ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್; ಕೊಲಂಬಿಯಾ ಗ್ಯಾಂಗ್‌ನ ಮಹಿಳೆ ಬಂಧನ

Last Updated 17 ಜನವರಿ 2021, 16:53 IST
ಅಕ್ಷರ ಗಾತ್ರ

ಬೆಂಗಳೂರು: ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಟಿಎಂ ಘಟಕದ ಯಂತ್ರದಲ್ಲಿ ಸ್ಕಿಮ್ಮರ್ ಉಪಕರಣ ಅಳವಡಿಸಿ ಗ್ರಾಹಕರ ಖಾತೆಯಲ್ಲಿದ್ದ ಹಣ ಡ್ರಾ ಮಾಡಿಕೊಂಡಿದ್ದ ಆರೋಪದಡಿ ಲೈಡಿ ಸ್ಟೇಫನಿಯಾ ಮುನೋಜಾ ಮೊನಸಾಲ್ವೆ (23) ಎಂಬ ಮಹಿಳೆಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಕೊಲಂಬಿಯಾ ಪ್ರಜೆಯಾಗಿರುವ ಮೊನಸಾಲ್ವೆ, ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದಿದ್ದರು. ತಮ್ಮದೇ ದೇಶದ ಕೆಲ ಪ್ರಜೆಗಳ ಜೊತೆ ಸೇರಿ ಗ್ಯಾಂಗ್‌ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹೆಗಡೆನಗರದ 80 ಅಡಿ ರಸ್ತೆಯಲ್ಲಿರುವ ಎಸ್‌ಬಿಐ ಶಾಖೆಯ ಎಟಿಎಂ ಘಟಕದ ಯಂತ್ರದಲ್ಲಿ ಸ್ಕಿಮ್ಮರ್ ಅಳವಡಿಸಿದ್ದ ಆರೋಪಿ ಹಾಗೂ ಇತರರು, ಘಟಕಕ್ಕೆ ಬಂದು ಹೋಗಿದ್ದ ಗ್ರಾಹಕರ ಎಟಿಎಂ ಕಾರ್ಡ್‌ ಮಾಹಿತಿ ಸಂಗ್ರಹಿಸಿದ್ದರು. ನಂತರ ಅದೇ ಮಾಹಿತಿಯಿಂದ ನಕಲಿ ಕಾರ್ಡ್‌ಗಳನ್ನು ಸೃಷ್ಟಿಸಿ ಹಲವು ಗ್ರಾಹಕರ ಖಾತೆಯಲ್ಲಿದ್ದ ₹ 17.71 ಲಕ್ಷವನ್ನು ಡ್ರಾ ಮಾಡಿಕೊಂಡಿದ್ದರು.’

‘ಹಣ ಡ್ರಾ ಆದ ಬಗ್ಗೆ ಕೆಲ ಗ್ರಾಹಕರು ಬ್ಯಾಂಕ್‌ಗೆ ಮಾಹಿತಿ ನೀಡಿದ್ದರು. ಅದರನ್ವಯ ಬ್ಯಾಂಕ್ ವ್ಯವಸ್ಥಾಪಕ ಸುಶೀಲ್‌ಕುಮಾರ್ ಸಿಂಗ್ ಅವರು ಠಾಣೆಗೆ ದೂರು ನೀಡಿದ್ದರು. ಘಟಕ ಹಾಗೂ ಅದರ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ಅಧಿಕಾರಿ ವಿವರಿಸಿದರು.

31 ಮನೆಗಳಲ್ಲಿ ಕಳವು

‘ಮಹಿಳೆ ಹಾಗೂ ಇತರರು ಸೇರಿಕೊಂಡು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಠಾಣೆ ವ್ಯಾಪ್ತಿಯ 31 ಮನೆಗಳಲ್ಲಿ ಕಳವು ಮಾಡಿದ್ದು ಪತ್ತೆಯಾಗಿದೆ. ಅದರ ಜೊತೆಗೆ ಆರೋಪಿಗಳು, ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್ ಅಳವಡಿಸಿ ಕೃತ್ಯ ಎಸಗುತ್ತಿದ್ದರು. ಕೊತ್ತನೂರು ಪೊಲೀಸರು ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಈ ಹಿಂದೆಯೇ ಬಂಧಿಸಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ಎಸ್‌ಬಿಐ ಬ್ಯಾಂಕ್‌ ಎಟಿಎಂ ಘಟಕ ಮಾತ್ರವಲ್ಲದೇ ಬಾಣಸವಾಡಿ, ನೆಲಮಂಗಲ ಮತ್ತು ಹಲಸೂರು ಠಾಣೆ ವ್ಯಾಪ್ತಿಯ ಕೆಲ ಎಟಿಎಂ ಘಟಕಗಳಲ್ಲಿ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ. ಗ್ಯಾಂಗ್‌ನ ಮತ್ತಷ್ಟು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT