ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಶಾಲೆಯಲ್ಲೂ ಅಟಲ್ ಟಿಂಕರಿಂಗ್ ಲ್ಯಾಬ್: ಡಿಸಿಎಂ ಸಿ.ಎನ್.‌ಅಶ್ವತ್ಥನಾರಾಯಣ

ಮಲ್ಲೇಶ್ವರ ಸರ್ಕಾರಿ ಶಾಲೆಯಲ್ಲಿ ‘ಷಿ– ಕೋಡ್‌’ ಕಾರ್ಯಕ್ರಮಕ್ಕೆ ಚಾಲನೆ
Last Updated 6 ಮಾರ್ಚ್ 2021, 21:09 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳಲ್ಲಿ ಆವಿಷ್ಕಾರ ಮತ್ತು ವೈಜ್ಞಾನಿಕ ಮನೋಭಾವ ಮೂಡಿಸಲುಪ್ರತಿ ಶಾಲೆಯಲ್ಲೂ ಅಟಲ್‌ ಟಿಂಕರಿಂಗ್‌ ಲ್ಯಾಬ್‌ (ಎಟಿಎಲ್‌) ಸ್ಥಾಪನೆ ಮಾಡಲಾಗುವುದು’ ಎಂದು ಉಪಮುಖ್ಯಮಂತ್ರಿ ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಮಲ್ಲೇಶ್ವರದ ಬಾಲಕರ ಸರ್ಕಾರಿ ಪ್ರೌಢಶಾಲೆಯ ʼಅಟಲ್ ಟಿಂಕರಿಂಗ್ ಲ್ಯಾಬ್’ನಲ್ಲಿ ಬಾಲಕಿಯರಿಗೆ ಕಂಪ್ಯೂಟರ್‌ ಕೋಡಿಂಗ್‌ ಕಲಿಸುವ ‘ಷಿ–ಕೋಡ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಶನಿವಾರ ಮಾತನಾಡಿದರು.

‘ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವಲ್ಲಿ ಎಟಿಎಲ್‌ ಮಹತ್ವದ ಪಾತ್ರ ವಹಿಸುತ್ತದೆ. ಕೆಲ ಶಾಲೆಗಳಲ್ಲಿ ಸ್ಥಳಾಭಾವ ಇದ್ದರೆ ವಿಶಾಲ ಜಾಗವಿರುವ ಶಾಲೆಗಳಲ್ಲಿ ಎಟಿಎಲ್‌ ಆರಂಭಿಸಿಕ್ಲಸ್ಟರ್‌ ಮಾದರಿಯಲ್ಲಿ ಕಾರ್ಯಾಚರಿಸುವಂತೆ ನೋಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

‘ಬೆಂಗಳೂರು ಜಗತ್ತಿನ ಅಗ್ರ ಹತ್ತು ನಗರಗಳಲ್ಲಿ ಸ್ಥಾನ ಪಡೆದಿದೆ. ಅದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು. ಆರಂಭಿಕ ಹಂತದಿಂದಲೇ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಬಾಲ್ಯದಲ್ಲಿ ಬಹು ವಿಷಯಗಳನ್ನು, ಬಹಭಾಷೆಗಳನ್ನು ಕಲಿಯುವ ಶಕ್ತಿ ಮಕ್ಕಳಿಗೆ ಹೆಚ್ಚು ಇರುತ್ತದೆ’ ಎಂದರು.

‘ಕಿರಿಯ ಮತ್ತು ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಮ್ಮ ರಾಜ್ಯದ ಶೈಕ್ಷಣಿಕ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಾಯಿಸಲಾಗುತ್ತದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಸಂಸ್ಥೆಗಳೂ ನೆರವಾಗಬೇಕು’ ಎಂದು ಕೋರಿದರು.

ಸಹಶಿಕ್ಷಣ:

‘ಮಲ್ಲೇಶ್ವರದ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹ–ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಈ ಪ್ರೌಢಶಾಲೆಯಲ್ಲಿನ್ನು ಬಾಲಕಿಯರ ಕಲಿಕೆಗೂ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿ ಬಾಲಕಿಯರ ದಾಖಲಾತಿ ಆರಂಭವಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ತಿಳಿಸಿದರು.

ಏನಿದು ‘ಷಿ–ಕೋಡ್‌’?

‘ಹೆಣ್ಣು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಿರುವ ಜ್ಞಾನವನ್ನು ‘ಷಿ–ಕೋಡ್‌’ ಕಾರ್ಯಕ್ರಮದ ಮೂಲಕ ಒದಗಿಸಲಾಗುತ್ತದೆ. ಅವರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದಕ್ಕೆ ಹಾಗೂ ಆವಿಷ್ಕಾರಗಳ ಬಗ್ಗೆ ಆಸಕ್ತಿ ಹೊಂದುವುದಕ್ಕೆ ನೆರವು ಒದಗಿಸಲಾಗುತ್ತದೆ. ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಅವರಲ್ಲಿ ಉತ್ಪನ್ನ ಆಧಾರಿತ ಉದ್ಯಮಶೀಲತೆ ಬೆಳೆಸುವುದು ಇದರ ಮುಖ್ಯ ಉದ್ದೇಶ’ ಎಂದು ಅಟಲ್‌ ಟಿಂಕರಿಂಗ್‌ ಲ್ಯಾಬ್‌ನ ಉಸ್ತುವಾರಿ ವಹಿಸಿಕೊಂಡಿರುವ ಶಿಕ್ಷಕಿ ಮೈತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಯ ಅಟಲ್‌ ಟಿಂಕರಿಂಗ್ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳು ಆಟ-ಪಾಠದ ಜೊತೆಯಲ್ಲಿ ವಿಜ್ಞಾನ ಕಲಿಯಲು, ಹೊಸ ಕೌಶಲಗಳನ್ನು ಕಲಿಯಲು ವಿವಿಧ ಸೌಕರ್ಯಗಳಿವೆ. ವಿದ್ಯಾರ್ಥಿಗಳು ಹೊಸ ಆಲೋಚನೆಗಳನ್ನು ಆವಿಷ್ಕಾರಗಳನ್ನು ಕಾರ್ಯರೂಪಕ್ಕೆ ಇಳಿಸಲು ಇದು ನೆರವಾಗುತ್ತದೆ. ಈ ಲ್ಯಾಬ್‌ನಲ್ಲಿ ಪಠ್ಯಕ್ರಮಕ್ಕೆ ಸಂಬಂಧಿಸಿದ ಪ್ರಯೋಗಗಳಲ್ಲದೇ ವಿದ್ಯಾರ್ಥಿಗಳಿಗೆ ರೊಬೊಟಿಕ್ಸ್‌, ಎಲೆಕ್ಟ್ರಾನಿಕ್ಸ್‌, ತ್ರೀ–ಡಿ ಪ್ರಿಂಟಿಂಗ್‌, ಯಂತ್ರೋಪಕರಣ ವಿನ್ಯಾಸ, ವೈಮಾಂತರಿಕ್ಷ ಕ್ಷೇತ್ರಗಳಿಗೆ ಸಂಬಂಧಿಸಿದ ತಿಳಿವಳಿಕೆಯನ್ನು ನೀಡುತ್ತೇವೆ. ನಮ್ಮ ಶಾಲೆಯ ವಿದ್ಯಾರ್ಥಿಗಳೂ ರಾಷ್ಟ್ರಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಗೆದ್ದಿದ್ದಾರೆ. ಟಿಂಕರಿಂಗ್‌ ಮ್ಯಾರಥಾನ್‌ನಲ್ಲೂ ನಮ್ಮ ಶಾಲೆ ಅಗ್ರ 100ರಲ್ಲಿ ಸ್ಥಾನ ಪಡೆದಿತ್ತು’ ಎಂದರು.

ಷಿ–ಕೋಡ್‌ ಕಾರ್ಯಕ್ರಮ ಅನುಷ್ಠಾನಕ್ಕೆ ಡೆಲ್‌ ಟೆಕ್ನಾಲಜೀಸ್‌ ನೆರವು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT