ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಆಟೊ ಪ್ರಯಾಣ ಶೀಘ್ರ ದುಬಾರಿ: 8 ವರ್ಷಗಳ ಬಳಿಕ ದರ ಏರಿಕೆ ಪ್ರಸ್ತಾವ

Last Updated 27 ಅಕ್ಟೋಬರ್ 2021, 6:30 IST
ಅಕ್ಷರ ಗಾತ್ರ

ಬೆಂಗಳೂರು: ಚಾಲಕರ ಆಗ್ರಹದ ಮೇರೆಗೆ ಆಟೊ ರಿಕ್ಷಾ ಪ್ರಯಾಣ ದರವನ್ನು ಶೇ 20ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಇಂಧನ ದರ ಏರಿಕೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಿರುವ ಕಾರಣ ಪ್ರಯಾಣ ದರ ಹೆಚ್ಚಿಸಬೇಕು ಎಂದು ಆಟೊ ಚಾಲಕರು ಸರ್ಕಾರವನ್ನು ಆಗ್ರಹಿಸಿದ್ದರು.

ಆಟೊ ರಿಕ್ಷಾ ಚಾಲಕರ ಒಕ್ಕೂಟಗಳ ಜತೆ ಮಾತುಕತೆ ನಡೆಸಿದ ಬಳಿಕ ಇಲಾಖೆಯು ದರ ಹೆಚ್ಚಳ ಪ್ರಸ್ತಾವವನ್ನು ಪರಿಷ್ಕರಿಸಿದೆ.

ಈ ಪ್ರಸ್ತಾವಕ್ಕೆ ಅನುಮೋದನೆ ದೊರೆತಲ್ಲಿ, ಆಟೊ ರಿಕ್ಷಾ ಪ್ರಯಾಣದ ಕನಿಷ್ಠ ದರ ₹25ರಿಂದ ₹30ಕ್ಕೆ ಹೆಚ್ಚಳವಾಗಲಿದೆ. ಕನಿಷ್ಠ ದರದ ನಂತರ ಪ್ರತಿ ಕಿಲೋಮೀಟರ್‌ಗೆ ಈಗಿರುವ ₹13ರ ಬದಲಾಗಿ ₹16 ಆಗಲಿದೆ.

ಈ ಹಿಂದೆ ಬೆಂಗಳೂರಿನಲ್ಲಿ 2013ರ ಡಿಸೆಂಬರ್‌ನಲ್ಲಿ ಆಟೊ ರಿಕ್ಷಾ ದರ ಹೆಚ್ಚಳ ಮಾಡಲಾಗಿದ್ದು. ಆಗ ಕನಿಷ್ಠ ದರವನ್ನು ₹20ರಿಂದ ₹25ಕ್ಕೆ ಹೆಚ್ಚಿಸಲಾಗಿತ್ತು. ಪ್ರತಿ ಕಿಲೋಮೀಟರ್ ಪ್ರಯಾಣ ದರವನ್ನು ₹11ರಿಂದ ₹13ಕ್ಕೆ ಹೆಚ್ಚಿಸಲಾಗಿತ್ತು.

ಹೊಸ ಪ್ರಸ್ತಾವನೆಯಲ್ಲಿ ಇಲಾಖೆಯು ಕನಿಷ್ಠ ದರದಲ್ಲಿ ಪ್ರಯಾಣಿಸಬಹುದಾದ ದೂರವನ್ನು 1.8 ಕಿಲೋಮೀಟರ್‌ಗೆ ಬದಲಾಗಿ 1.9 ಕಿಲೋಮೀಟರ್ ನಿಗದಿಪಡಿಸಿದೆ

ಇಂಧನ ದರ ಏರಿಕೆಯ ಕಾರಣದಿಂದ ಪ್ರಯಾಣ ದರ ಹೆಚ್ಚಿಸುವಂತೆ ಮೂರು ವರ್ಷಗಳಿಂದ ಆಟೊ ರಿಕ್ಷಾ ಚಾಲಕರು ಆಗ್ರಹಿಸುತ್ತಿದ್ದಾರೆ. ಈ ಕುರಿತು ಸರ್ಕಾರ ಮತ್ತು ಆಟೊ ಚಾಲಕರ ಒಕ್ಕೂಟಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಒಮ್ಮತಕ್ಕೆ ಬಂದಿರಲಿಲ್ಲ.

‘ಇತ್ತೀಚೆಗೆ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ಬೆಲೆ ಹೆಚ್ಚಳ ಪ್ರಸ್ತಾವದ ಕಡತವನ್ನು ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇತ್ತೀಚೆಗಷ್ಟೇ ಇದನ್ನು ಸಾರಿಗೆ ಸಚಿವರಿಗೆ ಕಳುಹಿಸಿಕೊಡಲಾಗಿತ್ತು. ಆಟೊ ರಿಕ್ಷಾ ಚಾಲಕರ ಅನೇಕ ಒಕ್ಕೂಟಗಳು ಪ್ರಯಾಣ ದರ ಹೆಚ್ಚಳಕ್ಕೆ ಆಗ್ರಹಿಸಿದ್ದವು. ಸಾಂಕ್ರಾಮಿಕದ ಈ ಸಂದರ್ಭದಲ್ಲಿ ದರ ಹೆಚ್ಚಿಸುವುದರಿಂದ ಪ್ರಯಾಣಿಕರು ಆಟೊ ರಿಕ್ಷಾ ಪ್ರಯಾಣದಿಂದ ದೂರ ಉಳಿಯುವ ಸಾಧ್ಯತೆಯೂ ಇದೆ ಎಂಬ ಕಳವಳವೂ ಕೆಲವು ಒಕ್ಕೂಟಗಳ ಸದಸ್ಯರಲ್ಲಿ ಇವೆ’ ಎಂದು ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಯಾಣ ದರ ಹೆಚ್ಚಳವನ್ನು ಆಟೊ ಚಾಲಕರ ಹೆಚ್ಚಿನ ಎಲ್ಲ ಒಕ್ಕೂಟಗಳೂ ಸ್ವಾಗತಿಸಿವೆ. ಕೆಲವೊಂದು ಒಕ್ಕೂಟಗಳು ಮಾತ್ರ ಸ್ವಲ್ಪ ನಿಧಾನವಾಗಿ ದರ ಹೆಚ್ಚಳ ಮಾಡಿದರೆ ಸಾಕು ಎಂದಿವೆ ಎಂದು ಆಟೊ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಪತ್ ಸಿ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT