ಗುರುವಾರ , ಸೆಪ್ಟೆಂಬರ್ 23, 2021
28 °C

ವೃದ್ಧಾಪ್ಯದ ಆರೋಗ್ಯ ಕಾಳಜಿಯಡಿ ಡಿಮೆನ್ಷಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಹಿರಿಯ ನಾಗರಿಕರಲ್ಲಿ ಕಂಡುಬರುವ ಮರೆಗುಳಿತನ (ಡಿಮೆನ್ಷಿಯಾ) ಸಮಸ್ಯೆಯನ್ನು ಆಯುಷ್ಮಾನ್‌ ಭಾರತ ಯೋಜನೆಯ ವೃದ್ಧಾಪ್ಯದ ಆರೋಗ್ಯ ಕಾಳಜಿ ಕಾರ್ಯಕ್ರಮದ ಅಡಿ ತರಲಾಗುವುದು. ಈ ಸಮಸ್ಯೆಗೆ ಉಚಿತ ಔಷಧ ವಿತರಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಹೇಳಿದರು. 

ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಶುಕ್ರವಾರ ಅಲ್ಝೈಮರ್ಸ್‌ ಆ್ಯಂಡ್‌ ರಿಲೇಟೆಡ್‌ ಡಿಸಾರ್ಡರ್ಸ್‌ ಸೊಸೈಟಿ ಆಫ್‌ ಇಂಡಿಯಾದ (ಎಆರ್‌ಡಿಎಸ್‌ಐ) ಆಶ್ರಯದಲ್ಲಿ ನಡೆದ ಡಿಮೆನ್ಷಿಯಾ ಕುರಿತ ಅಂತರ
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ವೃದ್ಧಾಪ್ಯದ ಆರೋಗ್ಯ ಕಾಳಜಿ ಕಾರ್ಯಕ್ರಮದಲ್ಲಿ ರೋಗಸಾಧ್ಯತೆಯನ್ನು ಗುರುತಿಸಿ ಅದಕ್ಕೆ ಮೊದಲೇ ಚಿಕಿತ್ಸೆ ಕೊಡಲಾಗುವುದು. ಈ ವ್ಯವಸ್ಥೆಯಲ್ಲಿ ಡಿಮೆನ್ಷಿಯಾ ಸಮಸ್ಯೆಯನ್ನು ಮೊದಲೇ ಗುರುತಿಸಿ ರೋಗ ಬರದಂತೆ ತಡೆಯಲು ಔಷಧ ನೀಡಲಾಗುವುದು. ರೋಗ ಸಾಧ್ಯತೆ ಮುಂದೂಡಿಕೆ ಬಗ್ಗೆ ಔಷಧ ಸಂಶೋಧನೆಗಳೂ ನಡೆಯುತ್ತಿವೆ. ಮುಂದೆ ನಿಮ್ಹಾನ್ಸ್‌ನ ತಜ್ಞರು, ಅಲ್ಝೈಮರ್‌ ಮತ್ತು ಸಂಬಂಧಿಸಿದ ಕಾಯಿಲೆಗಳ ಪರಿಣತರು ಒಟ್ಟಾಗಿ ನೀಡಿದ ಸಮಗ್ರ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಡಿಮೆನ್ಷಿಯಾ ನಿರ್ವಹಣೆ ಸಂಬಂಧಿಸಿದ ನೀತಿ ರೂಪಿಸಲಿದೆ’ ಎಂದರು. 

‘ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಂತಹಂತವಾಗಿ ವೆಲ್‌ನೆಸ್‌ ಸೆಂಟರ್‌ಗಳೆಂದು ಪರಿವರ್ತಿಸಲಾಗುತ್ತದೆ. ಅಲ್ಲಿಯೂ ವೃದ್ಧಾಪ್ಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ಹೇಳಿದರು. 

‘ಡಿಮೆನ್ಷಿಯಾ ಸಮಸ್ಯೆ ಎದುರಿಸುತ್ತಿರುವವರ ಜೀವಿತಾವಧಿ ಹೆಚ್ಚಿಸುವ, ಗುಣಮಟ್ಟದ ಜೀವನ ನಡೆಸುವ ವ್ಯವಸ್ಥೆ ಆಗಬೇಕು. ಈ ಬಗೆಗೂ ಅಧ್ಯಯನ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ದೇಶದಲ್ಲಿ ಸದ್ಯ 44 ಲಕ್ಷ ಜನ ಅಲ್ಝೈಮರ್‌– ಡಿಮೆನ್ಷಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2050ರ ವೇಳೆಗೆ ಈ ಪ್ರಮಾಣ ಮೂರು ಪಟ್ಟು ಹೆಚ್ಚಲಿದೆ. ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳು ಒಂದಕ್ಕೊಂದು ಪೂರಕವಾಗಿ ಇರಬೇಕು’ ಎಂದು ಹೇಳಿದರು.

ವಿಜ್ಞಾನಿ ಪ್ರೊ. ಕೆ.ಕಸ್ತೂರಿರಂಗನ್‌ ಮಾತನಾಡಿ, ‘ಡಿಮೆನ್ಷಿಯಾಕ್ಕೆ ಚಿಕಿತ್ಸಾ ಕೆಂದ್ರಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರಬೇಕು. ಸುಧಾರಿತ ಚಿಕಿತ್ಸಾ ಕೇಂದ್ರಗಳು ಕೈಗೆಟಕುವ ರೀತಿ ಲಭ್ಯ ಇರಬೇಕು’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು