ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸರ್ಕಾರ–ಎಲ್‌ಜಿ ಸಂಘರ್ಷ ತಾರಕಕ್ಕೆ

ಕಚೇರಿಯಿಂದ ಕದಲದ ಕೇಜ್ರಿವಾಲ್‌, ಸಚಿವರು * ಬಿಜೆಪಿ ಪ್ರತಿಭಟನೆ
Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ನಾಲ್ಕು ತಿಂಗಳಿಂದ ಐಎಎಸ್‌ ಅಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಡುವಣ ಸಂಘರ್ಷ ತಾರಕಕ್ಕೇರಿದೆ.

ಮೂವರು ಸಂಪುಟ ಸಹೋದ್ಯೋಗಿಗಳೊಂದಿಗೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೋಮವಾರ ಸಂಜೆ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಲ್ಲಿ ಆರಂಭಿಸಿದ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಜತೆ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಕೂಡ ಬುಧವಾರದಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

‘ಪ್ರಧಾನಿ ಕಚೇರಿಯ ಹಸಿರು ನಿಶಾನೆ ಇಲ್ಲದೆ ಐಎಎಸ್‌ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವುದು ಸಾಧ್ಯವೇ’ ಎಂದು ಧರಣಿ ಸ್ಥಳದಿಂದಲೇ ಕೇಜ್ರಿವಾಲ್‌ ಸರಣಿ ಟ್ವೀಟ್‌ ಮಾಡಿದ್ದಾರೆ.

ಯಶವಂತ್ ಸಿನ್ಹಾ ನೇತೃತ್ವ: ಎಎಪಿಯ ಸಾವಿರಾರು ಕಾರ್ಯಕರ್ತರು ಬುಧವಾರ ಮುಖ್ಯಮಂತ್ರಿ ಅಧಿಕೃತ ನಿವಾಸದಿಂದ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿವರೆಗೆ ಬೃಹತ್‌ ಮೆರವಣಿಗೆ ನಡೆಸಿದ್ದಾರೆ.

ಮೆರವಣಿಗೆಯ ನೇತೃತ್ವ ವಹಿಸಿದ್ದ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಎಎಪಿ ಹೋರಾಟಕ್ಕೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ.

ಸಮಾಜವಾದಿ ಪಕ್ಷ, ಜೆಡಿಎಸ್‌, ಆರ್‌ಜೆಡಿ, ಸಿಪಿಎಂ, ಸಿಪಿಐ ಮತ್ತು ಆರ್‌ಎಲ್‌ಡಿ ಕೂಡ ತಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಲು ಮುಂದೆ ಬಂದಿವೆ ಎಂದು ಎಎಪಿ ನಾಯಕರು ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ಬಿಜೆಪಿ ನಾಯಕರು ಮತ್ತು ಎಎಪಿಯ ಬಂಡಾಯ ಶಾಸಕ ಕಪಿಲ್ ಮಿಶ್ರಾ, ಮುಖ್ಯಮಂತ್ರಿ ಕೇಜ್ರಿವಾಲ್‌ ಕಚೇರಿ ಎದುರು ಧರಣಿ ನಡೆಸಿದ್ದಾರೆ. ಕೆಲವು ದಿನಗಳಿಂದ ದೆಹಲಿ ಸರ್ಕಾರ ನಿಷ್ಕ್ರಿಯಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಉಲ್ಬಣಿಸಿರುವ ಕುಡಿಯುವ ನೀರು ಮತ್ತು ವಿದ್ಯುತ್‌ ಕಡಿತ ಸಮಸ್ಯೆ ಬಗೆಹರಿಸಲು ಎಎಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿಯ ಮೂವರು ಶಾಸಕರು ಕೂಡ ಧರಣಿ ಆರಂಭಿಸಿದ್ದಾರೆ.

ಸ್ಪೀಕರ್‌ ಕಿಡಿ: ಲೆಫ್ಟಿನೆಂಟ್‌ ಗವರ್ನರ್ ವರ್ತನೆ ವಿರುದ್ಧ ದೆಹಲಿ ವಿಧಾನಸಭೆಯ ಸ್ಪೀಕರ್‌ ರಾಮ್‌ ನಿವಾಸ್‌ ಗೋಯಲ್‌ ಕಿಡಿ ಕಾರಿದ್ದಾರೆ. ಐಎಎಸ್‌ ಅಧಿಕಾರಿಗಳ ಪ್ರತಿಭಟನೆಯನ್ನು ‘ವ್ಯವಸ್ಥಿತ ಸಂಚು’ ಎಂದು ಜರೆದಿದ್ದಾರೆ.

ಐಎಎಸ್‌ ಅಧಿಕಾರಿಗಳು ಪ್ರತಿಭಟನೆ ಕೈಬಿಡುವುದಾಗಿ ಲಿಖಿತ ಭರವಸೆ ನೀಡದ ಹೊರತು ಕೇಜ್ರಿವಾಲ್‌ ಮತ್ತು ಇತರ ಸಚಿವರು ಧರಣಿ ನಿಲ್ಲಿಸುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಹೇಳಿದ್ದಾರೆ.

ದೆಹಲಿಯಲ್ಲಿ ತುರ್ತು ಪರಿಸ್ಥಿತಿ!

ದೆಹಲಿಯಲ್ಲಿ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ಎಎಪಿ ಹೇಳಿದೆ.

ಪರಿಸ್ಥಿತಿ ತಿಳಿಗೊಳಿಸಲು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿದೆ.

ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಅವರು ಪ್ರಧಾನಿ ಮೋದಿ ಅವರ ಆಣತಿಯಂತೆ ಕೆಲಸ ಮಾಡುತ್ತಿದ್ದು, ಇಬ್ಬರೂ ಶಾಮೀಲಾಗಿ ದೆಹಲಿ ಸರ್ಕಾರವನ್ನು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಎಎಪಿ ಆರೋಪಿಸಿದೆ.

ಅಧಿಕಾರಿಗಳು ನಾಲ್ಕು ತಿಂಗಳಿಂದ ಪ್ರತಿಭಟನೆಯಲ್ಲಿ ತೊಡಗಿರುವುದರಿಂದ ಸಭೆಗಳಿಗೆ ಹಾಜರಾಗುತ್ತಿಲ್ಲ. ಹಾಗಾಗಿ ಸರ್ಕಾರದ ಕೆಲಸಗಳು ಸ್ಥಗಿತಗೊಂಡಿವೆ ಎಂದು ಹೇಳಿದೆ.

* ಎಎಪಿ ಮೆರವಣಿಗೆ ನೇತೃತ್ವ ವಹಿಸಿದ ಯಶವಂತ್‌ ಸಿನ್ಹಾ

* ಎಎಪಿಯಿಂದ ಗುರುವಾರ ಮೋಂಬತ್ತಿ ಮೆರವಣಿಗೆ

* ಐಎಎಸ್‌ ಅಧಿಕಾರಿಗಳ ಪ್ರತಿಭಟನೆ ಕೈಬಿಡುವಂತೆ ಸೂಚಿಸಲು ಲೆಫ್ಟಿನೆಂಟ್ ಗವರ್ನರ್‌ಗೆ ಸ್ಪೀಕರ್‌ ಪತ್ರ

* ದೆಹಲಿ ಸರ್ಕಾರ ಮಾಡಿರುವ ಒಳ್ಳೆಯ ಕೆಲಸಗಳನ್ನು ಸಹಿಸದ ಮೋದಿ ಸರ್ಕಾರ ಐಎಎಸ್‌ ಅಧಿಕಾರಿಗಳನ್ನು ನಮ್ಮ ವಿರುದ್ಧ ದಾಳಗಳಂತೆ ಬಳಸುತ್ತಿದೆ

–ಅರವಿಂದ್‌ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT