ಎಟಿಎಂಗೆ ಸ್ಕಿಮ್ಮಿಂಗ್ ಹಾಕಿ ಲಕ್ಷ ಲಕ್ಷ ದೋಚುತ್ತಿದ್ದರು!

ಬೆಂಗಳೂರು: ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಹಾಗೂ ಮೈಕ್ರೊ ಕ್ಯಾಮೆರಾ ಅಳವಡಿಸಿ ಗ್ರಾಹಕರ ಬ್ಯಾಂಕ್ ಖಾತೆ ವಿವರಗಳನ್ನು ಕದಿಯುತ್ತಿದ್ದ ಉಗಾಂಡದ ಈ ವಿದ್ಯಾರ್ಥಿಗಳು, ಬಳಿಕ ನಕಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡುತ್ತಿದ್ದರು. ಇದೀಗ ಸ್ಕಿಮ್ಮಿಂಗ್ ಸಾಧನ ಅಳವಡಿಸುತ್ತಿರುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ.
ಬಾಬಾಲಾಂಡ ಅಮುನಾನ್ ಅಲಿಯಾಸ್ ನೇಸ್ತಾ ಹಾಗೂ ಒಂಗಿಡೋ ಆ್ಯಂಬ್ರೋಸ್ ಬಂಧಿತರು. ಮರಿಯಂ ಎಂಬಾಕೆ ತಲೆಮರೆಸಿಕೊಂಡಿದ್ದಾಳೆ. ಆರೋಪಿಗಳಿಂದ ಎರಡು ಲ್ಯಾಪ್ಟಾಪ್ಗಳು, ಎಟಿಎಂ ಕಾರ್ಡ್ನ ಡೇಟಾವನ್ನು ನಕಲಿ ಕಾರ್ಡ್ಗೆ ವರ್ಗಾಯಿಸುವ ಎರಡು ಯಂತ್ರಗಳು, ನಾಲ್ಕು ಸ್ಕಿಮ್ಮರ್ ಪ್ಲೇಟ್ಗಳು, ಮೈಕ್ರೊ ಕ್ಯಾಮೆರಾ, 9 ಮೊಬೈಲ್ಗಳು, 20 ಎಟಿಎಂ ಕಾರ್ಡ್ಗಳು, 160 ನಕಲಿ ಕಾರ್ಡ್ಗಳು, ಸ್ಕೂಟರ್ ಹಾಗೂ ₹ 60 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಬಾಬಾಲಾಂಡ, ಹೆಣ್ಣೂರಿನ ಕಾಲೇಜಿನಲ್ಲಿ ಫಾರ್ಮಸಿ ಕೋರ್ಸ್ ಮಾಡುತ್ತಿದ್ದರೆ, ಆ್ಯಂಬ್ರೋಸ್ ವಿದ್ಯಾರಣ್ಯಪುರದ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ಅವರಿಬ್ಬರೂ ಗೆಳತಿ ಮರಿಯಂ ಜತೆ ಕೊತ್ತನೂರಿನಲ್ಲಿ ಮನೆ ಬಾಡಿಗೆ ಪಡೆದು ನೆಲೆಸಿದ್ದರು.
ಹೇಗೆ ಕಾರ್ಯಾಚರಣೆ: ‘ರಾತ್ರಿ ವೇಳೆ ಸ್ಕೂಟರ್ನಲ್ಲಿ ಸುತ್ತುತ್ತಿದ್ದ ಆರೋಪಿಗಳು, ಗ್ರಾಹಕರ ಸೋಗಿನಲ್ಲಿ ಎಟಿಎಂ ಘಟಕಗಳಿಗೆ ನುಗ್ಗುತ್ತಿದ್ದರು. ಬಳಿಕ ಯಂತ್ರಕ್ಕೆ ಸ್ಕಿಮ್ಮಿಂಗ್ ಪ್ಲೇಟ್ ಅಳವಡಿಸಿ, ನಂಬರ್ ಪ್ಯಾಡ್ ಕಾಣುವಂತೆ ಕ್ಯಾಮೆರಾವನ್ನೂ ಇಟ್ಟು ಬರುತ್ತಿದ್ದರು. ಆ ನಂತರ ಗ್ರಾಹಕರು ಯಂತ್ರದೊಳಗೆ ಕಾರ್ಡ್ ಹಾಕಿದಾಗ ಅದರ ಡೇಟಾ ಸ್ಕಿಮ್ಮಿಂಗ್ ಪ್ಲೇಟ್ನಲ್ಲಿ ದಾಖಲಾಗುತ್ತಿತ್ತು. ಅಲ್ಲದೆ, ಗ್ರಾಹಕರು ಪಿನ್ ನಂಬರ್ ಒತ್ತುವುದು ಕ್ಯಾಮೆರಾದಲ್ಲಿ ಸೆರೆಯಾಗಿರುತ್ತಿತ್ತು’ ಎಂದು ತನಿಖಾಧಿಕಾರಿಗಳು ವಿವರಿಸಿದರು.
‘ಮರುದಿನ ರಾತ್ರಿ ಬಂದು ಸ್ಕಿಮ್ಮಿಂಗ್ ಪ್ಲೇಟ್ ಹಾಗೂ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಿದ್ದ ಆರೋಪಿಗಳು, ಅವುಗಳಲ್ಲಿ ದಾಖಲಾಗಿರುತ್ತಿದ್ದ ಡೇಟಾವನ್ನು ಲ್ಯಾಪ್ಟಾಪ್ಗೆ ಹಾಕಿಕೊಳ್ಳುತ್ತಿದ್ದರು. ಆ ನಂತರ ‘ಎಂ.ಎಸ್.ಆರ್ 2000’ ಎಂಬ ಸಾಫ್ಟ್ವೇರ್ ಮೂಲಕ ಆ ಡೇಟಾವನ್ನು ನಕಲಿ ಕಾರ್ಡ್ಗಳಿಗೆ ತುಂಬುತ್ತಿದ್ದರು.’
'ಜತೆಗೆ ಕಾರ್ಡ್ಗಳ ಮೇಲೆ ನಮೂದು ಮಾಡಬೇಕಾದ 16 ಅಂಕಿಗಳು ಹಾಗೂ ಬ್ಯಾಂಕಿನ ಹೆಸರನ್ನು ಎಂಬೋಸರ್ ಯಂತ್ರದ ಮೂಲಕ ಪಂಚ್ ಮಾಡಿ, ನಕಲಿ ಕ್ರೆಡಿಟ್/ಡೆಬಿಟ್ ಕಾರ್ಡ್ಗಳನ್ನು ತಯಾರಿಸುತ್ತಿದ್ದರು. ಬಳಿಕ, ಪಿನ್ ನಂಬರ್ ಬಳಸಿ ಹಣ ಡ್ರಾ ಮಾಡಿಕೊಂಡು ಮೋಜಿನ ಜೀವನ ನಡೆಸುತ್ತಿದ್ದರು.’
‘ಆ.28ರ ನಸುಕಿನಲ್ಲಿ ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತ ಹೆಗಡೆನಗರ ವೃತ್ತಕ್ಕೆ ಹೋದಾಗ, ಎಟಿಎಂ ಘಟಕದೊಳಗಿದ್ದ ಇವರಿಬ್ಬರನ್ನು ನೋಡಿದ್ದರು. ಸಂಶಯ ಬಂದು ಹತ್ತಿರ ಹೋದಾಗ ಅವರು ಯಂತ್ರದೊಳಗೆ ಸ್ಕಿಮ್ಮಿಂಗ್ ಪ್ಲೇಟ್ ಅಳವಡಿಸುತ್ತಿರುವುದು ಖಚಿತವಾಯಿತು. ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು’ ಎಂದು ಮಾಹಿತಿ ನೀಡಿದರು.
**
ಬೈರತಿ ನಿವಾಸಿಯ ಹಣ ಮಹಾರಾಷ್ಟ್ರದಲ್ಲಿ ಲೂಟಿ!
ತಮ್ಮ ಖಾತೆಯಿಂದ ಯಾರೋ ₹ 21 ಸಾವಿರ ಡ್ರಾ ಮಾಡಿಕೊಂಡಿದ್ದಾರೆ ಎಂದು ಬೈರತಿ ನಿವಾಸಿ ಎಸ್.ನವೀನ್ 2017ರ ಜೂನ್ನಲ್ಲೇ ಕೊತ್ತನೂರು ಠಾಣೆಗೆ ದೂರು ಕೊಟ್ಟಿದ್ದರು. ಆ ಕೃತ್ಯ ಎಸಗಿದ್ದೂ ಇದೇ ಗ್ಯಾಂಗ್ ಎಂಬುದು ತನಿಖೆಯಿಂದ ಗೊತ್ತಾಗಿದೆ.
‘ಸ್ಕಿಮ್ಮಿಂಗ್ ಮೂಲಕ ನವೀನ್ ಅವರ ಕ್ರೆಡಿಟ್ ಕಾರ್ಡ್ ವಿವರ ಕದ್ದಿದ್ದ ಆರೋಪಿಗಳು, ಮಹಾರಾಷ್ಟ್ರದ ಹರಿನಾಥದಲ್ಲಿ ಕೆಲವೇ ನಿಮಿಷಗಳಲ್ಲಿ ಮೂರು ಬಾರಿ ಹಣ ಡ್ರಾ ಮಾಡಿದ್ದರು. ಈ ಬಗ್ಗೆ ಮೊಬೈಲ್ಗೆ ಸಂದೇಶ ಬರುತ್ತಿದ್ದಂತೆಯೇ ನವೀನ್ ತಮ್ಮ ಖಾತೆಯನ್ನು ಬ್ಲಾಕ್ ಮಾಡಿಸಿದ್ದರು’ ಎಂದು ಪೊಲೀಸರು ಹೇಳಿದರು.
**
‘₹ 25 ಲಕ್ಷ ಡ್ರಾ ಮಾಡಿದ್ದೇವೆ’
‘ಆರೋಪಿಗಳು ಬೆಂಗಳೂರಿನ ಹೆಗಡೆನಗರ, ಎಂ.ಎಸ್.ಪಾಳ್ಯ, ಕೊತ್ತನೂರು ಮುಖ್ಯರಸ್ತೆ, ಗೆದ್ದಲಹಳ್ಳಿಯ ಎಟಿಎಂ ಘಟಕಗಳಲ್ಲಿ ಇದೇ ರೀತಿ ಕೃತ್ಯ ಎಸಗಿದ್ದಾರೆ. ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆನ್ಲೈನ್ ವಹಿವಾಟು ತಾಣಗಳಿಂದ ಮ್ಯಾಗ್ನೆಟಿಕ್ ಸ್ವೈಪ್ ಕಾರ್ಡ್ಗಳನ್ನು ತರಿಸಿಕೊಳ್ಳುತ್ತಿದ್ದುದಾಗಿ ಹಾಗೂ ಈವರೆಗೆ ₹ 25 ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.