ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಮೇಲೆ ಹಲ್ಲೆ: ರೌಡಿಗೆ ಗುಂಡೇಟು

Last Updated 27 ಸೆಪ್ಟೆಂಬರ್ 2021, 19:22 IST
ಅಕ್ಷರ ಗಾತ್ರ

ಬೆಂಗಳೂರು: ಕೊಲೆ ಪ್ರಕರಣದ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ರೌಡಿ ಸ್ಟಾಲಿನ್‌ನನ್ನು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿದೆ.

‘ರೌಡಿ ಅರವಿಂದ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ಟಾಲಿನ್‌ನನ್ನು ಇತ್ತೀಚೆಗೆ ಅಶೋಕನಗರ ಪೊಲೀಸರು ಬಂಧಿಸಿದ್ದರು. ಪ್ರಕರಣದ ಮಹಜರು ಪ್ರಕ್ರಿಯೆಗಾಗಿ ಸೋಮವಾರ ಆತನನ್ನು ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಅದೇ ಸಂದರ್ಭದಲ್ಲೇ ಆತ, ಹೆಡ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಯನ್ನು ಹಿಡಿಯಲು ಇನ್‌ಸ್ಪೆಕ್ಟರ್ ಹೋಗಿದ್ದರು. ಅವರ ಮೇಲೆ ಆತ ಹಲ್ಲೆಗೆ ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್, ರೌಡಿ ಸ್ಟಾಲಿನ್ ಕಾಲಿಗೆ ಗುಂಡು ಹೊಡೆದು ಬಂಧಿಸಿ
ದ್ದಾರೆ. ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಡ್ ಕಾನ್‌ಸ್ಟೆಬಲ್ ಅವರಿಗೆ ಚಿಕಿತ್ಸೆ
ಕೊಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಕೊಲೆ: ‘ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ (ಕೆಎಸ್‌ಎಫ್‌ಎ) ಕ್ರೀಡಾಂಗಣ ರೆಫರಿಗಳ ಕೊಠಡಿಯಲ್ಲಿ ರೌಡಿ ಅರವಿಂದ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು ಈ ಪ್ರಕರಣದಲ್ಲಿ ಸ್ಟಾಲಿನ್ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಸ್ಟಾಲಿನ್ ತಮ್ಮ ಸುಭಾಷ್ ಹಾಗೂ ಹಲವರ ಮೇಲೆ ರೌಡಿ ಅರವಿಂದ್ ಹಲ್ಲೆ ಮಾಡಿದ್ದ. ತಾನೊಬ್ಬ ರೌಡಿ ಎಂದು ಹೇಳಿಕೊಂಡು ಜೀವ ಬೆದರಿಕೆ ಹಾಕುತ್ತಿದ್ದ. ಅದರಿಂದ ಬೇಸತ್ತ ಆರೋಪಿಗಳು, ಅರವಿಂದ್‌ನ ಕೊಲೆಗೆ ಸಂಚು ರೂಪಿಸಿದ್ದರು. ಸೆ. 12ರಂದು ಫುಟ್‌ಬಾಲ್‌ ಆಡಲು ಬಂದಿದ್ದ ಅರವಿಂದ್‌, ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಇಟ್ಟಿದ್ದ. ಅದನ್ನು ನೋಡಿದ್ದ ಆರೋಪಿಗಳು, ಸ್ಥಳಕ್ಕೆ ಬಂದು ಅರವಿಂದ್‌ನನ್ನು ಅಟ್ಟಾಡಿಸಿ ಕೊಂದಿದ್ದರು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT