ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಪತ್ನಿಯೆಂದು ರಂಪಾಟ ಮಾಡಿ ಗರ್ಭಗುಡಿ ಪ್ರವೇಶಕ್ಕೆ ಯತ್ನಿಸಿದ ಮಹಿಳೆ– ಹಲ್ಲೆ

ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಘಟನೆ l ಆಸ್ಪತ್ರೆಗೆ ಆರೋಪಿ ದಾಖಲು
Last Updated 6 ಜನವರಿ 2023, 20:38 IST
ಅಕ್ಷರ ಗಾತ್ರ

ಬೆಂಗಳೂರು: ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ದೇವರ ಪತ್ನಿಯೆಂದು ಹೇಳಿಕೊಂಡು ಗರ್ಭಗುಡಿ ಪ್ರವೇಶಿಸಲು ಮುಂದಾಗಿದ್ದ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ದೇವಸ್ಥಾನ ಆಡಳಿತ ಮಂಡಳಿ ಮುಖ್ಯಸ್ಥ ಮುನಿಕೃಷ್ಣಪ್ಪ (68) ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘2022ರ ಡಿ. 21ರಂದು ನಡೆದಿರುವ ಘಟನೆ ಸಂಬಂಧ 32 ವರ್ಷದ ಮಹಿಳೆ ದೂರು ನೀಡಿದ್ದಾರೆ. ಮುನಿಕೃಷ್ಣಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಒಂದು ಬಾರಿ ವಿಚಾರಣೆ ನಡೆಸಲಾಗಿದೆ. ಇದರ ನಡುವೆಯೇ ಆರೋಗ್ಯ ಸಮಸ್ಯೆ ಇರುವುದಾಗಿ ಹೇಳಿ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ವೈದ್ಯರಿಂದ ಮಾಹಿತಿ ಪಡೆಯಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇವಸ್ಥಾನದ ಒಳಗೆ ಮಹಿಳೆಯನ್ನು ಎಳೆದಾಡಿ, ಹಲ್ಲೆ ಮಾಡಲಾಗಿದೆ. ಜಡೆ ಹಿಡಿದು ಎಳೆದೊಯ್ದು ದೇವಸ್ಥಾನದ ಹೊರಗೆ ಹಾಕಲಾಗಿದೆ. ಈ ದೃಶ್ಯ ದೇವಸ್ಥಾನದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ’ ಎಂದು ಹೇಳಿದರು.

ದೇವರ ಪಕ್ಕ ಕುಳಿತುಕೊಳ್ಳಲು ಯತ್ನ: ‘ದೇವಸ್ಥಾನಕ್ಕೆ ಬೆಳಿಗ್ಗೆ ಹೋಗಿದ್ದ ಮಹಿಳೆ, ‘ನಾನು ದೇವರ ಪತ್ನಿ. ಗರ್ಭಗುಡಿ ಒಳಗೆ ಹೋಗಿ ದೇವರ ಮೂರ್ತಿ ಪಕ್ಕ ಕುಳಿತುಕೊಳ್ಳುತ್ತೇನೆ’ ಎಂಬುದಾಗಿ ಹೇಳಿದ್ದರು. ಬುದ್ದಿವಾದ ಹೇಳಿದ್ದ ಅರ್ಚಕ, ‘ಗರ್ಭಗುಡಿ
ಒಳಗೆ ಹೋಗಬಾರದು’ ಎಂದಿದ್ದರು’ ಎಂದು ಪೊಲೀಸ್ ಮೂಲಗಳು
ಹೇಳಿವೆ.

‘ಅರ್ಚಕರ ಮಾತು ಕೇಳದೇ ರಂಪಾಟ ಮಾಡಿದ್ದ ಮಹಿಳೆ, ಗರ್ಭಗುಡಿ ಒಳಗೆ ಹೋಗಲು ಮುಂದಾಗಿದ್ದರು. ತಡೆದಿದ್ದಕ್ಕೆ, ಅರ್ಚಕರ ಮೇಲೆ ಹಾಗೂ ದೇವಸ್ಥಾನದಲ್ಲೆಲ್ಲ ಉಗುಳಿ ಶಾಪ ಹಾಕಿದ್ದರು. ಸ್ಥಳಕ್ಕೆ ಬಂದಿದ್ದ ಮುನಿಕೃಷ್ಣಪ್ಪ, ದೇವಸ್ಥಾನದಿಂದ ಹೊರಗೆ ಹೋಗುವಂತೆ ಮಹಿಳೆ ವಿರುದ್ಧ ಹರಿಹಾಯ್ದಿದ್ದ. ಅದಕ್ಕೆ ಮಹಿಳೆ ಒಪ್ಪಿರಲಿಲ್ಲ. ಸಿಟ್ಟಾದ ಆರೋಪಿ, ಮಹಿಳೆ ಮೇಲೆ ಹಲ್ಲೆ ಮಾಡಿದ್ದ. ಜಡೆ ಹಿಡಿದು ಎಳೆದೊಯ್ದು ದೇವಸ್ಥಾನದಿಂದ ಹೊರಗೆ ಹಾಕಿದ್ದ’ ಎಂದು ಮೂಲಗಳು ತಿಳಿಸಿವೆ.

‘ಘಟನೆ ಬಗ್ಗೆ ಮುನಿಕೃಷ್ಣಪ್ಪ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಅವರೇ ಕಾನೂನು ಕೈಗೆತ್ತಿಕೊಂಡು ಮಹಿಳೆಯನ್ನು ಥಳಿಸಿರುವುದು ಅಪರಾಧ. ಮಹಿಳೆ ಗೌರವಕ್ಕೆ ಧಕ್ಕೆ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಮುನಿಕೃಷ್ಣಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೇವರ ಪತ್ನಿಯೆಂದು ಹೇಳಿ ಗರ್ಭಗುಡಿ ಒಳಗೆ ಹೋಗಲು ಯತ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ಹೇಳಿವೆ.

‘ನೀಚ ಕುಲದವಳೆಂದು ದರ್ಶನಕ್ಕೆ ಅಡ್ಡಿ’

‘ದೇವಸ್ಥಾನಕ್ಕೆ ಹೋದಾಗ ಮುನಿಕೃಷ್ಣಪ್ಪ ಅಸಭ್ಯವಾಗಿ ವರ್ತಿಸಿದ್ದಾರೆ. ಕಪ್ಪಗಿರುವ ನೀಚ ಕುಲದವಳೆಂದು ಅವಮಾನಿಸಿದ್ದಾರೆ. ಸ್ನಾನ ಮಾಡದೇ ದೇವಸ್ಥಾನಕ್ಕೆ ಬರುತ್ತೀಯಾ, ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಹೀಯಾಳಿಸಿದ್ದಾರೆ. ಹಲ್ಲೆ ಮಾಡಿ, ಕಬ್ಬಿಣದ ರಾಡ್‌ನಿಂದ ಹೊಡೆದು ಥಳಿಸಿದ್ದಾರೆ. ಜಡೆ ಹಿಡಿದು ಎಳೆದು ದೇವಸ್ಥಾನದಿಂದ ಹೊರಗೆ ತಬ್ಬಿದ್ದಾರೆ’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT