ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಬಾರ್‌ನಲ್ಲಿ ಗಲಾಟೆ: ಆಟೊ ಚಾಲಕನ ಕೊಲೆ

ಇಬ್ಬರು ಆರೋಪಿಗಳ ಬಂಧನ
Last Updated 15 ಮಾರ್ಚ್ 2022, 21:57 IST
ಅಕ್ಷರ ಗಾತ್ರ

ಬೆಂಗಳೂರು: ಜೀವನ್‌ಭಿಮಾನಗರ ಠಾಣೆ ವ್ಯಾಪ್ತಿಯಲ್ಲಿ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಆಟೊ ಚಾಲಕ ಮಂಜುನಾಥ್ (32) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ರಾಮನಗರ ತಾಲ್ಲೂಕಿನ ಕೈಲಾಂಚ ಗ್ರಾಮದ ಎಸ್. ಮಧುಸೂದನ್ (29) ಹಾಗೂ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದ ಯತೀಶ್ ಗೌಡ (25) ಬಂಧಿತರು. ಇಬ್ಬರು ಆರೋಪಿಗಳು ಕೆಲಸ ಹುಡುಕಿಕೊಂಡು ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಮಂಜುನಾಥ್ ಅವರನ್ನು ಸೋಮವಾರ ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

'ಕೊಲೆಯಾದ ಮಂಜುನಾಥ್, ದೂಪನಹಳ್ಳಿ ನಿವಾಸಿ. ಜೆ.ಡಿ. ಬಾರ್ ಆ್ಯಂಡ್ ರೆಸ್ಟೋರೆಂಟ್‌ನಿಂದ ಮರಳುವಾಗ ಅವರ ಕೊಲೆ ನಡೆದಿತ್ತು. ಕ್ಷುಲ್ಲಕ ಕಾರಣಕ್ಕಾಗಿ ಬಾರ್‌ನಲ್ಲಿ ನಡೆದ ಗಲಾಟೆಯೇ ಕೊಲೆಗೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದೂ ಹೇಳಿದರು.

ಅಟ್ಟಾಡಿಸಿ ಕೊಂದರು: ‘ಮಂಜುನಾಥ್ ಅವರು ಜೆ.ಡಿ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಸೋಮವಾರ ರಾತ್ರಿ ಹೋಗಿದ್ದರು. ಬಾರ್‌ನಲ್ಲಿದ್ದ ಆರೋಪಿಗಳು, ಮಂಜುನಾಥ್ ಜೊತೆ ಜಗಳ ತೆಗೆದಿದ್ದರು. ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಬಾರ್ ಸಿಬ್ಬಂದಿ ಜಗಳ ಬಿಡಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಾರ್‌ನಿಂದ ಹೊರಬಂದಿದ್ದ ಮಂಜುನಾಥ್, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ತಮ್ಮ ಆಟೊದಲ್ಲಿ ಕುಳಿತಿದ್ದರು. ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಪುನಃ ಜಗಳ ತೆಗೆದು ಹಲ್ಲೆ ನಡೆಸಲು ಮುಂದಾಗಿದ್ದರು. ಆಟೊದಿಂದ ಇಳಿದಿದ್ದ ಮಂಜುನಾಥ್, ತಪ್ಪಿಸಿಕೊಂಡು ಓಡಲಾರಂಭಿಸಿದ್ದರು. ಅವರನ್ನು ಆರೋಪಿಗಳು ಬೆನ್ನಟ್ಟಿದ್ದರು.’

‘ಕೋಡಿಹಳ್ಳಿ ಜಂಕ್ಷನ್ ಬಳಿ ಮಂಜುನಾಥ್ ಎಡವಿ ಬಿದ್ದಿದ್ದರು. ಅವರನ್ನು ಸುತ್ತುವರೆದಿದ್ದ ಆರೋಪಿಗಳು ಹಲ್ಲೆ ಮಾಡಿದ್ದರು. ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿದ್ದರು. ಕಬ್ಬಿಣದ ಪೈಪ್‌ನಿಂದಲೂ ತಲೆಗೆ ಹೊಡೆದಿದ್ದರು. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಮೃತಪಟ್ಟಿದ್ದರು. ಕೊಲೆ ಸಂಬಂಧ ತಂದೆ ತಮ್ಮಣ್ಣ ದೂರು ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT