ಬುಧವಾರ, ಜೂನ್ 29, 2022
23 °C
ಸಿಸಿಬಿ ಹೆಸರಿನಲ್ಲಿ ಹಣ ವಸೂಲಿ ಆರೋಪ

ಸಿಸಿಬಿ ಹೆಸರಿನಲ್ಲಿ ಹಣ ವಸೂಲಿ; ‘ಬಿಟ್ ಕಾಯಿನ್’ ದೂರು ಕೊಟ್ಟಿದ್ದ ಅಡಿಗ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮೂಲಕ ನಡೆದಿದೆ’ ಎನ್ನಲಾದ ಬಿಟ್‌ ಕಾಯಿನ್ ಹಗರಣದ ಬಗ್ಗೆ ದೂರು ನೀಡಿದ್ದ ಆರ್‌ಟಿಐ ಕಾರ್ಯಕರ್ತ ಎ.ಆರ್. ಅಶೋಕ್ ಕುಮಾರ್ ಅಡಿಗ ಅವರನ್ನು, ಸಿಸಿಬಿ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದ ಆರೋಪದಡಿ ಸೋಮವಾರ ಬಂಧಿಸಲಾಗಿದೆ.

‘ಬಸವೇಶ್ವರನಗರ ನಿವಾಸಿ ಅಶೋಕ್ ಕುಮಾರ್ ಅಡಿಗ, ಕ್ಲಬ್‌ಗಳಲ್ಲಿ ಜೂಜಾಟವಾಡಲು ನೆರವು ನೀಡುವ ಆಮಿಷವೊಡ್ಡಿ ಸಿಸಿಬಿ ಹೆಸರಿನಲ್ಲಿ ಹಣ ಪಡೆದಿದ್ದ. ಕ್ಲಬ್‌ ಮಾಲೀಕರು ನೀಡಿದ್ದ ದೂರಿನನ್ವಯ ದಾಖಲಾಗಿದ್ದ ಪ್ರಕರಣದಲ್ಲಿ ಅಶೋಕ್‌ಕುಮಾರ್‌ನನ್ನು ಬಂಧಿಸಲಾಗಿದ್ದು, 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ನಿಯಮ ಉಲ್ಲಂಘಿ ಸಿದ್ದ ಕೆಲ ಕ್ಲಬ್‌ಗಳನ್ನು ಬಂದ್ ಮಾಡಿಸಲಾಗಿದೆ. ಕೆಲ ಕ್ಲಬ್‌ ಮಾಲೀಕರ ಸಂಪರ್ಕಿಸಿದ್ದ ಅಶೋಕ್‌ಕುಮಾರ್, ಮಾಗಡಿ ರಸ್ತೆಯಲ್ಲಿರುವ ಕ್ಲಬ್‌ ವೊಂದರಲ್ಲಿ ಸಭೆ ಮಾಡಿದ್ದ. ‘ಸಿಸಿಬಿ ಅಧಿಕಾರಿಗಳು ನನಗೆ ಪರಿಚಯ. ಪ್ರತಿ ಕ್ಲಬ್‌ನಿಂದ ತಿಂಗಳಿಗೆ ₹ 50 ಸಾವಿರ ನೀಡಿದರೆ, ದಾಳಿ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದಿದ್ದ. ಹಣ ನೀಡದಿದ್ದರೆ ದಾಳಿ ಮಾಡಿಸುವ ಬೆದರಿಕೆ ಸಹ ಹಾಕಿದ್ದ. ಹೆದರಿದ್ದ ಮಾಲೀಕ ಶ್ರೀನಿವಾಸ್, ₹50 ಸಾವಿರ ಕೊಟ್ಟಿದ್ದರು.’

‘ಆರೋಪಿ ಪುನಃ ಹಣ ಕೇಳಿದ್ದರಿಂದ ಬೇಸತ್ತ ಶ್ರೀನಿವಾಸ್ ಹಾಗೂ ರಮೇಶ್, ಮಾಗಡಿ ರಸ್ತೆ ಠಾಣೆಗೆ ದೂರು ನೀಡಿದ್ದರು. ಆಡಿಯೊ ಸಂಭಾಷಣೆಯನ್ನೂ ಪುರಾವೆಯಾಗಿ ನೀಡಿದ್ದರು’ ಎಂದೂ ಹೇಳಿವೆ.

12,900 ಬಿಟ್ ಕಾಯಿನ್ ಹಗರಣ: ‘ಶ್ರೀಕೃಷ್ಣ ಹ್ಯಾಕ್‌ ಮಾಡಿದ್ದ 12,900 ಬಿಟ್‌ ಕಾಯಿನ್‌ಗಳನ್ನು (ಮೇ 5ರ ಮಾರುಕಟ್ಟೆ ಮೌಲ್ಯ ₹ 2971.33 ಕೋಟಿ) ಪೊಲೀಸ್ ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವಿಗಳು ತಮ್ಮದಾಗಿಸಿಕೊಂಡಿದ್ದಾರೆ. ಇದೊಂದು ದೊಡ್ಡ ಹಗರಣ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಅಶೋಕ್‌ ಕುಮಾರ್ ಅಡಿಗ 2021ರ ಏಪ್ರಿಲ್ 26ರಂದು ಕಮಿಷನರ್ ಕಮಲ್‌ ಪಂತ್ ಹಾಗೂ ಇತರರಿಗೆ ದೂರು ನೀಡಿದ್ದರು. . ಇದೀಗ ಅಶೋಕ್‌ಕುಮಾರ್ ಅವರನ್ನೇ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಪಟ್ಟಂತೆ ಅಶೋಕ್‌ಕುಮಾರ್ ಬಳಿ ಇರುವದಾಖಲೆಗಳನ್ನು ನಾಶಪಡಿಸಲು ಯತ್ನ ನಡೆಯುತ್ತಿರುವ ಸಂಶಯವೂ ಇದೆ ಎಂದೂ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು