ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಭಾಗಿತ್ವಕ್ಕೆ ಒತ್ತು ಕೊಡಿ: ಅಜೀಂ ಪ್ರೇಮ್‌ಜಿ

ಐಐಎಸ್‌ಸಿ ಘಟಿಕೋತ್ಸವದಲ್ಲಿ ವಿಪ್ರೊ ಸಂಸ್ಥಾಪಕ ಅಧ್ಯಕ್ಷರ ಸಲಹೆ
Last Updated 12 ಸೆಪ್ಟೆಂಬರ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳು ಸಹಭಾಗಿತ್ವ ಸಾಧಿಸಿ ಯೋಜನೆಗಳನ್ನು ರೂಪಿಸಿದರೆ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಸಾಧ್ಯವಿದೆ ಎಂದು ವಿಪ್ರೊ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಗುರುವಾರ ಘಟಿಕೋತ್ಸವ ಭಾಷಣ ಮಾಡಿದ ಅವರು,ಶಿಕ್ಷಣ, ಸಂಶೋಧನಾ ಸಂಸ್ಥೆಗಳು, ಉದ್ಯಮ, ನಾಗರಿಕ ಸಮಾಜ ಮತ್ತು ಸರ್ಕಾರದ ಮಟ್ಟದಲ್ಲಿ ಹೆಚ್ಚು ಹೆಚ್ಚು ಸಹಭಾಗಿತ್ವದ ಯೋಜನೆಗಳು ಬಂದರೆ ಬಹಳ ಅನುಕೂಲ.ಐಐಎಸ್‌ಸಿಗಳಂತಹ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಕೊಡುಗೆಯನ್ನು ಹಣದಿಂದ ಅಳೆ
ಯಲಾಗದು. ಇಂತಹ ಸಂಸ್ಥೆ ಇನ್ನಷ್ಟು ಸ್ಥಾಪನೆಗೊಳ್ಳಬೇಕಾಗಿದೆ ಎಂದರು.

ಮಾನವನ ದುಃಖದ ಭಾರವನ್ನುತಗ್ಗಿಸಲು ಹಾಗೂ ಪ್ರಕೃತಿಯೊಂದಿಗೆ ಸೌಹಾರ್ದಯುತವಾಗಿ ಬಾಳ್ವೆ ನಡೆಸಲು ನಮಗೆ ಸಾಧ್ಯವಾಗಿಲ್ಲ ಎಂದಾದರೆ ಯಾವ ಅಭಿವೃದ್ಧಿಗೂ ಅರ್ಥ ಇರುವುದಿಲ್ಲ. ಹವಾಮಾನ ಬದಲಾವಣೆಯಿಂದ ಮಾನವ ಜನಾಂಗಕ್ಕೆ ತೊಂದರೆಯಾಗುತ್ತಿರುವ ಅಂಶ ಅಭಿವೃದ್ಧಿ ವಿಷಯದಲ್ಲಿ ಹೊಂದಾಣಿಕೆ ಇಲ್ಲದಿರುವುದಕ್ಕೆ ಸಾಕ್ಷಿಯಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

1979ರಲ್ಲಿ ಪ್ರಥಮ ಬಾರಿಗೆ ವಿಪ್ರೊ ತನ್ನ ವೈಜ್ಞಾನಿಕ ಕೇಂದ್ರವನ್ನು ಸ್ಥಾಪಿಸಿದ್ದು ಐಐಎಸ್‌ಸಿಯಲ್ಲಿ. ಆ ಮೂಲಕ ವಿಪ್ರೊದ ಬೆಳವಣಿಗೆಯಲ್ಲಿ ಈ ಸಂಸ್ಥೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.

ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ವೈಜ್ಞಾನಿಕ ಕ್ಷೇತ್ರದಲ್ಲಿ ಐಐಎಸ್‌ಸಿ ಮಹತ್ವದ ಕೊಡುಗೆ ನೀಡುತ್ತಿದೆ. 110 ವರ್ಷಗಳ ಇತಿಹಾಸವಿರುವ ಸಂಸ್ಥೆಯ ಘನತೆಯನ್ನು ಇದೇ ರೀತಿ ಮುಂದುವರಿಸುವ ಸವಾಲು ಇದೆ ಎಂದರು.

ಒಟ್ಟು 1079 ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣಪತ್ರ ಪಡೆಯಲು ಅರ್ಹತೆ ಗಳಿಸಿದ್ದು, ಘಟಿಕೋತ್ಸವದಲ್ಲಿ 440 ಮಂದಿಗೆ ಪ್ರಮಾಣಪತ್ರ ನೀಡಲಾಯಿತು. 63 ಮಂದಿ ಚಿನ್ನದ ಪದಕ ವಿಜೇತರ ಪೈಕಿ 26 ಮಂದಿಗೆ ಪದಕ ನೀಡಲಾಯಿತು. ಐಐಎಸ್‌ಸಿ ನಿರ್ದೇಶಕ ಡಾ.ಅನುರಾಗ್‌ ಕುಮಾರ್‌ ಸಂಸ್ಥೆಯ ಪ್ರಗತಿಯ ನೋಟ ನೀಡಿದರು.

"ಐಐಎಸ್‌ಸಿ ಅತ್ಯುತ್ತಮ ಶಿಕ್ಷಣ ಸಂಸ್ಥೆ, ಇಲ್ಲಿ ವ್ಯಾಸಂಗ ಮಾಡಲು ಅವಕಾಶ ಸಿಕ್ಕಿದ್ದು ಹೊಸ ಅನುಭವ, ಅತ್ಯುತ್ತಮ ಕಲಿಕಾ ವಾತಾವರಣ ಇದೆ"
-ದೇವಾಂಗ್‌ ,ಕೋಲ್ಕತ್ತದ ಚಿನ್ನದ ಪದಕ ವಿಜೇತ ತಂತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT