ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುವೆಂಪು ವರ್ತಮಾನದ ಬೆಳಕು’: ಸಾಹಿತಿ ಬರಗೂರು ರಾಮಚಂದ್ರಪ್ಪ ಬಣ್ಣನೆ

Last Updated 1 ಜನವರಿ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ಕುವೆಂಪು ಅವರು ಮಹಾನ್ ವಿಚಾರವಾದಿ ಹಾಗೂ ದಾರ್ಶನಿಕರಾಗಿದ್ದರಿಂದ ಅವರು ಪ್ರಸ್ತುತರಾಗಿ ನಿಲ್ಲುತ್ತಾರೆ. ಅವರು ವರ್ತಮಾನದ ಬೆಳಕಾಗಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಬಿ.ಎಂ.ಶ್ರೀ. ಪ್ರತಿಷ್ಠಾನ ಹಾಗೂ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಕುವೆಂಪು-ವರ್ತಮಾನದ ಬೆಳಕಿನಲ್ಲಿ’ ವಿಚಾರಸಂಕಿರಣದಲ್ಲಿ ಭಾಗವಹಿಸಿ, ಮಾತನಾಡಿದರು. ‘ಸಾಹಿತ್ಯವನ್ನು ಮೀರಿದ ವ್ಯಕ್ತಿತ್ವ ಕುವೆಂಪು ಅವರದ್ದಾಗಿದೆ. ಅವರು ಒಂದು ಕ್ಷೇತ್ರಕ್ಕೆ ಸೀಮಿತವಾಗದೆ, ಭಾಷೆ, ಸಾಹಿತ್ಯ, ವಿಮರ್ಶೆ, ಮೀಮಾಂಸೆ, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರ ಬರವಣಿಗೆಯಲ್ಲಿ ಸ್ಥಳೀಯತೆಯ ಜತೆಗೆ ರಾಷ್ಟ್ರೀಯತೆ ಹಾಗೂ ಅಂತರರಾಷ್ಟ್ರೀಯತೆಯೂ ಅಡಗಿದೆ’ ಎಂದು ಹೇಳಿದರು.

‘ಕುವೆಂಪು ಅವರು ಏಕಕಾಲದಲ್ಲಿ ಕನ್ನಡಿಗನೂ ಆಗುತ್ತಾ, ಭಾರತೀಯನೂ ಆಗುತ್ತಾ ವಿಶ್ವಮಾನವತೆಯನ್ನು ಪ್ರತಿಪಾದಿಸಿದರು. ಆದ್ದರಿಂದ, ವಿಶ್ವಕವಿ ಆಗುವಂತಹ ವಿಚಾರವಾದಿ ಅವರಾಗಿದ್ದರು. ಜಾತ್ಯತೀತ ಮನೋಧರ್ಮದ ಅವರು, ಎಲ್ಲರನ್ನೂ ಒಳಗೊಳ್ಳುವ ಕ್ರಿಯೆಯಿಂದಲೇ ಹೊಸ ವಿಚಾರಧಾರೆ ಹುಟ್ಟುಹಾಕಿದರು’ ಎಂದು ತಿಳಿಸಿದರು.

‘ವ್ಯಕ್ತಿಯೊಬ್ಬ ಸಾಂಸ್ಥಿಕ ಧರ್ಮದಲ್ಲಿ ಇರುವುದು, ಮಾನಸಿಕವಾಗಿ ಧಾರ್ಮಿಕನಾಗುವುದು ಬೇರೆ. ನಿಜವಾದ ಭಕ್ತಿಗೆ ಬೈಲಾ ಇರುವುದಿಲ್ಲ. ಸಾಂಸ್ಥಿಕ ಧರ್ಮವು ಹೀಗೆ ಪೂಜೆ ಮಾಡಬೇಕು, ಹೀಗೆ ಪೂಜೆ ಮಾಡಿದರೆ ದೇವರು ಒಲಿಯಲು ಸಾಧ್ಯ ಎಂದು ಹೇಳುತ್ತದೆ. ಆದರೆ, ಧಾರ್ಮಿಕತೆಯಲ್ಲಿ ಅದಕ್ಕೆ ಬೈಲಾ ಹಾಗೂ ನಿಯಂತ್ರಣ ಇರುವುದಿಲ್ಲ’ ಎಂದರು.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT