 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಗೌರವ ಧನ ತಕ್ಷಣ ಪಾವತಿಸಬೇಕು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ಆಶಾ ಕಾರ್ಯಕರ್ತೆಯರಿಗೆ ನಿಗದಿಪಡಿಸಿದ ಕೆಲಸಗಳನ್ನು ಹೊರತುಪಡಿಸಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯ ಮಾಡಲಾಗುತ್ತದೆ. ಪ್ರತಿ ತಿಂಗಳು ಎನ್‌ಸಿಡಿ ಮತ್ತು ಇ–ಸಂಜೀವಿನಿ ಸಮೀಕ್ಷೆಗಳನ್ನು ಮಾಡಲು ಬಳಸಿಕೊಳ್ಳಲಾಗುತ್ತಿದೆ. ಈ ಕೆಲಸಗಳು ಆಶಾ ಕಾರ್ಯಕರ್ತೆಯರದ್ದಲ್ಲ ಎಂಬ ನಿರ್ದೇಶನವಿದ್ದರೂ ಅಧಿಕಾರಿಗಳು ಕೇಳುತ್ತಿಲ್ಲ. ಮೊಬೈಲ್‌ ಆ್ಯಪ್‌ಗೆ ಡಾಟಾ ನೀಡದೆ ಸಮೀಕ್ಷೆ ಮಾಡಿಸಲಾಗುತ್ತಿದೆ’ ಎಂದು ಸಂಘದ ರಾಜ್ಯ ನಾಯಕಿ ರಮಾ ಟಿ.ಸಿ. ಆರೋಪಿಸಿದರು.

‘ನಗರ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಬೇರೆ ಪ್ರದೇಶದ ಕೆಲಸಗಳನ್ನು ಮಾಡಲು ಒತ್ತಾಯಿಸಲಾಗುತ್ತದೆ. ತಿಂಗಳ ಕಾಲ ಆಶಾಗಳು ಮಾಡಿದ ಚಟವಟಿಕೆಗಳು ಆಶಾನಿಧಿ ಅಥವಾ ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ಸರಿಯಾಗಿ ನಮೂದಾಗುತ್ತಿಲ್ಲ. ಇದರಿಂದ ನಮ್ಮ ದುಡಿತಕ್ಕೆ ಕಳೆದ 4 ವರ್ಷಗಳಿಂದ ಯಾವುದೇ ರೀತಿಯ ಪ್ರೋತ್ಸಾಹಧನ ಸಿಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿ ತಿಂಗಳ 5ರಂದು ಗೌರವಧನ ಬಿಡುಗಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಕೇಂದ್ರದ ಪ್ರೋತ್ಸಾಹಧನ ಮತ್ತು ಎನ್‌ಸಿಡಿ ಹಣವನ್ನು ಕೂಡಲೇ ಪಾವತಿಸಬೇಕು. ಆಭಾ ಕಾರ್ಡ್‌, ಮತದಾರರ ಚೀಟಿ ಜೋಡಣೆ (ಬಿಎಲ್‌ಒ ಕೆಲಸ), ಇ–ಸಂಜೀವಿನಿ ಮುಂತಾದ ಮೊಬೈಲ್‌ ಆಧಾರಿತ ಕೆಲಸಗಳನ್ನು ಆಶಾಗಳಿಂದ ಒತ್ತಾಯ ಪೂರ್ವಕವಾಗಿ ಹೇರಬಾರದು. ಬೆಂಗಳೂರು ನಗರದ ದುಬಾರಿ ಜೀವನದ ವೆಚ್ಚಕ್ಕೆ ಅನುಗುಣವಾಗಿ ಬಿಬಿಎಂಪಿ ಆಶಾಗಳಿಗೆ ಹೆಚ್ಚುವರಿಯಾಗಿ ₹5 ಸಾವಿರ ಪ್ರೋತ್ಸಾಹಧನ ನಿಗದಿಗೊಳಿಸಿ, ನಗರದ ಆಶಾಗಳಿಗೆ ಪ್ರತಿ ತಿಂಗಳ ಬಸ್‌ ಪಾಸ್‌ ಸೌಲಭ್ಯ ನೀಡಬೇಕು’ ಎಂದು ಸಂಘದ ಜಿಲ್ಲಾ ಮುಖಂಡ ದುರಗೇಶ್ ಪ್ರಕಾಶ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT